ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ನ.6ರಿಂದ 10ರವರೆಗೆ ಐದು ದಿನಗಳ ಕಾಲ ದೀಪಾವಳಿ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಲಿದೆ. ಜಾತ್ರೆಗೆ ನಾಡಿನ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಕ್ಷೇತ್ರದಲ್ಲಿ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ.
ಸಂಪ್ರದಾಯದಂತೆ ದೀಪಾವಳಿ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಕ್ಷೇತ್ರದ ಧಾರ್ಮಿಕ ಪರಂಪರೆ, ಸಂಪ್ರದಾಯ ಹಾಗೂ ಆಚರಣೆಗಳ ಪ್ರತೀಕವಾಗಿರುವ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ನಾಡಿನ ಎಲ್ಲೆಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ.
ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಬೆಳಿಗ್ಗೆ ರಥ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಪೂಜೆ ಸಲ್ಲಿಸಿ ರಥ ನಿರ್ಮಾಣ ಕಾರ್ಯದ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದರು. ಈ ಸಂದರ್ಭ ದೇಗುಲದ ಅರ್ಚಕರು, ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ ಉಪಸ್ಥಿತರಿದ್ದರು.
6ರಂದು ಜಾತ್ರಾ ಮಹೋತ್ಸವದ ಧಾರ್ಮಿಕ ವಿಧಿವಿಧಾನಗಳು ಸಂಪ್ರದಾಯಬದ್ಧವಾಗಿ ಆರಂಭವಾಗಲಿವೆ. ಮಹದೇಶ್ವರನ ಸನ್ನಿಧಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದ್ದು ಮಾದಪ್ಪನಿಗೆ ವಿಶೇಷ ಪೂಜೆ, ನೈವೇದ್ಯ ಸಮರ್ಪಣೆ ಹಾಗೂ ಉತ್ಸವ ಜರುಗಲಿದೆ.
7ರಂದು ಮಾದಪ್ಪನಿಗೆ ಎಣ್ಣೆ ಮಜ್ಜನ ಸೇವೆ ನಡೆಯಲಿದೆ. ಈ ಪೂಜಾ ಕೈಂಕರ್ಯವು ಜಾತ್ರಾ ಮಹೋತ್ಸವದ ಪ್ರಮುಖ ಸಂಪ್ರದಾಯಗಳಲ್ಲಿ ಒಂದು.
8ರಂದು ನರಕ ಚತುರ್ದಶಿ ವಿಶೇಷ ಪೂಜೆ ನಡೆಯಲಿದ್ದು ದೇವರಿಗೆ ನೈವೇದ್ಯ ಸಮರ್ಪಣೆ ಹಾಗೂ ವಿವಿಧ ಧಾರ್ಮಿಕ ಸೇವೆಗಳು ಜರುಗಲಿವೆ. ದೀಪಾವಳಿಯ ಧಾರ್ಮಿಕ ಮಹತ್ವ ಸಾರುವ ಈ ದಿನ ದೇವರ ದರ್ಶನ ಪಡೆಯುವುದು ಶ್ರೇಷ್ಠ ಎಂಬ ನಂಬಿಕೆ ಇದೆ.
9ರಂದು ಅಮಾವಾಸ್ಯೆ ಹಾಗೂ ಹಾಲರವಿ ಉತ್ಸವ ನೆರವೇರಲಿದ್ದು ಅಂದು ಬೆಳಿಗ್ಗೆ 9.30ಕ್ಕೆ ಸಾಲೂರು ಶ್ರೀಗಳ ಉಪಸ್ಥಿತಿಯಲ್ಲಿ ಧಾರ್ಮಿಕ ಆಚರಣೆಗಳು, ವಿಜೃಂಭಣೆಯ ಹಾಲರವಿ ಉತ್ಸವ ನಡೆಯಲಿದೆ. ಹಾಲರವಿ ಉತ್ಸವವು ಮಹದೇಶ್ವರ ಸನ್ನಿಧಾನದಲ್ಲಿ ನಡೆಯುವ ಸಂಪ್ರದಾಯ ಹಾಗೂ ಭಕ್ತಿ ಪರಂಪರೆಯ ವಿಶೇಷ ಆಚರಣೆಯಾಗಿದೆ.
10ರಂದು ಪ್ರಮುಖ ಘಟ್ಟವಾದ ಮಲೆ ಮಹದೇಶ್ವರ ಸ್ವಾಮಿಯ ಮಹಾರಥೋತ್ಸವ ಜರುಗಲಿದೆ. ಅಂದು ಬೆಳಿಗ್ಗೆ 7.30ರಿಂದ 8.40ರೊಳಗೆ ಶುಭ ಮುಹೂರ್ತದಲ್ಲಿ ವೈಭವದ ರಥೋತ್ಸವ ನಡೆಯಲಿದ್ದು ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ದೇವಸ್ಥಾನದ ಸುತ್ತಲೂ ರಥ ಚಲಿಸಲಿದೆ. ಮಹಾರಥೋತ್ಸವವನ್ನು ಕಣ್ತುಂಬಿಕೊಳ್ಳಲು ಹೊರ ಜಿಲ್ಲೆ ಸೇರಿದಂತೆ ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ.
ಮಹಾರಥೋತ್ಸವದ ಬಳಿಕ ಗುರುಬ್ರಹ್ಮೋತ್ಸವ ಹಾಗೂ ಅನ್ನಬ್ರಹ್ಮೋತ್ಸವ ನಡೆಯಲಿದ್ದು, ರಾತ್ರಿ ಮಹಾ ನೈವೇದ್ಯದ ನಂತರ ತೆಪ್ಪೋತ್ಸವ ಜರುಗಲಿದೆ. ಇದರೊಂದಿಗೆ ಐದು ದಿನಗಳ ದೀಪಾವಳಿ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.
ಲಕ್ಷಾಂತರ ಭಕ್ತರ ಆಗಮನ ನಿರೀಕ್ಷೆ
ಮಲೆ ಮಹದೇಶ್ವರನ ದೇವಸ್ಥಾನವು ಪ್ರಮುಖ ಧಾರ್ಮಿಕ ಯಾತ್ರಾಸ್ಥಳವಾಗಿದ್ದು ಪ್ರತಿನಿತ್ಯ ಸಹಸ್ರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ಮಾದಪ್ಪನ ದರ್ಶನ ಪಡೆಯುತ್ತಾರೆ.
ಪ್ರತಿವರ್ಷ ನಡೆಯುವ ದೀಪಾವಳಿ ಜಾತ್ರಾ ಮಹೋತ್ಸವದಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತದೆ. ಬರುವ ಭಕ್ತರಿಗೆ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗಿದೆ.
ದರ್ಶನ, ಕುಡಿಯುವ ನೀರು, ಶೌಚಾಲಯ ಸಹಿತ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
261103-37-1360145889

