Dailyhunt Logo
  • Light mode
    Follow system
    Dark mode
    • Play Story
    • App Story
ಮಳೆ ಕೊರತೆ: ಹಿಂಗಾರು ಬಿತ್ತನೆಗೂ ಅಡ್ಡಿ

ಮಳೆ ಕೊರತೆ: ಹಿಂಗಾರು ಬಿತ್ತನೆಗೂ ಅಡ್ಡಿ

ಗುರುಪ್ರಸಾದ ಮೆಂಟೇ

ಹುಲಸೂರು: ಮುಂಗಾರು ಮಳೆ ಕೈಕೊಟ್ಟ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲಿಯೂ ಮಳೆಯ ಕೊರತೆ ಎದುರಾಗಿದ್ದು, ತಾಲ್ಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಣ್ಣಿನಲ್ಲಿ ಅಗತ್ಯ ತೇವಾಂಶವಿಲ್ಲದಿದ್ದರೂ ಹಂಗಾಮು ಕೈಮೀರಬಾರದೆಂಬ ಕಾರಣಕ್ಕೆ ರೈತರು ಕಡಲೆ, ಜೋಳ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಗೆ ಮುಂದಾಗಿದ್ದಾರೆ.

ಮಳೆಯಿಲ್ಲದೆ ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿರುವುದರಿಂದ ಬಿತ್ತನೆ ಮಾಡಿದ ಬೀಜಗಳು ಮೊಳಕೆಯೊಡೆಯದಿರುವ ಅಥವಾ ಮೊಳಕೆಯೊಡೆದ ಎಳೆಯ ಸಸಿಗಳು ಒಣಗುವ ಆತಂಕ ಎದುರಾಗಿದೆ. ಬಿತ್ತನೆಗೆ ಅನುಕೂಲಕರವಾದ ಮಳೆಯಾಗದಿರುವುದು ರೈತರ ಚಿಂತೆಯನ್ನು ಹೆಚ್ಚಿಸಿದೆ.

ಕೃಷಿ ಅಧಿಕಾರಿ ಆಕಾಶ ಅವರ ಮಾಹಿತಿಯಂತೆ, ತಾಲ್ಲೂಕಿನಲ್ಲಿ ಈವರೆಗೆ ಅಂದಾಜು 250 ಎಕರೆ ಪ್ರದೇಶದಲ್ಲಿ ಕಡಲೆ ಹಾಗೂ 50 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆ ಮಾಡಲಾಗಿದೆ. ಆದರೆ ಮಣ್ಣಿನಲ್ಲಿ ತೇವಾಂಶದ ಕೊರತೆಯಿರುವುದರಿಂದ ಬೆಳೆಗಳ ಬೆಳವಣಿಗೆಗೆ ತೊಂದರೆಯಾಗುವ ಸಾಧ್ಯತೆಯಿದೆ.

ಈಗಾಗಲೇ ಬಿತ್ತನೆ ಬೀಜ, ರಸಗೊಬ್ಬರ, ಟ್ರ್ಯಾಕ್ಟರ್ ಬಾಡಿಗೆ, ಕಾರ್ಮಿಕರ ಕೂಲಿ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ರೈತರು ಹಣ ಖರ್ಚು ಮಾಡಿದ್ದಾರೆ. ಮಳೆ ಬಾರದೆ ಬೀಜಗಳು ಮೊಳಕೆಯೊಡೆಯದಿದ್ದರೆ ಮರುಬಿತ್ತನೆ ಮಾಡಬೇಕಾಗುತ್ತದೆ. ಇದರಿಂದ ಕೃಷಿ ವೆಚ್ಚ ಮತ್ತಷ್ಟು ಹೆಚ್ಚಾಗಲಿದೆ.

ತೊಗರಿ, ಕಬ್ಬಿಗೂ ಸಂಕಷ್ಟ: ಮುಂಗಾರು ಮಳೆ ಕೊರತೆಯಿಂದ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ತೊಗರಿ ಬೆಳೆ ಒಣಗುತ್ತಿದೆ. ಕಬ್ಬು, ತರಕಾರಿ ಹಾಗೂ ತೋಟಗಾರಿಕೆ ಬೆಳೆಗಳ ಮೇಲೂ ಮಳೆಯ ಅಭಾವ ಮತ್ತು ಬಿಸಿಲಿನ ತೀವ್ರತೆ ಪರಿಣಾಮ ಬೀರಿದೆ. ಬೆಳೆಗಳ ಬೆಳವಣಿಗೆ ಕುಂಠಿತವಾಗಿದ್ದು, ಇಳುವರಿ ಕುಸಿಯುವ ಆತಂಕ ಎದುರಾಗಿದೆ.

