ಮಂಗಳೂರು: ಮಲ್ಟಿ ಆಯಕ್ಸಲ್ ಕಂಟೇನರ್ ಒಂದು ತಿರುವು ಪಡೆಯಲು ಯತ್ನಿಸಿದಾಗ ಸಿಲುಕಿಕೊಂಡ ಪರಿಣಾಮ ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು ಭಾಗದಲ್ಲಿ ಭಾನುವಾರ ಒಂದು ತಾಸು ವಾಹನ ಸಂಚಾರ ಸ್ತಬ್ದವಾಯಿತು.
ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸಲು ಪ್ರಯತ್ನಿಸಿದ ಕಂಟೇನರ್ ಚಾಲಕನಿಗೆ ವಾಹನವನ್ನು ಪೂರ್ತಿಯಾಗಿ ತಿರುಗಿಸಲು ಸಾಧ್ಯವಾಗಲಿಲ್ಲ.
ಅಷ್ಟರಲ್ಲಿ ಇತರ ವಾಹನಗಳು ರಸ್ತೆಯಲ್ಲಿ ಸಾಲುಕಟ್ಟಿ ನಿಲ್ಲಬೇಕಾಯಿತು. ನಿಮಿಷಗಳು ಕಳೆಯುತ್ತಿದ್ದಂತೆ ವಾಹನಗಳ ಸಾಲು ದೊಡ್ಡದಾಯಿತು. ಕಂಟೇನರ್ ಚಾಲಕ ಹಲವು ಬಾರಿ ವಾಹನವನ್ನು ಹಿಂದಕ್ಕೂ ಮುಂದಕ್ಕೂ ಚಲಾಯಿಸಿದ. ಎರಡೂ ಕಡೆಯಲ್ಲೂ ವಾಹನಗಳು ಸಾಲುಗಟ್ಟಿ ನಿಂತವು.
ಟ್ರಾಫಿಕ್ ಪೊಲೀಸರು ವಾಹನಗಳನ್ನು ಸಂಚಾರವನ್ನು ಸುಗಮಗೊಳಿಸಲು ಪ್ರಯತ್ನಿಸಿದರು. ಒಂದು ತಾಸಿನ ನಂತರ ಕಂಟೇನರ್ ಮುಖ್ಯರಸ್ತೆಯಲ್ಲಿ ಸಂಚರಿಸಿತು. ಕಂಟೇನರ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು: ನಗರದ ಬಜಾಲ್ ಪ್ರದೇಶದ ಜೆ.ಎಂ ರಸ್ತೆಯ ವಿದ್ಯುತ್ ಕಂಬ ಭಾರಿ ಗಾಳಿ ಮತ್ತು ಮಳೆಯಿಂದ ಭಾನುವಾರ ರಸ್ತೆಗೆ ಉರುಳಿದ ಪರಿಣಾಮ ಕೆಲ ಹೊತ್ತು ವಾಹನ ಸಂಚಾರಕ್ಕೆ ಅಡ್ಡಿಯಾಯಿತು.
ಕಂಬ ಉರುಳಿದ್ದರಿಂದ ವಿದ್ಯುತ್ ಸಂಪರ್ಕವೂ ಕಡಿತಗೊಂಡಿತ್ತು. ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಂಬ ತೆರವುಗೊಳಿಸಿದರು. ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260706-28-1262192425

