Dailyhunt Logo
  • Light mode
    Follow system
    Dark mode
    • Play Story
    • App Story
ಮನೆಯಂಗಳಲ್ಲಿ ತಾನಾಗೇ ಬೆಳೆದ ಶ್ರೀಗಂಧದಿಂದ ಸಿಕ್ಕಿತು ₹28 ಲಕ್ಷ ಆದಾಯ, ಗೌರವ !

ಮನೆಯಂಗಳಲ್ಲಿ ತಾನಾಗೇ ಬೆಳೆದ ಶ್ರೀಗಂಧದಿಂದ ಸಿಕ್ಕಿತು ₹28 ಲಕ್ಷ ಆದಾಯ, ಗೌರವ !

ಬೆಂಗಳೂರು: ಸುಮಾರು 40 ವರ್ಷದ ಹಿಂದಿನ ನೆನಪು. ಮನೆ ಅಂಗಳದಲ್ಲಿ ಬಿದ್ದ ಬೀಜದಿಂದ ಪುಟ್ಟ ಗಿಡ ಬೆಳೆದಿತ್ತು. ಮುಂದೆ ಅದು ನಿಧಾನವಾಗಿ ಮರವಾಗಿಯೇ ಬೆಳೆಯಿತು. ಕೆಲ ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಇನ್ನೊಂದು ಮರ ಉರುಳಿ ಬಿದ್ದು ಈ ಮರವೂ ನೆಲಕ್ಕೆ ಉರುಳಿತು.

ಇಂತಹ ಮರ ಮಾಲೀಕರಿಗೆ ತಂದಿದ್ದು ಬರೋಬ್ಬರಿ ₹28 ಲಕ್ಷ ಆದಾಯ.

ಇದು ಕರುನಾಡ ಹೆಮ್ಮೆಯ ಮರ ಶ್ರೀಗಂಧದ ಮನೆಯಂಗಳದಲ್ಲಿ ತಾನಾಗಿಯೇ ಬೆಳೆದು ಅನಾಯಾಸವಾಗಿ ಆದಾಯ ತಂದು ಕೊಟ್ಟ ಸಂದರ್ಭ. ಉತ್ತಮ ಮರ ಬೆಳದದ್ದಕ್ಕೆ ಬೆಂಗಳೂರಿನ ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತ ( ಕೆಎಸ್‌ಡಿಎಲ್)ನಿಂದ ಶ್ರೀಗಂಧ ಬೆಳೆಗಾರ ಗೌರವವೂ ದೊರೆತಿದೆ.

ಬೆಂಗಳೂರಿನ ಮಲ್ಲೇಶ್ವರದ 17ನೇ ಕ್ರಾಸ್‌ ನಿವಾಸಿಯಾಗಿರುವ ಎನ್‌.ಜಿ.ಕೇಸರಿ ಅವರ ಕುಟುಂಬ ತಲೆಮಾರುಗಳಿಂದ ಇಲ್ಲಿಯೇ ವಾಸಿಸುತ್ತಿದೆ. 85 ವರ್ಷ ದಾಟಿರುವ ಕೇಸರಿ ಅವರದ್ದು ವ್ಯಾಪಾರೋದ್ಯಮ ಕುಟುಂಬ. ಮಲ್ಲೇಶ್ವರ ಎಂದರೆ ಈಗಲೂ ಹಸಿರು ಪ್ರದೇಶ ಎಂದೇ ಜನಜನಿತ.

40 ವರ್ಷದ ಹಿಂದೆ ಮನೆಯ ಆವರಣದಲ್ಲಿ ಶ್ರೀಗಂಧ ಗಿಡ ಬೆಳೆದಿತ್ತು. ಮನೆಯ ಅಂಗಳದಲ್ಲಿ ಬೇರೆ ಬೇರೆ ಗಿಡಗಳೂ ಇದ್ದವು. ಎಲ್ಲ ಗಿಡಗಳಂತೆ ಮನೆಯವರು ನೀರು ಹಾಕಿಕೊಂಡು ಬರುತ್ತಿದ್ದರು. ಗಿಡಗಳ ಮರಗಳಾದಾಗ ಹೀಗೆ ಅನಾಯಾಸವಾಗಿ ಬೆಳೆದದ್ದು ಶ್ರೀಗಂಧ ಎನ್ನುವುದು ಮನೆಯವರ ಅರಿವಿಗೆ ಬಂದಿತು.

ಮರ ಬೆಳೆಯುತ್ತಾ ಹೋದರೆ ಕಳ್ಳರ ಕಣ್ಣು ಬಿದ್ದಿತು. ಕೆಲವರು ಇದನ್ನು ಕತ್ತರಿಸಲು ಕೂಡ ಪ್ರಯತ್ನಿಸಿದರು. ಕೇಸರಿ ಅವರು ಇದನ್ನು ರಕ್ಷಿಸಿಕೊಳ್ಳಲು ಸಂಪೂರ್ಣ ಕಬ್ಬಿಣದ ಬೇಲಿಯನ್ನು ಮರಕ್ಕೆ ಹಾಕಿಸಿದರು. ಕಳ್ಳತನ ಪ್ರಯತ್ನ ಆಗಾಗ ಆದರೂ ರಕ್ಷಣೆ ಇದ್ದುದರಿಂದ ಅದು ಗಟ್ಟಿಯಾಗಿ ಉಳಿದಿತ್ತು.

ಜೂನ್‌ 2ನೇ ವಾರದಲ್ಲಿ ಭಾರೀ ಮಳೆ, ಗಾಳಿಯಿಂದ ಅನಾಹುತವೊಂದು ನಡೆದಿತ್ತು. ಪಕ್ಕದಲ್ಲಿಯೇ ಇದ್ದ ಬೃಹತ್‌ ಮರವೊಂದು ಉರುಳಿ ಬಿದ್ದಿತ್ತು. ಅದು ಶ್ರೀಗಂಧದ ಮರದ ಬೇಲಿ ಮೇಲೆ ಬಿದ್ದುಆ ಮರವೂ ಉರುಳಿತ್ತು.

ಕೊನೆಗೆ ಇದನ್ನು ಮಾರಾಟ ಮಾಡಲು ಕೇಸರಿ ಅವರು ನಿರ್ಧರಿಸಿದರು. ಅರಣ್ಯ ಇಲಾಖೆಗೆ ಪತ್ರವನ್ನೂ ಬರೆದರು. ಶ್ರೀಗಂಧ ಮರದ ಮಹಜರು, ಬೇಕಾದ ಅನುಮತಿಯೂ ದೊರೆಯಿತು. ಶ್ರೀಗಂಧವನ್ನು ಮೈಸೂರಿನ ಶ್ರೀಗಂಧ ಕೋಠಿಗೆ ತೆಗೆದುಕೊಂಡು ಹೋಗಿ ತಪಾಸಣೆ ಮಾಡಿಸಿದಾಗ ಇದು ಉತ್ತಮ ಗುಣಮಟ್ಟದ್ದು ಎನ್ನುವ ಪತ್ರ ನೀಡಲಾಯಿತು. ಕೊನೆಗೆ ಈ ಶ್ರೀಗಂಧವನ್ನು ಬೆಂಗಳೂರಿನ ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತಕ್ಕೆ ಖರೀದಿಗೆಂದು ಹಂಚಿಕೆ ಮಾಡಲಾಯಿತು. ತೂಕ ಮಾಡಿದಾಗ ಬಹುತೇಕ 1 ಟನ್‌ ನಷ್ಟು ಇದು ತೂಗಿತು. ತೆರಿಗೆ, ಸಾಗಣೆ ವೆಚ್ಚ, ನಿರ್ವಹಣೆ ಎಲ್ಲವನ್ನೂ ತೆಗೆದು ₹28 ಲಕ್ಷ ಆದಾಯ ಕೇಸರಿಗೆ ಅವರಿಗೆ ಲಭಿಸಿತು.

