Dailyhunt Logo
  • Light mode
    Follow system
    Dark mode
    • Play Story
    • App Story
ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಕೆನ್ನಾಯಿಗಳ ದರ್ಶನ: ಪ್ರಾಣಿಪ್ರಿಯರಲ್ಲಿ ಪುಳಕ

ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಕೆನ್ನಾಯಿಗಳ ದರ್ಶನ: ಪ್ರಾಣಿಪ್ರಿಯರಲ್ಲಿ ಪುಳಕ

ನೂರು: ಅಸಂಖ್ಯ ಜೀವವೈವಿಧ್ಯವನ್ನು ಒಡಲೊಳಗಿಟ್ಟುಕೊಂಡು ಪೋಷಿಸುತ್ತಿರುವ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಕೆನ್ನಾಯಿಗಳ ಆವಾಸ ಹೆಚ್ಚಾಗಿರುವುದು ಪ್ರಾಣಿಪ್ರಿಯರ ಸಂತಸಕ್ಕೆ ಕಾರಣವಾಗಿದೆ.

ಈಚೆಗಷ್ಟೇ ಎಂ.ಎಂ. ಹಿಲ್ಸ್ ವನ್ಯಧಾಮದಲ್ಲಿ ರಣಹದ್ದುಗಳ ಸಂತತಿ ಹೆಚ್ಚಾಗುತ್ತಿರುವುದು ಕಂಡುಬಂದ ಬೆನ್ನಲ್ಲೇ ಕೆನ್ನಾಯಿಗಳೂ ಹೆಚ್ಚಾಗಿ ಕಾಣಸಿಗುತ್ತಿವೆ.

ವನ್ಯಜೀವಿ ಸಂರಕ್ಷಣೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಪಟ್ಟ ಪ್ರಾಣಿ ಎಂದೇ ಬಿಂಬಿಸಲಾಗಿರುವ ಕೆನ್ನಾಯಿಗಳನ್ನು ಕಾಡು ನಾಯಿ, ಸೀಳುನಾಯಿ ಎಂದು ಸ್ಥಳೀಯವಾಗಿ ಕರೆಯಲಾಗುತ್ತದೆ.

ಹುಲಿ, ಚಿರತೆ ಆನೆಗಳಿಗಿಂತಲೂ ಅಳಿವಿನಂಚಿನಲ್ಲಿರುವ ಪ್ರಾಣಿ ಎಂದು ಕೆನ್ನಾಯಿಗಳನ್ನು ಗುರುತಿಸಲಾಗಿದೆ. ಬಂಡೀಪುರ ಹಾಗೂ ಬಿಳಿಗಿರಿ ರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಅರಣ್ಯ, ಮಲೆ ಮಹದೇಶ್ವರ ಹಾಗೂ ಕಾವೇರಿ ವನ್ಯಜೀವಿ ಧಾಮಗಳಲ್ಲಿ ಕೆನ್ನಾಯಿಗಳ ಆವಾಸ ಕಾಣಬಹುದು.

ಅತ್ಯಂತ ಸೂಕ್ಷ್ಮ ಸಂವೇದನೆಯ ಜೀವಿಗಳು ಎಂದು ಕರೆಯುವ ಕೆನ್ನಾಯಿಗಳು ಸಾಮಾನ್ಯವಾಗಿ ಗುಂಪುಗಳಾಗಿ ವಾಸಿಸುತ್ತವೆ. ಒಂದು ಗುಂಪಿನಲ್ಲಿ 15 ರಿಂದ 20 ಕೆನ್ನಾಯಿಗಳು ಕಂಡುಬರುತ್ತವೆ. ಕೆನ್ನಾಯಿಗಳು ಕಾಡು ಹೊರತಾಗಿ ಬೇರೆಲ್ಲೂ ಹೆಚ್ಚಾಗಿ ವಾಸಿಸುವುದಿಲ್ಲ. ಮನುಷ್ಯರು ಇರುವ ಕಡೆಗಳಲ್ಲಂತೂ ಅವುಗಳು ಸುಳಿಯುವುದಿಲ್ಲ ಎನ್ನುತ್ತಾರೆ ತಜ್ಞರು.

ಮಲೆ ಮಹದೇಶ್ವರ ವನ್ಯಧಾಮದಲ್ಲಿ ಈಚೆಗೆ ಕೆನ್ನಾಯಿಗಳು ಗಣನೀಯವಾಗಿ ಹೆಚ್ಚಾಗುತ್ತಿದೆ. ಹನೂರು ಹಾಗೂ ಪಿ.ಜಿ. ಪಾಳ್ಯ ಸಫಾರಿಯಲ್ಲಿ ಆಗಾಗ ಪ್ರವಾಸಿಗರಿಗೆ ದರ್ಶನ ನೀಡುತ್ತಿರುತ್ತವೆ. ಹುಲಿ, ಜಿಂಕೆ, ಕಾಡೆಮ್ಮೆ, ಆನೆಗಳಂತೆ ಸಫಾರಿ ಮಾರ್ಗದಲ್ಲಿ ಕಾಣಿಸಿಕೊಳ್ಳುವ ಕೆನ್ನಾಯಿಗಳು ಪ್ರಾಣಿಪ್ರಿಯರ ಗಮನ ಸೆಳೆಯುತ್ತಿವೆ.

