ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಕೆಲವೇ ದಿನಗಳಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದೊಳಗೆ ಆಂತರಿಕ ಬಿಕ್ಕಟ್ಟು ಉದ್ಭವವಾಗಿದೆ ಎಂದು ವರದಿಯಾಗಿದೆ.
ಸಂಸದರಾದ ಅಭಿಷೇಕ್ ಬ್ಯಾನರ್ಜಿ, ಕಲ್ಯಾಣ್ ಬ್ಯಾನರ್ಜಿ ಅವರ ಮೇಲೆ ಈಚೆಗೆ ಹಲ್ಲೆ ನಡೆದಿತ್ತು.
ಇದರ ಬೆನ್ನಲ್ಲೇ ಮಮತಾ ಬ್ಯಾನರ್ಜಿ ನಿವಾಸದಲ್ಲಿ ನಡೆಯಬೇಕಿದ್ದ ಟಿಎಂಸಿ ಶಾಸಕರ ಸಭೆಯನ್ನು ಬಹುಪಾಲು ಮಂದಿ ಗೈರಾಗಿದ್ದರಿಂದ ರದ್ದು ಮಾಡಲಾಗಿತ್ತು.
ಮಮತಾ ಬ್ಯಾನರ್ಜಿ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಈ ಸಭೆಗೆ ಒಟ್ಟು 80 ಶಾಸಕರ ಪೈಕಿ ನಾಲ್ಕನೇ ಮೂರರಷ್ಟು ಗೈರಾಗಿದ್ದರಿಂದ ಸಭೆಯನ್ನು ರದ್ದು ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿದ್ದವು.
'ಪಕ್ಷದ ಚಿಹ್ನೆಯಡಿ ಶಾಸಕರಾಗಿ ಚುನಾಯಿತರಾಗಿದ್ದರೂ ಪಕ್ಷದ ಸಭೆಗಳಿಗೆ ಪದೇ ಪದೇ ಗೈರಾಗುತ್ತಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಹಾಗೂ ಪಕ್ಷದ ಹಿತಾಸಕ್ತಿಗೆ ವಿರುದ್ಧವಾದ ಹೇಳಿಕೆಗಳನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣವೇ ಉಚ್ಚಾಟನೆ ಮಾಡಲು ನಿರ್ಧರಿಸಲಾಗಿದೆ' ಎಂದು ಪಕ್ಷದ ಉಪಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ತಿಳಿಸಿದ್ದಾರೆ.
ಟಿಎಂಸಿ ಇಬ್ಭಾಗವಾಗಲಿದೆಯೇ?
ಟಿಎಂಸಿಯಲ್ಲಿ ಭಿನ್ನಮತ ತಲೆದೋರಿದೆ ಎಂಬ ಊಹಾಪೋಹಗಳ ನಡುವೆಯೇ, 'ಹೆಚ್ಚಿನ ಶಾಸಕರು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜತೆಗಿದ್ದಾರೆ' ಎಂದು ಪಕ್ಷದ ಮುಖಂಡ ಶೋಭನ್ ದೇಬ್ ಚಟ್ಟೋಪಾಧ್ಯಾಯ ಹೇಳಿದ್ದಾರೆ. ಪಕ್ಷದಿಂದ ಉಚ್ಚಾಟನೆಗೊಂಡಿರುವ ಶಾಸಕ ರುತಬ್ರತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ಶಾಸಕರ ಒಂದು ಗುಂಪು ಬಂಡಾಯ ಏಳಲಿದೆ ಎಂಬ ವದಂತಿ ದಟ್ಟವಾಗಿ ಹರಡಿದೆ.
ಆಡಳಿತಾರೂಢ ಬಿಜೆಪಿಯು ವಿರೋಧ ಪಕ್ಷವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದೆ ಎಂದು ಶೋಭನ್ ಆರೋಪಿಸಿದ್ದಾರೆ. 'ಪಕ್ಷವನ್ನು ಒಡೆಯುವ ಪ್ರಯತ್ನ ಫಲಿಸದು. ಟಿಎಂಸಿಯು ಒಗ್ಗಟ್ಟಾಗಿ ಉಳಿದಿದೆ' ಎಂದು ಒತ್ತಿ ಹೇಳಿದ್ದಾರೆ.
