Dailyhunt Logo
  • Light mode
    Follow system
    Dark mode
    • Play Story
    • App Story
ಮರುಭೂಮಿಯಲ್ಲಿ ಕನ್ನಡದ ಕಂಪು: ಹೆಮ್ಮೆಯ ದುಬೈ ಕನ್ನಡ ಸಂಘದ ದಶಕದ ಸೇವಾ ಪಯಣ

ಮರುಭೂಮಿಯಲ್ಲಿ ಕನ್ನಡದ ಕಂಪು: ಹೆಮ್ಮೆಯ ದುಬೈ ಕನ್ನಡ ಸಂಘದ ದಶಕದ ಸೇವಾ ಪಯಣ

'ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು' ಎಂಬ ರಾಷ್ಟ್ರಕವಿ ಕುವೆಂಪು ಅವರ ಆಶಯದಂತೆ, ಸಪ್ತಸಾಗರದಾಚೆಯ ಅರಬ್‌ ಮರಭೂಮಿಯಲ್ಲಿ ಹೆಮ್ಮೆಯ ದುಬೈ ಕನ್ನಡ ಸಂಘ ಕನ್ನಡದ ಕಂಪನ್ನು ಪಸರಿಸುತ್ತಿದೆ. ಕನ್ನಡ ಭಾಷೆ, ನೆಲ, ನುಡಿ, ಸಂಸ್ಕೃತಿ ಮತ್ತು ಕನ್ನಡಿಗರ ಹಿತಕ್ಕಾಗಿ ಸಂಯುಕ್ತ ಅರಬ್‌ ಸಂಸ್ಥಾನದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಘವು ಕನ್ನಡ ಸೇವೆ ಹಾಗೂ ಸಮಾಜಮುಖಿ ಚಟುವಟಿಕೆಗಳ ಮೂಲಕ ಹತ್ತು ವರ್ಷಗಳ ಪಯಣವನ್ನು ಪೂರ್ಣಗೊಳಿಸಿದೆ.

ಕುಟುಂಬದ ಜವಾಬ್ದಾರಿಗಳನ್ನು ಹೊತ್ತು ಉದ್ಯೋಗ ಅರಸಿ ಸಪ್ತಸಾಗ ದಾಟಿ ಬಂದಿದ್ದ ಕೆಲವು ಸಮಾನ ಮನಸ್ಕ ಕನ್ನಡ ಪ್ರೇಮಿಗಳು, ದುಬೈಯಲ್ಲಿರುವ ಕನ್ನಡಿಗರಿಗೆ ತಮ್ಮಿಂದಾದ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ 2015ರ ಏಪ್ರಿಲ್‌ 4ರಂದು ಸಣ್ಣ ವಾಟ್ಸ್‌ಆಯಪ್‌ ಗುಂಪಿನ ಮೂಲಕ ಈ ಸಂಘವನ್ನು ಆರಂಭಿಸಿದರು. ಅಂದು ಕೆಲವೇ ಸದಸ್ಯರೊಂದಿಗೆ ಆರಂಭವಾದ ಸಂಘ ಇಂದು ಬಲಿಷ್ಠ ಆಡಳಿತ ಸಮಿತಿಯನ್ನು ಹೊಂದಿದ್ದು, 25 ಸಾವಿರಕ್ಕೂ ಅಧಿಕ ದುಬೈ ಕನ್ನಡಿಗ ಸದಸ್ಯರನ್ನು ಒಳಗೊಂಡ ದೊಡ್ಡ ಬಳಗವಾಗಿ ಬೆಳೆದಿದೆ. ಹೀಗೆ ಒಂದು ಸಣ್ಣ ವಾಟ್ಸ್‌ಆಯಪ್‌ ಗುಂಪಿನಿಂದ ಆರಂಭವಾದ ಸಂಘವು ದಶಮಾನೋತ್ಸವ ಆಚರಿಸಿರುವುದು ಅದರ ಸಂಘಟನಾ ಪಯಣದ ಮಹತ್ವದ ಮೈಲಿಗಲ್ಲು.

