Dailyhunt Logo
  • Light mode
    Follow system
    Dark mode
    • Play Story
    • App Story
'ಮನೆ ಖಾಲಿ ಮಾಡಿಸಲು ಒತ್ತಡ ಹಾಕಿಲ್ಲ' - ಸಚಿವ ಬೈರತಿ ಸುರೇಶ್‌ ಸ್ಪಷ್ಟನೆ

'ಮನೆ ಖಾಲಿ ಮಾಡಿಸಲು ಒತ್ತಡ ಹಾಕಿಲ್ಲ' - ಸಚಿವ ಬೈರತಿ ಸುರೇಶ್‌ ಸ್ಪಷ್ಟನೆ

ಬೆಂಗಳೂರು: 'ಮನೆ ಖಾಲಿ ಮಾಡುವಂತೆ ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ಅವರಿಗೆ ಯಾವುದೇ ರೀತಿಯ ಒತ್ತಡ ಹಾಕಿಲ್ಲ' ಎಂದು ಸಾರಿಗೆ ಸಚಿವ ಬೈರತಿ ಸುರೇಶ್‌ ಹೇಳಿದರು.

'ಮಹದೇವಪ್ಪ ಮತ್ತು ನನ್ನ ನಡುವೆ ಯಾವುದೇ ಗೊಂದಲವಿಲ್ಲ. ಸರ್ಕಾರದ ವಸತಿ ಗೃಹದ ಹಂಚಿಕೆ ವಿಚಾರದಲ್ಲಿ ತಪ್ಪು ಮಾಹಿತಿ ಹೇಗೆ ಹೋಗಿದೆಯೋ ಗೊತ್ತಿಲ್ಲ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

'ಈ ಹಿಂದೆ ಮಹದೇವಪ್ಪ ವಾಸವಿದ್ದ ಕ್ರೆಸೆಂಟ್ ರಸ್ತೆಯ ನಂ. 2ರ ಮನೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನನಗೆ ಹಂಚಿಕೆ ಮಾಡಿದ್ದರು. ಅದರಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮನೆಯ ನವೀಕರಣ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ' ಎಂದು ಸ್ಪಷ್ಟಪಡಿಸಿದರು.

ಮಹದೇವಪ್ಪ ಅವರು ಸಚಿವ ಸ್ಥಾನದಿಂದ ನಿರ್ಗಮಿಸಿದ ನಂತರ ತಾವು ವಾಸವಿದ್ದ ಮನೆಯನ್ನು ಕಳೆದ ತಿಂಗಳ 15 ರಂದು ಖಾಲಿ ಮಾಡಿರುವುದಾಗಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ. ಹೀಗಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನವೀಕರಣ ಆರಂಭಿಸಿದ್ದಾರೆ ಎಂದರು.

'ಮಹದೇವಪ್ಪ ಅವರ ಮನೆಗೆ ನೂರು ಸಲ ಹೋಗಿ ಊಟ ಮಾಡಿದ್ದೇನೆ. ನನ್ನ ಮೇಲೆ ಯಾಕೆ ಅಸಮಾಧಾನ ಬಂದಿದೆಯೋ ಗೊತ್ತಿಲ್ಲ. ಅವರ ಬಗ್ಗೆ ನನಗೆ ಅಸಮಾಧಾನವಿಲ್ಲ. ನಾನು ಅವರ ಮಗನ ಸಮಾನ ಮತ್ತು ಅವರು ನಮ್ಮ ನಾಯಕರು. ಯಾವುದೋ ತಪ್ಪು ಗ್ರಹಿಕೆಯಿಂದ ಈ ಗೊಂದಲ ಸೃಷ್ಟಿಯಾಗಿರಬಹುದು' ಎಂದು ಹೇಳಿದರು.

ಮುಖ್ಯಮಂತ್ರಿ ಅನುಮತಿ ನೀಡಿದರೆ ಮತ್ತು ಕಾನೂನಿನಲ್ಲಿ ಅವಕಾಶವಿದ್ದರೆ ಮಹದೇವಪ್ಪಣ್ಣ ಇನ್ನೂ ಒಂದೂಮುಕ್ಕಾಲು ವರ್ಷ ಅದೇ ಮನೆಯಲ್ಲಿ ವಾಸವಾಗಿರಲಿ

ಬೈರತಿ ಸುರೇಶ್, ಸಾರಿಗೆ ಸಚಿವ

260909-38-139289903

Dailyhunt
Disclaimer: This content has not been generated, created or edited by Dailyhunt. Publisher: Prajavani