Dailyhunt Logo
  • Light mode
    Follow system
    Dark mode
    • Play Story
    • App Story
ಮನುಷ್ಯನ ಹುಡುಕಾಟದ ಮರುಳಸಿದ್ಧ

ಮನುಷ್ಯನ ಹುಡುಕಾಟದ ಮರುಳಸಿದ್ಧ

ಕೆಲವು ಕಾದಂಬರಿಗಳು ಕಥೆಯನ್ನು ಹೇಳುತ್ತವೆ. ಕೆಲವು ಕಾದಂಬರಿಗಳು ಕಥೆಯ ಮೂಲಕ ಮನುಷ್ಯನನ್ನು ಅರಿಯುವ ಪ್ರಯತ್ನ ಮಾಡುತ್ತವೆ. 'ಮರುಳಸಿದ್ಧ' ಎರಡನೇ ಬಗೆಯ ಕೃತಿ. ಓದಿದಂತೆ ಒಬ್ಬ ವ್ಯಕ್ತಿಯ ಬದುಕು ಮಾತ್ರ ತೆರೆದುಕೊಳ್ಳುವುದಿಲ್ಲ; ಮನುಷ್ಯ, ಸಮಾಜ, ಸಂಬಂಧ, ಅಧಿಕಾರ, ಹಣ, ನೈತಿಕತೆ ಮತ್ತು ಬದುಕಿನ ಅರ್ಥದ ಕುರಿತು ಹಲವು ಪ್ರಶ್ನೆಗಳು ಎದುರಾಗುತ್ತವೆ.

'ಮರುಳಸಿದ್ಧ' ಎಂಬ ಹೆಸರು ಲೇಖಕರ ಕಲ್ಪನೆಯಿಂದ ಹುಟ್ಟಿದುದಲ್ಲ. ಹನ್ನೆರಡನೇ ಶತಮಾನದ ಆರಂಭದಲ್ಲಿ ಬದುಕಿದ್ದ ಮರುಳಸಿದ್ಧನ ಕುರಿತು ಕಾಲಕ್ರಮೇಣ ಬೆಳೆದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ನೆನಪುಗಳನ್ನು, ಆತನ ವ್ಯಕ್ತಿತ್ವವನ್ನು ಆಧಾರವಾಗಿಟ್ಟುಕೊಂಡು ಕಟ್ಟಲಾದ ಕಾದಂಬರಿ ಇದು. ಹೀಗಾಗಿ ಈ ಕೃತಿಯನ್ನು ಕೇವಲ ಐತಿಹಾಸಿಕ ವ್ಯಕ್ತಿಯ ಕಥೆಯಾಗಿ ಓದುವುದು ಅದರ ವ್ಯಾಪ್ತಿಯನ್ನು ಕುಗ್ಗಿಸಿದಂತಾಗುತ್ತದೆ. ಪುಸ್ತಕದ ಪುಟಗಳಲ್ಲಿ ಕಾಣಿಸಿಕೊಳ್ಳುವ ಜಗತ್ತು ಒಂದೇ ಬಣ್ಣದ್ದಲ್ಲ. ಗ್ರಾಮೀಣ ಬದುಕು, ಜನರ ನಂಬಿಕೆಗಳು, ಕುಟುಂಬ ಸಂಬಂಧಗಳು, ಹಣದ ಪ್ರಭಾವ, ಅಧಿಕಾರದ ಸಣ್ಣ-ದೊಡ್ಡ ಆಟಗಳು, ವ್ಯಕ್ತಿಯ ಸಾಮಾಜಿಕ ಸ್ಥಾನಮಾನ-ಇವೆಲ್ಲವೂ ಕಥೆಯೊಳಗೆ ಸಹಜವಾಗಿ ಬೆರೆತಿವೆ. ವಿಶೇಷವಾಗಿ, ಜನರು ಒಬ್ಬ ವ್ಯಕ್ತಿಯನ್ನು ಹೇಗೆ ನೋಡುತ್ತಾರೆ, ಅವನ ಬಗ್ಗೆ ಹೇಗೆ ಅಭಿಪ್ರಾಯ ರೂಪಿಸಿಕೊಳ್ಳುತ್ತಾರೆ ಮತ್ತು ಸಂದರ್ಭ ಬದಲಾದಾಗ ಅದೇ ವ್ಯಕ್ತಿಯ ಕುರಿತು ತಮ್ಮ ನಿಲುವನ್ನೇ ಹೇಗೆ ಬದಲಿಸಿಕೊಳ್ಳುತ್ತಾರೆ ಎಂಬುದು ಕಾದಂಬರಿಯ ಗಮನಾರ್ಹ ಅಂಶ.

ಲೇಖಕರು ಪಾತ್ರಗಳ ಸ್ವಭಾವವನ್ನು ಎಲ್ಲೂ ನೇರವಾಗಿ ಹೇಳಿಕೊಡುವುದಿಲ್ಲ. ಅವರ ಮಾತು, ನಡೆ ಮತ್ತು ಇತರರೊಂದಿಗಿನ ಸಂಬಂಧಗಳ ಮೂಲಕವೇ ಪಾತ್ರಗಳು ತೆರೆದುಕೊಳ್ಳುತ್ತವೆ. ಅತಿಯಾದ ಅಲಂಕಾರಕ್ಕೆ ಮೊರೆ ಹೋಗದ ಭಾಷೆ, ಸರಳ ನಿರೂಪಣೆ ಮತ್ತು ಸಹಜ ಸಂಭಾಷಣೆಗಳು ಓದನ್ನು ಸುಗಮಗೊಳಿಸುತ್ತವೆ. ಕೆಲವು ಕಡೆ ಕಥನದ ವೇಗ ನಿಧಾನಗೊಳ್ಳುತ್ತದೆ; ಕೆಲ ಸಂಭಾಷಣೆಗಳು ಮಾಹಿತಿಯ ನಿರೂಪಣೆಗೆ ಸೀಮಿತವಾಗುತ್ತವೆ. ಕೆಲವು ಪಾತ್ರಗಳಿಗೆ ಇನ್ನಷ್ಟು ಆಳ ಸಿಕ್ಕಿದ್ದರೆ, ಹಣ, ಅಧಿಕಾರ, ನೈತಿಕತೆಯ ಪ್ರಶ್ನೆಗಳು ಗಟ್ಟಿ ಆಗಿರುತ್ತಿತ್ತು. v

ಮರುಳಸಿದ್ಧ

ಲೇ: ಡಾ. ಪ್ರಸಾದಸ್ವಾಮಿ ಎಸ್

ಪ್ರ: ಅವಿರತ ಪುಸ್ತಕ

ಸಂ: 9449935103

260920-51-1988800540

Dailyhunt
Disclaimer: This content has not been generated, created or edited by Dailyhunt. Publisher: Prajavani