ಕಳೆದ ಹತ್ತು ವರ್ಷಗಳಿಂದ ಯುಎಇಯಲ್ಲಿ ನೆಲಸಿರುವ ಕನ್ನಡಿಗರಿಗಾಗಿ ಹಲವು ಸಾಂಸ್ಕೃತಿಕ, ಕ್ರೀಡಾ, ಸಾಹಿತ್ಯಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಸಂಘವು, ತನ್ನ ಪ್ರಮುಖ ವಿಭಾಗವಾದ 'ಸಹಾಯ ಹಸ್ತ'ದ ಮೂಲಕ ಸಂಕಷ್ಟದಲ್ಲಿರುವ ಕನ್ನಡಿಗರು ಸೇರಿದಂತೆ ವಿವಿಧ ಸಮುದಾಯಗಳ ಜನರಿಗೆ ನೆರವಿನ ಹಸ್ತ ಚಾಚುತ್ತಿದೆ.

ಉದ್ಯೋಗ ಅರಸುವವರಿಗೆ ನೆರವಿನ ಹಸ್ತ

ತಾಯ್ನಾಡಿನಿಂದ ಉದ್ಯೋಗ ಅರಸಿ ದುಬೈಗೆ ಬರುವ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಸಂಘದ ಪ್ರಮುಖ ಸಮಾಜಮುಖಿ ಕಾರ್ಯಗಳಲ್ಲಿ ಒಂದು. ಇದಕ್ಕಾಗಿ ಉದ್ಯೋಗ ಮೇಳಗಳು ಮತ್ತು ಉದ್ಯೋಗ ಮಾರ್ಗದರ್ಶನ (ಜಾಬ್‌ ಗೈಡೆನ್ಸ್‌) ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಉದ್ಯೋಗಾರ್ಥಿಗಳನ್ನು ನೇರವಾಗಿ ಕಂಪನಿಗಳಿಗೆ ಪರಿಚಯಿಸುವ ಮೂಲಕ ಉದ್ಯೋಗ ಪಡೆಯಲು ನೆರವಾಗಲಾಗುತ್ತದೆ. ಅಲ್ಲದೆ, ಉದ್ಯೋಗಾಕಾಂಕ್ಷಿಗಳನ್ನು ಪ್ರತ್ಯೇಕ ವಾಟ್ಸ್‌ಆಯಪ್‌ ಗುಂಪುಗಳಿಗೆ ಸೇರಿಸಿ, ವಿವಿಧ ಕಂಪನಿಗಳ ವಾಕ್‌-ಇನ್‌ ಸಂದರ್ಶನಗಳು ಮತ್ತು ಉದ್ಯೋಗಾವಕಾಶಗಳ ಮಾಹಿತಿಯನ್ನು ನಿರಂತರವಾಗಿ ಹಂಚಿಕೊಳ್ಳಲಾಗುತ್ತದೆ.

ಉದ್ಯೋಗದ ಆಮಿಷವೊಡ್ಡಿ ದಲ್ಲಾಳಿಗಳು ಮತ್ತು ಇತರರಿಂದ ವಂಚನೆಗೆ ಒಳಗಾದವರಿಗೆ ಆರ್ಥಿಕ ನೆರವು, ಉದ್ಯೋಗ ಮಾಹಿತಿ ಹಾಗೂ ಅಗತ್ಯ ಮಾರ್ಗದರ್ಶನ ನೀಡಲಾಗುತ್ತದೆ. ಉದ್ಯೋಗ ಅರಸಿ ಬಂದು ವಂಚಕರ ಜಾಲಕ್ಕೆ ಸಿಲುಕಿ, ತಾವು ಬಯಸದ ಕೆಲಸಗಳಿಗೆ ನೂಕಲ್ಪಟ್ಟ ಮಹಿಳೆಯರನ್ನು ರಕ್ಷಿಸುವ ಕಾರ್ಯದಲ್ಲಿಯೂ ಸಂಘದ ಮಹಿಳಾ ಘಟಕ ಪ್ರಮುಖ ಪಾತ್ರ ವಹಿಸುತ್ತಿದೆ. ಇಂತಹ ಮಹಿಳೆಯರನ್ನು ಸುರಕ್ಷಿತವಾಗಿ ಕರ್ನಾಟಕಕ್ಕೆ ಕಳುಹಿಸಲು ಅಗತ್ಯ ನೆರವು ಒದಗಿಸಲಾಗುತ್ತದೆ.