ಅಪಾಯದ ಅಂಚಿನಲ್ಲಿ ಕೆನ್ನಾಯಿ: ಜನಸಾಮಾನ್ಯರಿಂದ ದೂರದಲ್ಲಿ ವಾಸಿಸುವ ಕೆನ್ನಾಯಿಗಳ ಸಂಸತಿ ಅಪಾಯದಲ್ಲಿದೆ. ಮಲೆ ಮಹದೇಶ್ವರ ವನ್ಯಧಾಮದೊಳಗೆ ಹಾಗೂ ಅಂಚಿನಲ್ಲಿ 18 ಗ್ರಾಮಗಳಿದ್ದು, ಇಲ್ಲಿ ವಾಸವಿರುವ ಬೀದಿನಾಯಿಗಳಿಗೆ ಕಾಣಿಸಿಕೊಳ್ಳುವ ಸೋಂಕು ಕಾಡಿನೊಳಗಿರುವ ಕೆನ್ನಾಯಿಗಳಿಗೂ ತಗುಲುತ್ತಿದ್ದು , ಅವುಗಳ ಪ್ರಾಣಕ್ಕೆ ಕುತ್ತು ಎದುರಾಗುತ್ತಿದೆ.

ಮಲೆಮಹದೇಶ್ವರ ವನ್ಯಧಾಮದ ಸಂತೇಖಾನೆ ನರ್ಸರಿ ಬಳಿ ಕಳೆದ ಮಾರ್ಚ್‌ನಲ್ಲಿ 'ಕೆನೈನ್ ಡಿಸ್ಟಂಪರ್' ಎಂಬ ರೋಗದಿಂದ ಮೂರು ಕೆನ್ನಾಯಿಗಳು ಮೃತಪಟ್ಟಿದ್ದವು. ಗ್ರಾಮಗಳಿಂದ ಕಾಡೊಳಗೆ ಹಾಗೂ ಅಂಚಿನಲ್ಲಿ ಓಡಾಡುವ ನಾಯಿಗಳಿಂದ ಸೋಂಕು ಕೆನ್ನಾಯಿಗಳಿಗೆ ತಗುಲಿ ಮೃತಪಟ್ಟ ಅಂಶ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿತ್ತು.

ತೀವ್ರ ನಿಗಾ: ಕೆನ್ನಾಯಿಗಳ ಸಾವಿನ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ಅರಣ್ಯದಂಚಿನ ಭಾಗಗಳ ಮೇಲೆ ತೀವ್ರ ನಿಗಾ ಇರಿಸಿದೆ. 'ಗ್ರಾಮಗಳಿಂದ ಬೀದಿನಾಯಿಗಳು ಕಾಡೊಳಗೆ ನುಸುಳದಂತೆ ಕ್ರಮ ವಹಿಸಲಾಗಿದೆ. ಕಾಡಿನೊಳಗೆ ಹಸುಗಳನ್ನು ಮೇಯಿಸಲು ಬರುವ ದನಗಾಹಿಗಳು ಜೊತೆಗೆ ನಾಯಿಗಳನ್ನು ಕರೆ ತರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ' ಎನ್ನುತ್ತಾರೆ ಅಧಿಕಾರಿಗಳು.

ಮಲೆ ಮಹದೇಶ್ವರ ವನ್ಯಧಾಮದ ಬಹುತೇಕ ಭಾಗಗಳಲ್ಲಿ ಕೆನ್ನಾಯಿಗಳ ಗುಂಪು ಕಾಣಿಸಿಕೊಳ್ಳುತ್ತಿವೆ. ಬೀದಿನಾಯಿಗಳಿಂದ ಕೆನ್ನಾಯಿಗಳಿಗೆ ತೊಂದರೆಯಾಗದಂತೆ ತಡೆಯಲು ಪಶು ಸಂಗೋಪನಾ ಇಲಾಖೆಯಿಂದ ಕಾಡಂಚಿನಲ್ಲಿರುವ ನಾಯಿಗಳಿಗೆ ಚುಚ್ಚುಮದ್ದು ಕೊಡಿಸಲಾಗುತ್ತಿದೆ. ಸಾಮಾನ್ಯವಾಗಿ ಕೆನ್ನಾಯಿಗಳು ವಾಸವಿರುವ ಕಾಡು ಸಮೃದ್ಧಿವಾಗಿರುತ್ತದೆ ಎನ್ನುತ್ತಾರೆ ಮಲೆ ಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್.'ಬೀದಿನಾಯಿಗಳ ಮೇಲೆ ನಿಗಾ'

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260702-37-855552245

Dailyhunt
Disclaimer: This content has not been generated, created or edited by Dailyhunt. Publisher: Prajavani