Dailyhunt Logo
  • Light mode
    Follow system
    Dark mode
    • Play Story
    • App Story
ಮಂಡ್ಯ | ಹಾಲಿನಪುಡಿ ಕಲಬೆರಕೆ: ಸಿಬಿಐ ತನಿಖೆಗೆ ದಲಿತ ಸಂಘಟನೆ ಆಗ್ರಹ

ಮಂಡ್ಯ | ಹಾಲಿನಪುಡಿ ಕಲಬೆರಕೆ: ಸಿಬಿಐ ತನಿಖೆಗೆ ದಲಿತ ಸಂಘಟನೆ ಆಗ್ರಹ

ಮಂಡ್ಯ: ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಲ್ಲಿ (ಮನ್‌ಮುಲ್) ನಡೆದಿರುವ ಹಗರಣಗಳ ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸಿ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಕನ್ನಡಪರ ಹಾಗೂ ದಲಿತ ಸಂಘಟನೆಗಳು ಆಗ್ರಹಿಸಿದವು.

ನಗರದ ಪ್ರವಾಸಿ ಮಂದಿರದಲ್ಲಿ ಮನ್‌ಮುಲ್ ಸಾಲು ಸಾಲು ಹಗರಣ ಮುಂದೇನು? ಎಂಬ ಸಮಾಲೋಚನಾ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸುದೀರ್ಘ ಚರ್ಚೆ ನಡೆಸಿ ಹೋರಾಟದ ಹಲವು ನಿರ್ಣಯಗಳನ್ನು ಕೈಗೊಂಡರು.

ಕರುನಾಡ ಸೇವಕರು ಸಂಘಟನೆಯ ರಾಜ್ಯ ವಕ್ತಾರ ಎಂ.ಬಿ. ನಾಗಣ್ಣಗೌಡ ಮಾತನಾಡಿ, 'ಜನಚಳವಳಿಯಾಗಿ ಈ ಹೋರಾಟ ರೂಪುಗೊಳ್ಳಬೇಕಿದೆ' ಎಂದರು. ಜೈ ಕರ್ನಾಟಕ ಪರಿಷತ್ ಅಧ್ಯಕ್ಷ ಎಸ್.ನಾರಾಯಣ್ ಮಾತನಾಡಿ, 'ಈ ಬಗ್ಗೆ ಜಿಲ್ಲಾಡಳಿತಕ್ಕೆ ಈ ಬಗ್ಗೆ ಮನವಿ ಸಲ್ಲಿಸೋಣ. ಅವರು ಕ್ರಮ ಕೈಗೊಳ್ಳದಿದ್ದರೆ ಹೋರಾಟಕ್ಕೆ ದಿನಾಂಕ ನಿಗದಿಪಡಿಸಿ, ಬೃಹತ್‌ ಹೋರಾಟ ನಡೆಸೋಣ' ಎಂದು ಸಲಹೆ ನೀಡಿದರು.

ಜಯಕರ್ನಾಟಕ ಸಂಘಟನೆಯ ಯೋಗಣ್ಣ ಮಾತನಾಡಿ, ' ರಾಜ್ಯ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು' ಎಂದು ಆಗ್ರಹಿಸಿದರು. ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಡಿ. ಜಯರಾಂ ಮಾತನಾಡಿ, ' ಹಾಲಿನ ಪುಡಿ ಕಲಬೆರಕೆ ಪ್ರಕರಣದಲ್ಲೂ ರಾಜಕೀಯ ಒತ್ತಡ ಹೇರಿ ತನಿಖೆಯ ದಿಕ್ಕು ತಪ್ಪಿಸುವ ಕಾರ್ಯ ನಡೆಯುತ್ತಿದೆ' ಎಂದು ದೂರಿದರು.

ಹಿರಿಯ ಸಹಕಾರಿ ಕೃಷ್ಣೇಗೌಡ ಮಾತನಾಡಿದರು. ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೆಂಪಮ್ಮ, ರೈತಸಂಘದ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯ, ಆಟೊ ವೆಂಕಟೇಶ್, ಗೋವಿಂದರಾಜ್, ಸೋಮಶೇಖರ್, ನಾವು ದ್ರಾವಿಡ ಕನ್ನಡಿಗರು ಸಂಘಟನೆಯ ಅಭಿ ಒಕ್ಕಲಿಗ ಸಂಘಟನೆಗಳ ಮುಖಂಡರು ಇದ್ದರು.

ಸಭೆಯಲ್ಲಿ ಕೈಗೊಂಡ ನಿರ್ಣಯಗಳು

l ಕಳೆದ ಹತ್ತು ವರ್ಷಗಳಿಂದ ಮನ್‌ಮುಲ್‌ನಲ್ಲಿ ನಡೆದಿರುವ ಮೆಗಾ ಡೇರಿ ಹಗರಣ, ಅಕ್ರಮ ನೇಮಕಾತಿ, ಹಾಲು ನೀರು ಹಗರಣ, ಹಾಲಿನಪುಡಿ ಕಲಬೆರಕೆ ಪ್ರಕರಣ ಒಳಗೊಂಡ ಬಹುಕೋಟಿ ಹಗರಣಗಳ ಸಮಗ್ರ ತನಿಖೆಯನ್ನು ಸಿಬಿಐಗೆ ವಹಿಸಬೇಕು.

l ಹಾಲಿನ ಪುಡಿ ಕಲಬೆರಕೆ ಹಗರಣದ ತನಿಖೆಯಲ್ಲಿ ಜಿಲ್ಲೆ ಹಾಗೂ ರಾಜ್ಯದ ಯಾವುದೇ ಜನಪ್ರತಿನಿಧಿ ಹಸ್ತಕ್ಷೇಪ ನಡೆಸಬಾರದು.

l ಹಾಲಿನ ದರ ಏರಿಕೆಯ ಸಂಪೂರ್ಣ ಲಾಭವನ್ನು ಹಾಲು ಉತ್ಪಾದಕರಿಗೆ ವರ್ಗಾಯಿಸಬೇಕು.

l ರೈತರ ಜೀವನಾಡಿ 'ನಂದಿನಿ' ಬ್ರ್ಯಾಂಡ್‌ಗೆ ಕಳಂಕ ತಂದ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು.

260924-40-1467963547

Dailyhunt
Disclaimer: This content has not been generated, created or edited by Dailyhunt. Publisher: Prajavani