ಕೋವಿಡ್‌ ಸಂಕಷ್ಟದಲ್ಲಿ ಮಾನವೀಯ ಸೇವೆ

ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ದುಬೈಯಲ್ಲಿ ಉದ್ಯೋಗ ಕಳೆದುಕೊಂಡವರು, ವಿಸಿಟ್‌ ವೀಸಾದಲ್ಲಿ ಬಂದು ಕೆಲಸ ಸಿಗದೆ ಸಿಲುಕಿಕೊಂಡವರು ಹಾಗೂ ಆಹಾರಕ್ಕೂ ಪರದಾಡುತ್ತಿದ್ದ ಕನ್ನಡಿಗರಿಗೆ ಸಂಘ ನೆರವಿನ ಹಸ್ತ ಚಾಚಿತ್ತು. ಕನ್ನಡಿಗರು ಮಾತ್ರವಲ್ಲದೆ ಇತರ ಭಾರತೀಯರು ಹಾಗೂ ವಿದೇಶಿ ಪ್ರಜೆಗಳಿಗೂ ಆಹಾರ ಸಾಮಗ್ರಿಗಳನ್ನು ತಲುಪಿಸುವ ಕೆಲಸವನ್ನು ಮಾಡಿತ್ತು.

ಕೋವಿಡ್‌ ಅವಧಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಹಲವು ಕುಟುಂಬಗಳು ಮತ್ತು ವ್ಯಕ್ತಿಗಳಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲಾಯಿತು. ಉದ್ಯೋಗ ಅರಸಿ ಬಂದು ಸಿಲುಕಿಕೊಂಡವರು ಹಾಗೂ ಕೆಲಸ ಕಳೆದುಕೊಂಡವರು ತಾಯ್ನಾಡಿಗೆ ಮರಳಲು ವಿಮಾನ ಟಿಕೆಟ್‌ ವ್ಯವಸ್ಥೆಯನ್ನೂ ಮಾಡಲಾಯಿತು. ವಿಮಾನಯಾನ ಸ್ಥಗಿತಗೊಂಡಿದ್ದ ಸಂದರ್ಭದಲ್ಲಿ ಭಾರತೀಯ ರಾಯಭಾರ ಕಚೇರಿಯ ಸಹಯೋಗದೊಂದಿಗೆ ವಿಶೇಷ ವಿಮಾನ ಸೇವೆ ಕಲ್ಪಿಸಿ, ಹಲವರು ತಾಯ್ನಾಡು ತಲುಪಲು ಸಂಘ ನೆರವಾಯಿತು.

ಮೃತದೇಹಗಳ ತಾಯ್ನಾಡಿಗೆ ರವಾನೆ, ಕಾನೂನು ಮತ್ತು ವೈದ್ಯಕೀಯ ನೆರವು

ಯುಎಇಯಲ್ಲಿ ನೈಸರ್ಗಿಕ ಕಾರಣಗಳಿಂದ ಅಥವಾ ಅಕಾಲಿಕವಾಗಿ ಮೃತಪಟ್ಟವರು ಹಾಗೂ ಅಪಘಾತಗಳಲ್ಲಿ ಜೀವ ಕಳೆದುಕೊಂಡವರ ಮೃತದೇಹಗಳನ್ನು ತಾಯ್ನಾಡಿಗೆ ಕಳುಹಿಸುವ ಕಾರ್ಯದಲ್ಲಿಯೂ ಸಂಘ ನೆರವಾಗುತ್ತಿದೆ. ವಿದೇಶದಲ್ಲಿ ಕುಟುಂಬದ ಸದಸ್ಯರನ್ನು ಕಳೆದುಕೊಂಡು ಸಂಕಷ್ಟದಲ್ಲಿರುವವರಿಗೆ ಅಗತ್ಯ ಸಹಕಾರ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ.

ಯುಎಇಯಲ್ಲಿ ನೆಲೆಸಿರುವ ಕನ್ನಡ ವೈದ್ಯರು ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರ ಸಹಯೋಗದೊಂದಿಗೆ ಸಂಕಷ್ಟದಲ್ಲಿರುವ ಕನ್ನಡಿಗರಿಗೆ ಉಚಿತ ಚಿಕಿತ್ಸೆ ಹಾಗೂ ಇತರ ಆರೋಗ್ಯ ಸೇವೆಗಳನ್ನು ಒದಗಿಸಲಾಗುತ್ತದೆ. ಹಾಗೆಯೇ ದುಬೈಯಲ್ಲಿ ನೆಲೆಸಿರುವ ಕನ್ನಡಿಗ ವಕೀಲರ ನೆರವಿನೊಂದಿಗೆ ಕಾನೂನು ಪ್ರಕರಣಗಳಲ್ಲಿ ಸಿಲುಕಿರುವ ಕನ್ನಡಿಗರಿಗೆ ಕಾನೂನುಬದ್ಧ ನೆರವು ಮತ್ತು ಮಾರ್ಗದರ್ಶನ ನೀಡಲಾಗುತ್ತದೆ.