ಕೆಲವು ರೈತರು ಕೊಳವೆಬಾವಿ ಹಾಗೂ ಇತರ ನೀರಾವರಿ ಸೌಲಭ್ಯಗಳ ಮೂಲಕ ಬೆಳೆಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಎಲ್ಲ ಜಮೀನುಗಳಿಗೂ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಮಳೆ ಕೊರತೆ ಮುಂದುವರಿದರೆ ಅಂತರ್ಜಲ ಮಟ್ಟ ಕುಸಿದು ಕೊಳವೆಬಾವಿಗಳಲ್ಲಿಯೂ ನೀರಿನ ಅಭಾವ ಉಂಟಾಗುವ ಭೀತಿ ಇದೆ.

ಮಳೆಯಾಶ್ರಿತ ಕೃಷಿಯನ್ನೇ ಅವಲಂಬಿಸಿರುವ ರೈತರ ಪರಿಸ್ಥಿತಿ ಮತ್ತಷ್ಟು ಕಠಿಣವಾಗಿದೆ. ಮುಂಗಾರು ಬೆಳೆ ನಷ್ಟದ ಜತೆಗೆ ಹಿಂಗಾರು ಬಿತ್ತನೆಗೂ ಹಣ ಹೂಡಿರುವ ರೈತರು, ಫಸಲು ಕೈಗೆ ಸಿಗದಿದ್ದರೆ ಸಾಲ ಮರುಪಾವತಿ ಹೇಗೆ ಎಂಬ ಚಿಂತೆಯಲ್ಲಿದ್ದಾರೆ. ಬೆಳೆ ನಷ್ಟದಿಂದ ಕೃಷಿ ಕಾರ್ಮಿಕರಿಗೆ ಕೆಲಸದ ಅಭಾವ ಹಾಗೂ ಜಾನುವಾರುಗಳಿಗೆ ಮೇವು ಒದಗಿಸುವ ಸಮಸ್ಯೆಯೂ ಎದುರಾಗುವ ಸಾಧ್ಯತೆಯಿದೆ.

ಬರ ಪರಿಹಾರಕ್ಕೆ ಅನ್ನದಾತರ ಆಗ್ರಹ

ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಅನುಭವಿಸಿರುವ ರೈತರು ಸರ್ಕಾರದ ಬರ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಹಿಂಗಾರು ಹಂಗಾಮಿನಲ್ಲಿಯೂ ಮಳೆ ಕೊರತೆ ಮುಂದುವರಿದಿರುವುದರಿಂದ ಕೃಷಿ ಇಲಾಖೆ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿ ಪರಿಶೀಲಿಸಬೇಕು. ಹಾನಿಗೊಳಗಾದ ಬೆಳೆಗಳ ಸಮೀಕ್ಷೆ ನಡೆಸಿ ನಷ್ಟದ ಪ್ರಮಾಣ ಅಂದಾಜಿಸಬೇಕು. ಅರ್ಹ ರೈತರಿಗೆ ಸರ್ಕಾರದ ನಿಯಮಾನುಸಾರ ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಹಿಂಗಾರು ಬಿತ್ತನೆ ಹಾಗೂ ಬೆಳೆ ಸಂರಕ್ಷಣೆಗೆ ಅಗತ್ಯ ಮಾರ್ಗದರ್ಶನ ನೀಡಬೇಕು. ನೀರಾವರಿ ಸೌಲಭ್ಯ ಕಲ್ಪಿಸುವ ಸಾಧ್ಯತೆ ಪರಿಶೀಲಿಸುವುದರ ಜತೆಗೆ ಅಗತ್ಯವಿರುವ ಕಡೆ ಜಾನುವಾರುಗಳಿಗೆ ಮೇವು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹವಾಗಿದೆ.

ಬಿತ್ತನೆ ಬೀಜ, ಗೊಬ್ಬರ ಹಾಗೂ ಕೃಷಿ ಚಟುವಟಿಕೆಗಳಿಗೆ ಹಣ ಖರ್ಚು ಮಾಡಿದ್ದೇವೆ. ಮಳೆಯಿಲ್ಲದೆ ಬೆಳೆಗಳು ಒಣಗುತ್ತಿದ್ದು, ಸಾಲ ತೀರಿಸುವುದೇ ಚಿಂತೆಯಾಗಿದೆ. ಸರ್ಕಾರ ನೆರವು ನೀಡಬೇಕು

ದೇವೇಂದ್ರ ಹಾಲಿಂಗೆ ರೈತ

261103-33-937428323

Dailyhunt
Disclaimer: This content has not been generated, created or edited by Dailyhunt. Publisher: Prajavani