ಮಂಡ್ಯ: 'ಮಣ್ಣಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ' ಘೋಷಣೆಯೊಂದಿಗೆ' ನಗರದಲ್ಲಿ ನ.4ರಂದು ಮಂಡ್ಯ ಜಿಲ್ಲೆಯನ್ನು ಸಾವಯವ ಜಿಲ್ಲೆಯಾಗಿ ಪರಿವರ್ತಿಸುವ ಅಭಿಯಾನ ಮತ್ತು 'ನಮ್ಮ ಆಹಾರ-ನಮ್ಮ ಆರೋಗ್ಯ-ನಮ್ಮ ಜವಾಬ್ದಾರಿ' ಕುರಿತು ಜಾಗೃತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಶ್ರೀಹರ್ಷ ಸಮಾಜಸೇವಾ ಫೌಂಡೇಷನ್ ಮುಖ್ಯಸ್ಥ ಕಾರಸವಾಡಿ ಮಹದೇವ ತಿಳಿಸಿದರು.
ಸಾವಯವ ಕೃಷಿಕ ಮಲ್ಲೇಶಪ್ಪ ಬಿಸಿರೊಟ್ಟಿ ಮತ್ತು ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ಮಾರ್ಗದರ್ಶನದಲ್ಲಿ ಸಂಘಟಿಸಿರುವ ಈ ಶಿಬಿರ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 10ಕ್ಕೆ ಕೆಪೆಕ್ ಸಂಸ್ಥೆಯ ನಿಕಟಪೂರ್ವ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಉದ್ಘಾಟಿಸುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಂಡ್ಯದ ಮಾಂಡವ್ಯ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಬಿ. ಶಿವಲಿಂಗಯ್ಯ ಅಧ್ಯಕ್ಷತೆ ವಹಿಸುವರು.
ಸಂಜೆ 4ಕ್ಕೆ ಶ್ರೀಹರ್ಷ ಕಾಯಕಶ್ರೀ ಪ್ರಶಸ್ತಿ ಪ್ರದಾನ, ಮಂಟೇಸ್ವಾಮಿ ಕಥಾಪ್ರಸಂಗ ನಾಟಕ ಪ್ರದರ್ಶನ ನಡೆಯಲಿದೆ. ನಾಗಮಂಗಲದ ಆದಿಚುಂಚನಗಿರಿಯ ಶಾಖಾ ಮಠದ ಸತ್ಯಕೀರ್ತಿನಾಥ ಸ್ವಾಮೀಜಿ, ಮಳವಳ್ಳಿಯ ಬಿ.ಜಿ. ಪುರದ ಮಂಟೇಸ್ವಾಮಿ ಮಠದ ಧರ್ಮಾಧಿಕಾರಿ ಭರತ್ ಅರಸ್ ಸಾನ್ನಿಧ್ಯ ವಹಿಸುವರು.
ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಉದ್ಘಾಟಿಸುವರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ. ಜಯಪ್ರಕಾಶಗೌಡ ಆಶಯ ಭಾಷಣ ಮಾಡುವರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಅಧ್ಯಕ್ಷತೆ ವಹಿಸುವರು ಎಂದರು.
261104-40-1959018384

