ಕಾರ್ಕಳ: 'ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ರ‍್ಯಾಲಿಯಲ್ಲಿ ಭಾಗವಹಿಸಿದ ಬಳಿಕ ಆ ಸ್ಥಳದಲ್ಲಿ ಬಿಜೆಪಿ ಪರ ಸಂಘಟನೆಗಳು ಪೂಜೆ, ಹವನ ನಡೆಸಿ 'ಶುದ್ಧೀಕರಣ' ಮಾಡಿರುವ ಘಟನೆ ಖಂಡನೀಯ' ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದರು ಎನ್ನುವ ಕಾರಣಕ್ಕೆ ಸ್ಥಳ 'ಶುದ್ಧೀಕರಣ' ಮಾಡಿರುವುದು ಅಸ್ಪೃಶ್ಯತೆಯನ್ನು ಪೋಷಿಸುತ್ತದೆ. ಜಾತಿ ಆಧಾರಿತ ಅಸ್ಪೃಶ್ಯತೆ, ತಾರತಮ್ಯದಂಥ ಇಂತಹ ಸಂವಿಧಾನ ವಿರೋಧಿ ಆಚರಣೆ ಅಮಾನವೀಯ. ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ, ರಾಜ್ಯ ಸಭೆ ವಿರೋಧ ಪಕ್ಷದ ನಾಯಕರಿಗೇ ಈ ಪರಿಸ್ಥಿತಿಯಾದರೆ ಸಾಮಾನ್ಯ ದಲಿತರ ಪಾಡನ್ನು ಊಹಿಸಿದರೆ ಆತಂಕವಾಗುತ್ತದೆ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 'ಕರ್ನಾಟಕದಲ್ಲೂ ದಲಿತ ಸಮುದಾಯದ ಪ್ರಮುಖ ನಾಯಕ ಪ್ರಿಯಾಂಕ್ ಖರ್ಗೆ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಾಗ ಬಿಜೆಪಿ, ಅದರ ಬೆಂಬಲಿಗರಿಂದ ರಾಜಕೀಯ ಟೀಕೆ, ವಿರೋಧ ಗಮನಿಸಿದಾಗ ದಲಿತ ನಾಯಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ರಾಜಕೀಯವನ್ನು ಪ್ರಶ್ನಿಸಬೇಕು. ದಲಿತರನ್ನು ಅವಮಾನಿಸುವವರಿಗೆ ನಮ್ಮ ಧಿಕ್ಕಾರವಿದೆ' ಎಂದಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260815-28-1585905515