ಪ್ರವಾಹ, ಭೂಕಂಪ ಮತ್ತು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲೂ ನೆರವು

ಕೋವಿಡ್‌ ಸಂಕಷ್ಟ ಹಾಗೂ ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹ ಸೇರಿದಂತೆ ವಿವಿಧ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ತಾಯ್ನಾಡಿನಲ್ಲಿರುವ ಬಡ ಮತ್ತು ಸಂಕಷ್ಟದಲ್ಲಿರುವ ಜನರಿಗೆ ಸಂಘ ನೆರವು ನೀಡಿದೆ. ಆಹಾರ ಕಿಟ್‌ಗಳು ಹಾಗೂ ಇತರ ಅಗತ್ಯ ಸಾಮಗ್ರಿಗಳನ್ನು ಒದಗಿಸುವ ಮೂಲಕ ಸಂತ್ರಸ್ತರ ನೆರವಿಗೆ ನಿಂತಿದೆ.

ರಂಜಾನ್‌ ತಿಂಗಳಲ್ಲಿ ದುಬೈಯ ಕಾರ್ಮಿಕ ಶಿಬಿರಗಳಲ್ಲಿ ವಾಸಿಸುವ ಶ್ರಮಿಕರಿಗೆ ಧರ್ಮ, ಭಾಷೆ ಅಥವಾ ದೇಶದ ಭೇದವಿಲ್ಲದೆ ಆಹಾರ ಕಿಟ್‌ಗಳನ್ನು ವಿತರಿಸಲಾಗುತ್ತದೆ. ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಿಂದ ಸಂಕಷ್ಟಕ್ಕೀಡಾದ ಜನರಿಗೂ ದುಬೈಯಿಂದ ಆಹಾರ ಪದಾರ್ಥಗಳು ಮತ್ತು ಬಟ್ಟೆಬರೆಗಳನ್ನು ಕಳುಹಿಸಿಕೊಡಲಾಗಿದೆ.

ದುಬೈ ಮತ್ತು ಶಾರ್ಜಾ ಭಾಗಗಳಲ್ಲಿ ಭಾರಿ ಮಳೆಯಾಗಿ ಜನಜೀವನ ಅಸ್ತವ್ಯಸ್ತಗೊಂಡ ಸಂದರ್ಭದಲ್ಲಿ, ಮನೆಗಳಿಂದ ಹೊರಬರಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದವರಿಗೆ ಸಂಘದ ಸದಸ್ಯರು ನೆರವಾದರು. ರಸ್ತೆಗಳು ನೀರಿನಿಂದ ತುಂಬಿದ್ದರೂ ಅದನ್ನು ದಾಟಿ ಮನೆಮನೆಗೆ ಆಹಾರ ಸಾಮಗ್ರಿ ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ತಲುಪಿಸುವ ಮೂಲಕ ಮಾನವೀಯ ಸೇವೆ ಸಲ್ಲಿಸಿದ್ದರು.

'ಸರ್ಕಾರಿ ಶಾಲೆ ಉಳಿಸಿ' ಅಭಿಯಾನದಡಿ ಶಾಲೆಗಳ ಜೀರ್ಣೋದ್ಧಾರ

ತಾಯ್ನಾಡಿನ ಶಿಕ್ಷಣ ವ್ಯವಸ್ಥೆ ಮತ್ತು ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೂ ಹೆಮ್ಮೆಯ ದುಬೈ ಕನ್ನಡ ಸಂಘ ಕೊಡುಗೆ ನೀಡುತ್ತಿದೆ. 'ಸರ್ಕಾರಿ ಶಾಲೆ ಉಳಿಸಿ' ಅಭಿಯಾನದಡಿ ಕರ್ನಾಟಕದ ಹದಗೆಟ್ಟಿರುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ದುರಸ್ತಿ, ಬಣ್ಣ ಬಳಿಯುವಿಕೆ ಹಾಗೂ ಜೀರ್ಣೋದ್ಧಾರ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

