ಶಿಡ್ಲಘಟ್ಟ: 'ಜಗತ್ತೇ ಒಂದು ಬಾಡಿಗೆ ಮನೆ; ಬರುವವರು ಪಡೆಯುವ ಆಸೆಯಿಂದ ಬರುತ್ತಾರೆ, ಹೊರಡುವವರು ತಮ್ಮಲ್ಲಿದ್ದುದನ್ನು ಕೊಟ್ಟು ಹೋಗುತ್ತಾರೆ' ಎಂಬ ಕಬೀರರ ನುಡಿಗಳು ತಮ್ಮ ಬದುಕಿನ ದೃಷ್ಟಿಕೋನನ್ನು ರೂಪಿಸಿವೆ ಎಂದು ಶಿಡ್ಲಘಟ್ಟದ ಗೃಹಿಣಿ ಶಬನಮ್ ಷಾ ಹೇಳುತ್ತಾರೆ.
ಪರಿಸರ, ಪ್ರಕೃತಿ, ಗಿಡ, ಮರ, ಪ್ರಾಣಿ-ಪಕ್ಷಿಗಳೊಂದಿಗೆ ನಂಟು ಬೆಳೆಸಿಕೊಂಡ ಅವರು, ದೈನಂದಿನ ಬದುಕಿನಲ್ಲಿ ಪರಿಸರ ಕಾಳಜಿ ಅಳವಡಿಸಿಕೊಂಡಿದ್ದಾರೆ.
ಶಬನಮ್ ಶಿಡ್ಲಘಟ್ಟದ ಕನಕನಗರದಲ್ಲಿರುವ ಬಾಡಿಗೆ ಮನೆಯ ಮೊದಲ ಮಹಡಿಯಲ್ಲಿದ್ದರೂ, ತಮ್ಮ ಮನೆ ಆವರಣದಲ್ಲಿ ವಿವಿಧ ಬಗೆಯ ಹೂವು, ಅಲಂಕಾರಿಕ ಹಾಗೂ ಔಷಧೀಯ ಸಸ್ಯಗಳನ್ನು ಬೆಳೆಸಿ ಹಸಿರು ವಾತಾವರಣ ನಿರ್ಮಿಸಿದ್ದಾರೆ. ಮನೆಯಲ್ಲಿರುವ ಅಕ್ವೇರಿಯಂನಲ್ಲಿ ವಿವಿಧ ಬಣ್ಣದ ಮೀನುಗಳನ್ನು ಸಾಕಿದ್ದಾರೆ. ಅಲ್ಲದೆ, ಹಲವು ಜಾತಿಯ ಹಕ್ಕಿಗಳು ಮತ್ತು ಬೆಕ್ಕಿನ ಆರೈಕೆಯನ್ನೂ ಮಾಡುತ್ತಿದ್ದಾರೆ.
ಹೀಗೆ ಸಸ್ಯ ಮತ್ತು ಜೀವಜಾಲದೊಂದಿಗೆ ಬೆಸೆದುಕೊಂಡ ಅವರ ಮನೆ ಪ್ರಕೃತಿ ಸ್ನೇಹಿ ಬದುಕಿನ ಒಂದು ನೋಟ ನೀಡುತ್ತದೆ.
ಸ್ನೇಕ್ ಪ್ಲಾಂಟ್, ರೋಸ್ ಮೇರಿ, ಅಲೋವೆರಾ, ಜೆಡ್ ಜೇ, ಮನಿಪ್ಲಾಂಟ್, ಅರೇಕಾ ಪಾಮ್, ಅಗ್ಲೋನೇಮಾ, ಫಿಲೋಡೆಂಡ್ರಾನ್, ಬಿದಿರು ತಾಳೆ, ಫರ್ನ್, ಕರಿಬೇವು, ತುಳಸಿ, ದೊಡ್ಡಪತ್ರೆ, ಹೂಗಿಡಗಳಾದ ಮಲ್ಲಿಗೆ, ಜಾಜಿ, ದಾಸವಾಳ ಹೀಗೆ ಎಂಬತ್ತಕ್ಕೂ ಹೆಚ್ಚು ಗಿಡಗಳಿವೆ. ಆರೇಳು ವಿಧದ ಮೀನುಗಳು, ಲವ್ ಬರ್ಡ್ಸ್, ಫಿಂಚಸ್ ಹಕ್ಕಿಗಳು ಸದಾ ಚಿಲಿಪಿಲಿಗುಟ್ಟುತ್ತಿರುತ್ತವೆ. ಅವುಗಳಿಗೆ ಹುಷಾರಿಲ್ಲ ಎಂಬುದು ಇವರಿಗೆ ನೋಡುತ್ತಿದ್ದಂತೆಯೇ ತಿಳಿಯುತ್ತದೆ ಮತ್ತು ತಕ್ಷಣವೇ ಔಷದೋಪಚಾರವೂ ಮಾಡಿಬಿಡುತ್ತಾರೆ.
ಶಬನಮ್ ಷಾ ಅವರ ಮತ್ತೊಂದು ವಿಶೇಷ ಆಸಕ್ತಿ ತ್ಯಾಜ್ಯ ವಸ್ತುಗಳ ಮರುಬಳಕೆ. 'ಕಸದಿಂದ ರಸ' ಎಂಬ ಪರಿಕಲ್ಪನೆಯನ್ನು ಅಳವಡಿಸಿಕೊಂಡು, ಬಳಸಿದ ಗಾಜಿನ ಬಾಟಲಿಗಳು, ಮಣ್ಣಿನ ಲೋಟಗಳು, ತೆಂಗಿನ ಚಿಪ್ಪು, ಥರ್ಮೊಕೋಲ್, ರಟ್ಟಿನ ಡಬ್ಬಗಳು ಸೇರಿದಂತೆ ವಿವಿಧ ತ್ಯಾಜ್ಯ ವಸ್ತುಗಳನ್ನು ಮರುರೂಪಿಸಿ ಹೂದಾನಿಗಳು, ಅಲಂಕಾರಿಕ ವಸ್ತುಗಳು, ಹಕ್ಕಿ ಗೂಡುಗಳು ಹಾಗೂ ಕಲಾಕೃತಿಗಳನ್ನು ತಯಾರಿಸುತ್ತಾರೆ. ಇದರಿಂದ ತ್ಯಾಜ್ಯ ಕಡಿಮೆಯಾಗುವ ಜೊತೆಗೆ ಉಪಯುಕ್ತ ವಸ್ತುಗಳಿಗೂ ಹೊಸ ರೂಪ ದೊರೆಯುತ್ತಿದೆ.
ಗಿಡಗಳ ಆರೈಕೆಯಲ್ಲಿಯೂ ಅವರು ನೈಸರ್ಗಿಕ ವಿಧಾನಗಳನ್ನೇ ಅನುಸರಿಸುತ್ತಾರೆ. ಅಡುಗೆಮನೆಯ ಹಸಿ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸಿ ಗಿಡಗಳಿಗೆ ಬಳಸುತ್ತಾರೆ. ಜೊತೆಗೆ, ಕೀಟ ನಿಯಂತ್ರಣಕ್ಕಾಗಿ ಕಾಲಕಾಲಕ್ಕೆ ಬೇವಿನ ದ್ರಾವಣ ಸಿಂಪಡಿಸುತ್ತಾರೆ. ಈ ವಿಧಾನಗಳಿಂದ ರಾಸಾಯನಿಕಗಳ ಬಳಕೆ ಕಡಿಮೆ ಮಾಡಿ, ಆರೋಗ್ಯಕರ ಬೆಳವಣಿಗೆಗೆ ಆದ್ಯತೆ ನೀಡುತ್ತಿದ್ದಾರೆ.
ಹಸಿರು ಬೆಳೆಸೋಣ, ಜೀವಗಳನ್ನು ಪ್ರೀತಿಸೋಣ, ಕಸವನ್ನು ಸಂಪನ್ಮೂಲವನ್ನಾಗಿ ಪರಿವರ್ತಿಸೋಣ ಎಂಬ ಸಂದೇಶವನ್ನು ತಮ್ಮ ಜೀವನದ ಮೂಲಕವೇ ಶಬನಮ್ ಷಾ ಸಾರುತ್ತಿದ್ದಾರೆ. ತಮ್ಮ ಈ ಕಾರ್ಯಕ್ಕೆ ಪತಿಯಾದ ಶಿಡ್ಲಘಟ್ಟ ಜೆಎಂಎಫ್‌ಮಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮೊಹಮ್ಮದ್ ರೋಷನ್ ಷಾ ಮತ್ತು ಮಕ್ಕಳು ಬೆಂಬಲ ನೀಡುತ್ತಾರೆ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.
ಅವರ ಮನೆಗೆ ಭೇಟಿ ನೀಡುವವರು ಹಸಿರು ವಾತಾವರಣ, ಮರುಬಳಕೆಯ ಕಲಾಕೃತಿಗಳು ಹಾಗೂ ಪರಿಸರ ಸ್ನೇಹಿ ಜೀವನಶೈಲಿಯನ್ನು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದರಿಂದ ಪ್ರೇರಿತರಾಗಿ ಅನೇಕರು ತಮ್ಮ ಮನೆಗಳಲ್ಲಿಯೂ ಗಿಡಗಳನ್ನು ಬೆಳೆಸುವುದು, ತ್ಯಾಜ್ಯ ವಸ್ತುಗಳನ್ನು ಮರುಬಳಕೆ ಮಾಡುವುದು ಹಾಗೂ ಸಾವಯವ ಪದ್ಧತಿಗಳನ್ನು ಅಳವಡಿಸಿಕೊಳ್ಳುವತ್ತ ಆಸಕ್ತಿ ತೋರಿದ್ದಾರೆ.
ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಲೇ ಪರಿಸರ ಸಂರಕ್ಷಣೆ, ನೀರಿನ ಉಳಿತಾಯ, ಸ್ವಚ್ಛತೆ ಹಾಗೂ ಜೀವಜಾಲದ ಆರೈಕೆಯ ಬಗ್ಗೆ ತಮ್ಮ ನಡೆ-ನುಡಿಗಳ ಮೂಲಕ ಅರಿವು ಮೂಡಿಸುವ ಪ್ರಯತ್ನವನ್ನು ಅವರು ಮುಂದುವರಿಸಿದ್ದಾರೆ. ಅವರ ಜೀವನಶೈಲಿ ಪರಿಸರ ಕಾಳಜಿ ಮತ್ತು ಸೃಜನಶೀಲತೆಯನ್ನು ದೈನಂದಿನ ಬದುಕಿನೊಂದಿಗೆ ಹೇಗೆ ಸಂಯೋಜಿಸಬಹುದು ಎಂಬುದಕ್ಕೆ ಒಂದು ಉದಾಹರಣೆಯಾಗಿದೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260702-16-135555930