ರುತಬ್ರತಾ ನೇತೃತ್ವದಲ್ಲಿ ಶಾಸಕರ ಒಂದು ಗುಂಪು ಕೋಲ್ಕತ್ತದ ಹೋಟೆಲ್ ಮತ್ತು ಎಂಎಲ್‌ಎ ಹಾಸ್ಟೆಲ್‌ನಲ್ಲಿ ಸರಣಿ ಸಭೆ ನಡೆಸಿದೆ ಎಂದು ವರದಿಯಾಗಿದೆ.
ಟಿಎಂಸಿಯು ಇಬ್ಭಾಗವಾಗಲಿದೆ ಎಂಬ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬೀಳದಿದ್ದರೂ, ಬಂಡಾಯ ಗುಂಪಿನ ಜತೆ 20ರಿಂದ 50 ಶಾಸಕರು ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಈಚೆಗೆ ನಡೆದ ಚುನಾವಣೆಯಲ್ಲಿ ಟಿಎಂಸಿ 80 ಸ್ಥಾನಗಳನ್ನು ಗೆದ್ದಿದೆ. ಆದರೆ, ಪಕ್ಷ ವಿರೋಧಿ ಚಟುವಟಿಕೆ ಅರೋಪದ ಮೇಲೆ ಇಬ್ಬರು ಶಾಸಕರನ್ನು (ರುತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ) ಸೋಮವಾರ ಉಚ್ಚಾಟಿಸಲಾಗಿದೆ.
ಹೊಸದೊಂದು ಟಿಎಂಸಿ ಉದಯಿಸಲಿದೆಯೇ?
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು (ಟಿಎಂಸಿ) ಇನ್ನು ಮುಂದೆ ಅಸ್ಥಿತ್ವದಲ್ಲಿ ಇರಲಾರದೇ?, ಹೊಸದೊಂದು ಟಿಎಂಸಿ ಬಣ ಉದಯಿಸಲಿದೆಯೇ?, ಇದು ಆಡಳಿತಾರೂಢ ಬಿಜೆಪಿಗೆ ಒಳ್ಳೆಯದೇ?, ಕೇಸರಿ ಪಕ್ಷವು ಟಿಎಂಸಿ ಇಬ್ಭಾಗವಾಗುವುದನ್ನು ಪ್ರೋತ್ಸಾಹಿಸುತ್ತದೆಯೇ ಅಥವಾ ಇಲ್ಲವೇ?, ಅಸಮಾಧಾನಿತ ಟಿಎಂಸಿ ಶಾಸಕರನ್ನು ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುತ್ತದೆಯೇ' ಎಂಬ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. 1998ರಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ನಿಂದ ವಿಭಜನೆಯಾಗಿ ರಚನೆಯಾಗಿದ್ದ ಟಿಎಂಸಿ ಪಕ್ಷವು, ಇದೀಗ ತನ್ನ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅನಿವಾರ್ಯ ವಿಭಜನೆಯತ್ತ ಮುಖ ಮಾಡಿದೆ.
ಮಮತಾ ಬ್ಯಾನರ್ಜಿ ನಿವಾಸದಲ್ಲಿ ಭಾನುವಾರ ಕರೆಯಲಾಗಿದ್ದ ಸಭೆಗೆ ಹೊಸದಾಗಿ ಚುನಾಯಿತರಾದ 80 ಶಾಸಕರ ಪೈಕಿ ಕೇವಲ 20 ಶಾಸಕರು ಮಾತ್ರ ಹಾಜರಾಗಿದ್ದರು. ಇವರೂ (ಸಭೆಯಲ್ಲಿ ಹಾಜರಿದ್ದವರು) ಅಸಮಾಧಾನಗೊಂಡಿದ್ದರೂ, ಧ್ವನಿ ಎತ್ತದಿರಲು ನಿರ್ಧರಿಸಿದ್ದರು. ಆದರೆ, ಮಮತಾ ಅವರು ಚುನಾವಣೆಯಲ್ಲಿ ಸೋತ ಬಳಿಕ ಪಕ್ಷದ ಸದಸ್ಯರ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಟಿಎಂಸಿ ಬಿಕ್ಕಟ್ಟಿಗೆ ಕಾರಣವೇನು?