ಬೆಂಗಳೂರಿನ ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತ ದಲ್ಲಿ 2025- 26 ನೇ ಹಣಕಾಸಿನ ಸಾಲಿನ ಹೆಚ್ಚು ಬೆಲೆ ಬಾಳುವ ಶ್ರೀಗಂಧವನ್ನು ಪೂರೈಕೆ ಮಾಡಿದವರನ್ನು ಗುರುತಿಸಿ ಶ್ರೀಗಂಧ ಶಿರೋಮಣಿ ಗೌರವದೊಂದಿಗೆ ಸನ್ಮಾನಿಸಲಾಯಿತು. ಎರಡನೇ ಅತಿ ಹೆಚ್ಚು ಮೌಲ್ಯದ ಶ್ರೀಗಂಧ ಪೂರೈಕೆ ಮಾಡಿದವರೆಂಬ ಹಿರಿಮೆ ಕೇಸರಿ ಅವರದ್ದಾಗಿತ್ತು.

ನಾನು ಕೇಸರಿ ಅವರ ಮನೆಯಲ್ಲಿ ಮೂರು ದಶಕದಿಂದ ಕೆಲಸ ಮಾಡಿಕೊಂಡಿದ್ದೇನೆ. ಶ್ರೀಗಂಧ ಮರವನ್ನೂ ನೋಡಿಕೊಳ್ಳುತ್ತಿದ್ದೆ. ಮರದ ಬೀಳದೇ ಇದ್ದರೆ ಅದು ಇನ್ನೂ ವರ್ಷ ಇರೋದು. ಕೊನೆಗೆ ನಾನೇ ಎಲ್ಲ ಕಡೆ ಹೋಗಿ ಪತ್ರ ತೆಗೆದುಕೊಂಡು ಬಂದು ಮಾರಾಟವನ್ನೂ ಮಾಡಿಕೊಂಡು ಬಂದೆ. ಮನೆಯಂಗಳದಲ್ಲಿ ಬೆಳೆದ ಶ್ರೀಗಂಧ ಇಷ್ಟು ಆದಾಯ ತಂದಿದ್ದು ಖುಷಿ ನೀಡಿದೆ ಎಂದು ಕೆಲಸಗಾರ ನಾರಾಯಣ್‌ ಖುಷಿಯಾಗಿಯೇ ಹೇಳಿದರು.

ಕೆಎಸ್‌ಡಿಎಲ್‌ಗೆ ಮಾರಾಟ ಮಾಡಿದ ಶ್ರಿಗಂಧ.

ರಮೇಶ್ ಬಳೂಟಗಿ, ಶ್ರೀಗಂಧ ಬೆಳೆಗಾರ, ಕೊಪ್ಪಳನಮ್ಮ ಕುಟುಂಬದವರೂ ಹಲವಾರು ವರ್ಷಗಳಿಂದ ಶ್ರೀಗಂಧ ಬೆಳೆಯುತ್ತಿದ್ದೇವೆ . ಸನ್ಮಾನ ಕಾರ್ಯಕ್ರಮದಲ್ಲಿ ಕೇವಲ ಒಂದು ಶ್ರೀಗಂಧದ ಗಿಡದಿಂದ ₹ 28ಲಕ್ಷ ಮೌಲ್ಯದ ಚೆಕ್ ಅನ್ನು ತೆಗೆದುಕೊಂಡ ಬೆಳೆಗಾರರನ್ನು ನೋಡಿ ಪ್ರೇರಣೆಗೊಂಡೆವು.
Dailyhunt
Disclaimer: This content has not been generated, created or edited by Dailyhunt. Publisher: Prajavani