ಬಾದಾಮಿ: ಮುಂಗಾರು ಮಳೆ ಕೊರತೆಯಿಂದ ಬಿತ್ತನೆಯಾದ ಬೆಳೆಗಳು ಬಿಸಿಲಿಗೆ ಬತ್ತಿವೆ. ಭವಿಷ್ಯದಲ್ಲಿ ರೈತರಿಗೆ ಬರದ ಕಾರ್ಮೋಡ ಕವಿದಿದೆ.
ಜೂನ್ ಮೊದಲ ವಾರದಲ್ಲಿ ಬಿತ್ತನೆಯಾದ ಬೆಳೆಗಳು ಮೊಳಕೆಯೊಡೆದಿವೆ. ಆದರೆ, ಬೆಳೆದ ಮೂರು ವಾರಗಳ ಕಾಲ ಮುಂಗಾರು ಬೆಳೆಗೆ ಅತಿಯಾದ ಸುಡುಬಿಸಿಲಿನ ಹೊಡೆತದಿಂದ ಮಳೆಯಾಶ್ರಿತ ಹೆಸರು, ಸಜ್ಜೆ, ಮೆಕ್ಕಜೋಳ, ತೊಗರಿ, ಅಲಸಂದಿ, ಶೇಂಗಾ ಮತ್ತು ಸೂರ್ಯಕಾಂತಿ ಬೆಳೆಗಳು ಬಾಡಿವೆ.
ರೈತರು ಹೊಲಗಳ ರೆಂಟೆ ಹೊಡೆದು ಹಸನು ಮಾಡಿ ಬೀಜ, ಗೊಬ್ಬರ ಹಾಕಿ ಬಿತ್ತಿ ಮಳೆಯ ದಾರಿಯನ್ನೇ ನೋಡುತ್ತ ಕೈಕಟ್ಟಿ ಕುಳಿತುಕೊಂಡಿದ್ದಾರೆ. ಬಿತ್ತಿದ ಬೆಳೆ ನೋಡಲು ಹೊಲದ ಕಡೆಗೆ ರೈತರು ಮುಖ ಮಾಡದಂತಾಗಿದೆ.
ಗಾಳಿಗೆ ಚಿಕ್ಕ ಚಿಕ್ಕ ಸಸಿಗಳು ಕಿತ್ತು ಹೋಗುತ್ತಿವೆ. ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣವಿದ್ದು ಮೋಡಗಳು ಆಕಾಶದಲ್ಲಿ ಗಾಳಿಗೆ ತೇಲಿ ಹೋಗುತ್ತಿವೆ. ' ಮೋಡಗಳೇ ನಿಂತು ಮಳೆ ಹನಿ ಸುರಿಸಿ ಹೋಗಿ ' ಎಂದು ರೈತರು ಮಳೆರಾಯನಿಗೆ ಬೇಡಿಕೊಳ್ಳುತ್ತಿದ್ದಾರೆ. ಅಲ್ಲಲ್ಲಿ ಕೆಲವು ನಿಮಿಷ ಜಿಟಿ ಜಿಟಿ ಮಳೆಯಾಗುತ್ತಿದ್ದರೂ ಬೆಳೆಗೆ ಸಾಕಾಗದಂತಾಗಿದೆ.
ಮುಂಗಾರು ಹಂಗಾಮಿನ ಒಟ್ಟು 55102 ಹೆಕ್ಟೇರ್ ಕ್ಷೇತ್ರದ ಪೈಕಿ 37651 ಹೆಕ್ಟೇರ್ ಕ್ಷೇತ್ರ ಮಾತ್ರ (ಶೇ 67.47) ಬಿತ್ತನೆಯಾಗಿದೆ. ಸಂಪೂರ್ಣ ಮಳೆಯಾಗದ ಕಾರಣ ಇನ್ನೂ ಬಿತ್ತನೆಯಾಗುವ ಕ್ಷೇತ್ರ ಉಳಿದಿದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಬೇಲೂರು, ಹೊಸೂರ, ಢಾಣಕಶಿರೂರ, ಮಣ್ಣೇರಿ ನಸಗುನ್ನಿ, ಗಿಡ್ಡನಾಯಕನಾಳ, ಅನಂತಗಿರಿ, ಗುಡ್ಡದ ಮಲ್ಲಾಪೂರ, ಜಾಲಿಹಾಳ ಮುಂತಾದ ಗ್ರಾಮಗಳ ಪ್ರದೇಶದಲ್ಲಿ ಮಳೆ ಬಾರದ ಕಾರಣ ಬೆಳಗಳು ಒಣಗಲು ಆರಂಭಿಸಿವೆ.
' ಮೂರು ವಾರಾತು ಮಳೀನ ಇಲ್ಲ. ಮಳೀ ಆಗಲಾರದಕ್ಕ ಎಲ್ಲಾ ಹೆಸರು, ಗೊಂಜ್ವಾಳ ಮತ್ತು ಸೂರ್ಯಪಾನ ಬೆಳಿ ಬಿಸಲೀಗೆ ಸುಟಗೊಂಡ ಹೊಂಟಾವು. ರೈತರ ಬಾಳೆ ಚೊಲೊ ಇಲ್ಲ ಏನು ಮಾಡೂದ ಅಂತ ತಿಳಿವಲ್ಲದು' ಎಂದು ಢಾಣಕಶಿರೂರ ಗ್ರಾಮದ ರೈತ ಯಲ್ಲಪ್ಪ ಮುದೇನಗುಡಿ ನೋವನ್ನು ವ್ಯಕ್ತಪಡಿಸಿದರು.
'ನಂದಿಕೇಶ್ವರ, ಬಾಚಿನಗುಡ್ಡ, ಪಟ್ಟದಕಲ್ಲು, ಬಿ.ಎಸ್.ಜಾಲಿಹಾಳ ಗ್ರಾಮಗಳ ಸುತ್ತ ರೈತರು ಉಳ್ಳಾಗಡ್ಡಿ ಬಿತ್ತನೆ ಮಾಡಿದ್ದು ಸರಿಯಾಗಿ ಹುಟ್ಟಲಾರದ ಕಾರಣ ರೈತರು ಬೆಳೆಯನ್ನು ಹರಗಿದ್ದಾರೆ. ಕಂಪನಿಯವರು ಕಳಪೆ ಬೀಜ ಕೊಟ್ಟಿದ್ದಾರೆ ' ಎಂದು ರೈತ ಬಸವಂತಪ್ಪ ಆರೋಪಿಸಿದರು.
'ಮುಂಗಾರು ಬಿತ್ತನೆಯಾದ ನಂತರ ಮಳೆಯ ಕೊರತೆಯಿಂದ ಬೆಳೆಗೆ ತೇವಾಂಶ ಕಡಿಮೆಯಾಗಿದ್ದರಿಂದ ಬೆಳೆಗಳು ಬಾಡಲು ಆರಂಭಿಸಿವೆ' ಎಂದು ಸಹಾಯಕ ಕೃಷಿ ನಿರ್ದೇಶಕ ಅಶೋಕ ತಿರಕಣ್ಣವರ ಪ್ರತಿಕ್ರಿಯಿಸಿದರು.