294 ಸದಸ್ಯರ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರ ಆಪ್ತ ಶೋಭನ್ ದೇಬ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ ನಂತರ ಪಕ್ಷದೊಳಗಿನ ಕಲಹ ಬಹಿರಂಗವಾಗಿದೆ. ಮಮತಾ ನಿವಾಸದಲ್ಲಿ ನಡೆಯಬೇಕಿದ್ದ ಶಾಸಕರ ಸಭೆಗೆ ಹಾಜರಾಗದವರ 'ಸಹಿ' ಸಂಗ್ರಹಿಸಿದ್ದು, ಪತ್ರವನ್ನು ಸಭಾಪತಿಗೆ ಕಳುಹಿಸಲು ನಿರ್ಧರಿಸಿದ್ದರು ಎನ್ನಲಾಗಿದೆ.
ಚುನಾವಣೆಯಲ್ಲಿ ಟಿಎಂಸಿ ಗೆದ್ದಿರುವ 80 ಸ್ಥಾನಗಳಲ್ಲಿ ಮೂರನೇ ಎರಡರಷ್ಟು ಅಂದರೆ 53 ಸದಸ್ಯರ ಬೆಂಬಲ ಬಂಡಾಯಗಾರರಿಗೆ ಅಗತ್ಯವಿದೆ. ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ಭಾಗವಹಿಸಿದ್ದ ಸಭೆಗೆ ಬರೋಬ್ಬರಿ 60 ಶಾಸಕರು ಗೈರುಹಾಜರಾಗಿದ್ದರು. ಪಕ್ಷ ತೊರೆಯಲು ಇಚ್ಛಿಸುವವರು ಮುಕ್ತವಾಗಿ ಹೋಗಬಹುದು ಮತ್ತು ಇಂತಹ ಅವಕಾಶವಾದಿ ನಾಯಕರು ಪಕ್ಷ ಬಿಟ್ಟರೆ ಟಿಎಂಸಿಗೆ ಒಳ್ಳೆಯದು ಎಂದು ಮಮತಾ ಆಶಯ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಸುವೇಂದು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದಲ್ಲಿ ಸಚಿವರಾಗಿರುವ ತಾಪಸ್ ರಾಯ್ ಮಾತನಾಡಿ, 'ಟಿಎಂಸಿ ಇಬ್ಭಾಗವಾದರೆ ನನಗೆ ಸಂತೋಷ. ಆ ಪಕ್ಷ ಅಸ್ತಿತ್ವದಲ್ಲೇ ಇರುವುದಿಲ್ಲ' ಎಂದಿದ್ದಾರೆ.
ಟಿಎಂಸಿ ಶಾಸಕರ ದಂಗೆ
ರುತಬ್ರತಾ ಬ್ಯಾನರ್ಜಿ ನೇತೃತ್ವದಲ್ಲಿ ಟಿಎಂಸಿಯ 60 ಶಾಸಕರ ತಂಡವು ಸಭಾಪತಿ ರತೀಂದ್ರ ಬೋಸ್ ಅವರನ್ನು ಭೇಟಿ ಮಾಡಲು ಹೋಗಿತ್ತು. ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ಶಮಿಕ್ ಭಟ್ಟಾಚಾರ್ಯ ಅವರು ರಾಜ್ಯ ಪಕ್ಷದ ಘಟಕವನ್ನು ತೃಣಮೂಲೀಕರಣ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಟಿಎಂಸಿ ತೊರೆಯುವ ಎಲ್ಲಾ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ತಂತ್ರಗಾರಿಕೆ
ಬಿಜೆಪಿ ಟಿಎಂಸಿಯನ್ನು ಇಬ್ಭಾಗ ಮಾಡುವುದಕ್ಕಿಂತ ಹೆಚ್ಚಾಗಿ ದುರ್ಬಲಗೊಳಿಸಲು ಬಯಸುತ್ತಿದೆ. ಟಿಎಂಸಿ ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಉಳಿಯಬೇಕೆಂದೂ ಬಿಜೆಪಿ ಬಯಸುತ್ತದೆ. ಇದಕ್ಕೆ ಕಾರಣಗಳೂ ಇವೆ.
