Dailyhunt Logo
  • Light mode
    Follow system
    Dark mode
    • Play Story
    • App Story
ಮಂಗಳೂರು ವಿಮಾನ ನಿಲ್ದಾಣದಲ್ಲಿ PAL ವ್ಯವಸ್ಥೆ: ವಿಮಾನ ಇಳಿಯುವಿಕೆ ಹೆಚ್ಚು ನಿಖರ

ಮಂಗಳೂರು ವಿಮಾನ ನಿಲ್ದಾಣದಲ್ಲಿ PAL ವ್ಯವಸ್ಥೆ: ವಿಮಾನ ಇಳಿಯುವಿಕೆ ಹೆಚ್ಚು ನಿಖರ

ಮಂಗಳೂರು: ವಿಮಾನ ಲ್ಯಾಂಡಿಂಗ್‌ ಪ್ರಕ್ರಿಯೆಯನ್ನು ಹೆಚ್ಚು ನಿಖರಗೊಳಿಸುವ ಪ್ರಿಸಿಷನ್ ಅಪ್ರೋಚ್ ಲೈಟಿಂಗ್‌ (ಪಿಎಎಲ್‌) ವ್ಯವಸ್ಥೆಯನ್ನು ಬಜಪೆಯ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರಂಭಿಸಲಾಗಿದೆ.

ಈ ವ್ಯವಸ್ಥೆಯನ್ನು ಹೊಂದಿರುವ ಭಾರತದ ಮೊದಲ ಮತ್ತು ಏಷ್ಯಾದ ಎರಡನೇ ವಿಮಾನ ಇದಾಗಿದೆ.

'ಟೇಬಲ್ ಟಾಪ್‌' ನಿಲ್ದಾಣಗಳಲ್ಲಿ ರನ್‌ವೇ ಸರಿಯಾಗಿ ಗೋಚರವಾಗದೇ ಇರುವ ಸಂದರ್ಭದಲ್ಲಿ ಸುರಕ್ಷಿತವಾಗಿ ವಿಮಾನ ಇಳಿಸಲು ಇದು ನೆರವಾಗುತ್ತದೆ. 24ನೇ ರನ್‌ ವೇಯಲ್ಲಿ ಇದನ್ನು ಅಳವಡಿಸಲಾಗಿದೆ.

ಲ್ಯಾಂಡಿಂಗ್‌ನ ಅತ್ಯಂತ ಸೂಕ್ಷವಾದ, ಅಂತಿಮ ಘಟ್ಟದಲ್ಲಿ ಪೈಲಟ್‌ಗೆ ಸರಿಯಾದ ಮಾರ್ಗದರ್ಶನ ನೀಡಲು ಈ ವ್ಯವಸ್ಥೆ ಸಹಕಾರಿ. ಏರ್‌ಫೀಲ್ಡ್ ಲೈಟಿಂಗ್ ಇಂಟೆಲಿಜೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಎಎಲ್‌ಐಎಂಎಸ್‌) ಎಂಬ ತಂತ್ರಜ್ಞಾನದ ಮೂಲಕ ಈ ವ್ಯವಸ್ಥೆಯನ್ನು ನಿರ್ವಹಿಸಲಾಗುತ್ತದೆ. ವಿಶೇಷ ಎಂಜಿನಿಯರಿಂಗ್ ಮೂಲಕ ವಿನ್ಯಾಸಗೊಳಸಿಲಾದ ಬೃಹತ್ ಗೋಪುರಗಳ ಮೇಲೆ, ರನ್‌ವೇಯಿಂದ 900 ಮೀಟರ್ ದೂರದಲ್ಲಿ ಈ ಬೆಳಕು ಮೂಡುತ್ತದೆ. ಕೆಲವು ಗೋಪುರಗಳು ಕುತುಬ್‌ ಮಿನಾರ್‌ಗಿಂತಲೂ ಎತ್ತರ ಇವೆ.

ಜಾಲರಿಯಂತೆ ಗೋಚರಿಸುವ, ಕ್ಲಿಪ್ ಮಾದರಿಯ 17 ಪುಂಜಗಳಲ್ಲಿ 4 ಬೆಳಕಿನ ವ್ಯವಸ್ಥೆ ಇದ್ದು ಮಧ್ಯದಲ್ಲಿ ಫ್ಲ್ಯಾಷ್ ಇರುತ್ತದೆ. ನಿರ್ವಹಣೆಯ ಅಗತ್ಯಕ್ಕೆ ಜಾಲರಿಯ ಮಾದರಿಯನ್ನು ನೆಲಮಟ್ಟಕ್ಕೆ ಇಳಿಸಲು ಸಾಧ್ಯವಾಗುತ್ತದೆ. ಮಳೆ, ಮಂಜು ಮತ್ತು ಮಬ್ಬು ಕವಿದ ವಾತಾವರಣ ಇರುವಾಗ ರನ್‌ವೇ ಸರಿಯಾಗಿ ಗೋಚರಿಸಲು ಮತ್ತು ಮಂಗಳೂರಿನಂಥ ಟೆಬಲ್ ಟಾಪ್ ರನ್‌ವೇ ಇರುವಲ್ಲಿ ಪೈಲಟ್‌ಗಳಿಗೆ ಭರವಸೆ ತುಂಬಲು ಈ ವ್ಯವಸ್ಥೆ ನೆರವಾಗುತ್ತದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani