Dailyhunt Logo
  • Light mode
    Follow system
    Dark mode
    • Play Story
    • App Story
ಮಳೆಯಿಲ್ಲ,ನೀರಿಲ್ಲ - ಹಳ್ಳಿ ಮಾರಾಟಕ್ಕಿಟ್ಟ ಗ್ರಾಮಸ್ಥರು

ಮಳೆಯಿಲ್ಲ,ನೀರಿಲ್ಲ - ಹಳ್ಳಿ ಮಾರಾಟಕ್ಕಿಟ್ಟ ಗ್ರಾಮಸ್ಥರು

ಸೋಲಾಪುರ (ಪಿಟಿಐ): 'ಗ್ರಾಮ ಮಾರಾಟಕ್ಕಿದೆ, ಬೆಲೆ: ನೀರು'

-ಹೀಗೊಂದು ಬ್ಯಾನರ್‌ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಾಧಾ ತಾಲ್ಲೂಕಿನ ತುಳಸಿ ಗ್ರಾಮದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ನೀರಿಗಾಗಿ ಹಂಬಲಿಸುತ್ತಾ, ತಮ್ಮ ಕೃಷಿ ಭೂಮಿ ಮತ್ತು ಬಾವಿಗಳು ಒಣಗುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಈ ಬ್ಯಾನರ್‌ ಹಾಕಿದ್ದಾರೆ.

ವಿಶೇಷವೆಂದರೆ, ತಮ್ಮ ಒಣಗಿದ ಹಳ್ಳಿಗೆ ಅವರು ನಿಗದಿಪಡಿಸಿರುವ ಏಕೈಕ ಬೆಲೆ 'ನೀರು'!

ದಶಕಗಳಿಂದ ಸರ್ಕಾರಗಳು ನೀಡಿದ ಭರವಸೆಗಳು ಮತ್ತು ಯೋಜನೆಗಳು ಕಾರ್ಯರೂಪಕ್ಕೆ ಬಾರದೇ ಇರುವುದರಿಂದ ಗ್ರಾಮದ ಸುಮಾರು ಏಳು ಸಾವಿರ ಮಂದಿಯು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

'ಗ್ರಾಮವು ಪ್ರತಿ ವರ್ಷ ನೀರಿನ ಅಭಾವ ಎದುರಿಸುತ್ತಿದೆ. ಸೀನಾ-ಮಾಧಾ ಉಪ ಏತ ನೀರಾವರಿ ಯೋಜನೆಯ ಕಾಲುವೆಗಳು ಗ್ರಾಮದ ಸಮೀಪದಲ್ಲೇ ಹಾದುಹೋಗಿವೆ. ಆದರೂ, ನಮಗೆ ಅದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ. 'ಗ್ರಾಮ ಮಾರಾಟಕ್ಕಿದೆ, ಬೆಲೆ: ನೀರು' ಎಂದು ಬ್ಯಾನರ್‌ ಹಾಕುವ ಮೂಲಕ, ನಾವು ನಮ್ಮ ದುಃಸ್ಥಿತಿ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದೇವೆ' ಎಂದು ತುಳಸಿ ಗ್ರಾಮದ ಸರ್‌ಪಂಚ್‌ ಶರದ್‌ ಮೋರೆ ತಿಳಿಸಿದ್ದಾರೆ.

'ಸೀನಾ-ಮಾಧಾ ಯೋಜನೆಯ ಏಳು ಮತ್ತು ಎಂಟನೇ ಹೊರಹರಿವಿನ ಬಳಿ ಸುಮಾರು 800 ಮೀಟರ್‌ಗಳಷ್ಟು ಅಗೆಯುವ ಕೆಲಸ ಕಳೆದ 26 ವರ್ಷಗಳಿಂದ ಕುಂಟುತ್ತಾ ಸಾಗಿದೆ. ಈ ಕಾಮಗಾರಿ ಪೂರ್ಣಗೊಂಡರೆ ಗ್ರಾಮದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ' ಎಂದು ಅವರು ಹೇಳಿದ್ದಾರೆ.

'ಗ್ರಾಮಸ್ಥರು ಟ್ಯಾಂಕರ್‌ ನೀರನ್ನೇ ಅವಲಂಬಿಸಿದ್ದಾರೆ. ಈ ಮುಂಗಾರಿನಲ್ಲಿ ಸಮರ್ಪಕ ಮಳೆ ಬಾರದಿರುವುದರಿಂದ ನೀರಿನ ಅಭಾವ ಮತ್ತಷ್ಟು ಉಲ್ಬಣಗೊಂಡಿದೆ. ಜಲ ಜೀವನ್‌ ಮಿಷನ್‌ ಯೋಜನೆಯಡಿ ಕಾಮಗಾರಿ ಕೈಗೊಂಡಿದ್ದರೂ, ಸ್ಥಳೀಯ ನೀರಿನ ಮೂಲವು ಒಣಗಿಹೋಗಿರುವುದರಿಂದ ಈ ಯೋಜನೆಯು ಪರಿಣಾಮಕಾರಿಯಾಗಿಲ್ಲ' ಎಂದು ತಿಳಿಸಿದ್ದಾರೆ.

ಶರದ್‌ ಮೋರೆ, ತುಳಸಿ ಗ್ರಾಮದ ಸರ್‌ಪಂಚ್‌ ಗ್ರಾಮದ ಯುವಕರಿಗೆ ಹೆಣ್ಣು ಕೊಡಲು ಯಾರೂ ಸಿದ್ಧರಿಲ್ಲ. ಸುಮಾರು 350 ಯುವಕರು ಅವಿವಾಹಿತರಾಗಿಯೇ ಉಳಿದಿದ್ದಾರೆ
Dailyhunt
Disclaimer: This content has not been generated, created or edited by Dailyhunt. Publisher: Prajavani