ಇಂದಿಗೂ ಅತ್ಯಂತ ಜನಪ್ರಿಯ ನಾಯಕಿಯಾಗಿರುವ ಮಮತಾ ಬ್ಯಾನರ್ಜಿ ಅವರ ರಾಜಕೀಯ ಶಕ್ತಿ ಮತ್ತು ಜನಸಾಮಾನ್ಯರ ಮೇಲಿನ ಹಿಡಿತದ ಬಗ್ಗೆ ಬಿಜೆಪಿಗೆ ತಿಳಿದಿದೆ. ಒಂದು ವೇಳೆ ಟಿಎಂಸಿ ವಿಭಜನೆಯಾಗಿ ಮಮತಾ ಅವರನ್ನು ಹೆಚ್ಚಾಗಿ ಬಿಂಬಿಸಿದರೆ, ಮುಂದೊಂದು ದಿನ ಅವರು (ಮಮತಾ) ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದು ಪಕ್ಷವನ್ನು ಪುನರುಜ್ಜೀವನಗೊಳಿಸಲು ಉತ್ತೇಜನ ನೀಡುತ್ತದೆ ಎಂಬುದು ರಾಜಕೀಯ ವಿಶ್ಲೇಷಕರ ಮಾತು.
ಟಿಎಂಸಿ ವಿರೋಧ ಪಕ್ಷವಾಗಿರಬೇಕು ಎಂದು ಬಿಜೆಪಿ ಬಯಸುತ್ತದೆ. ಆ ಸ್ಥಾನವನ್ನು ಸಿಪಿಐ(ಎಂ) ಅಥವಾ ಕಾಂಗ್ರೆಸ್ ಪಡೆದುಕೊಳ್ಳುವುದು ಬಿಜೆಪಿಯ ಹಿತಾಸಕ್ತಿಗೆ ಪೂರಕವಾಗಿಲ್ಲ. ಕೇಡರ್ ಆಧಾರಿತ ಪಕ್ಷವಾದ ಸಿಪಿಎಂಗಿಂತ ಟಿಎಂಸಿ ವಿರುದ್ಧ ಹೋರಾಡುವುದು ಬಿಜೆಪಿಗೆ ಸುಲಭವಾಗಿದೆ.
ಮಮತಾ ಬ್ಯಾನರ್ಜಿ ಅವರು ರಾಜ್ಯದ ರಾಜಕೀಯದಲ್ಲೇ ನಿರತರಾಗಿರಬೇಕೆಂದು ಬಿಜೆಪಿ ಬಯಸುತ್ತದೆ. ಬದಲಾಗಿ ಅವರು (ಮಮತಾ) ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟದತ್ತ ಗಮನ ಹರಿಸುವುದನ್ನು ಬಿಜೆಪಿ ಬಯಸುವುದಿಲ್ಲ. ಇದಕ್ಕೂ ಮುನ್ನ ಮಮತಾ ಅವರು ರಾಷ್ಟ್ರಮಟ್ಟದಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟದ ಒಗ್ಗಟ್ಟಿಗಾಗಿ ಕೆಲಸ ಮಾಡುವುದಾಗಿ ಹೇಳಿದ್ದರು. ಕೇಂದ್ರದಲ್ಲಿ ಬಿಜೆಪಿಯನ್ನು ಕಿತ್ತೊಗೆಯುತ್ತೇವೆ ಎಂದು ಘೋಷಿಸಿದ್ದರು.