ತಾಯ್ನಾಡಿನಲ್ಲಿರುವ ವಿವಿಧ ಕನ್ನಡ ಸಂಘಟನೆಗಳ ಸಹಯೋಗದೊಂದಿಗೆ ಪ್ರತಿವರ್ಷ ಆಯ್ದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೆರವು ನೀಡಲಾಗುತ್ತದೆ. ಶಾಲೆಗಳ ಕಟ್ಟಡ ದುರಸ್ತಿ ಮತ್ತು ಬಣ್ಣ ಬಳಿಯುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಕಲಿಕಾ ಸಾಮಗ್ರಿಗಳು ಹಾಗೂ ಇತರ ಮೂಲಸೌಕರ್ಯಗಳನ್ನೂ ಒದಗಿಸಲಾಗುತ್ತದೆ. ದೂರದ ದೇಶದಲ್ಲಿ ನೆಲೆಸಿದ್ದರೂ ತಾಯ್ನಾಡಿನ ಕನ್ನಡ ಶಾಲೆಗಳ ಉಳಿವಿಗಾಗಿ ಕೈಜೋಡಿಸುತ್ತಿರುವುದು ಸಂಘದ ಸಮಾಜಮುಖಿ ಕಾರ್ಯಗಳ ಪ್ರಮುಖ ಭಾಗವಾಗಿದೆ.

ದುಬೈ ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕೋತ್ಸವ

ಯುಎಇಯಲ್ಲಿ ನೆಲೆಸಿರುವ ಕನ್ನಡ ಕುಟುಂಬಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಸಂಘವು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅವುಗಳಲ್ಲಿ 'ದುಬೈ ದಸರಾ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕೋತ್ಸವ' ಪ್ರಮುಖವಾದುದು.

ಈ ಕ್ರೀಡೋತ್ಸವದಲ್ಲಿ ಯುಎಇಯ ಕನ್ನಡ ಕುಟುಂಬಗಳ ಮಕ್ಕಳು, ಮಹಿಳೆಯರು ಮತ್ತು ಪುರುಷರು ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಬ್ಯಾಡ್ಮಿಂಟನ್‌, ಕ್ರಿಕೆಟ್‌, ಫುಟ್‌ಬಾಲ್‌, ವಾಲಿಬಾಲ್‌, ಥ್ರೋಬಾಲ್‌, ಕಬಡ್ಡಿ, ಖೋಖೋ, ಚೆಸ್‌, ಟೇಬಲ್‌ ಟೆನಿಸ್‌ ಸೇರಿದಂತೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ. ಓಟದ ಸ್ಪರ್ಧೆಗಳು ಹಾಗೂ ಮನರಂಜನಾತ್ಮಕ ಆಟಗಳಿಗೂ ಅವಕಾಶ ಕಲ್ಪಿಸಲಾಗುತ್ತದೆ.

ಕ್ರೀಡೆಗಳಷ್ಟೇ ಅಲ್ಲದೆ, ಪ್ರಬಂಧ, ಕವನ, ಭಾಷಣ ಸ್ಪರ್ಧೆ, ರಸಪ್ರಶ್ನೆ, ರಸಮಂಜರಿ ಸೇರಿದಂತೆ ಹಲವು ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನೂ ನಡೆಸಲಾಗುತ್ತದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶ-ವಿದೇಶಗಳಲ್ಲಿ ಕರ್ನಾಟಕದ ಕೀರ್ತಿ ಹೆಚ್ಚಿಸಿದ ಕನ್ನಡಿಗ ಕ್ರೀಡಾಪಟುಗಳನ್ನು 'ದುಬೈ ಕ್ರೀಡಾ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಮಕ್ಕಳ ಪ್ರತಿಭೆಗೆ ವೇದಿಕೆ, ವಿದ್ಯಾರ್ಥಿಗಳಿಗೆ ಪುರಸ್ಕಾರ

ಯುಎಇಯಲ್ಲಿ ಬೆಳೆಯುತ್ತಿರುವ ಕನ್ನಡ ಮಕ್ಕಳಲ್ಲಿ ಭಾಷೆ, ಕಲೆ ಮತ್ತು ಸಂಸ್ಕೃತಿಯ ಆಸಕ್ತಿ ಬೆಳೆಸುವ ಉದ್ದೇಶದಿಂದ 'ಕನ್ನಡ ಮಕ್ಕಳ ಕಲಾ ಪ್ರತಿಭಾ ಸ್ಪರ್ಧೆ'ಯನ್ನು ಆಯೋಜಿಸಲಾಗುತ್ತದೆ. ಹಾಡುಗಾರಿಕೆ, ನೃತ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳಲ್ಲಿ ಆಸಕ್ತಿ ಹೊಂದಿರುವ ಕನ್ನಡ ಮಕ್ಕಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಈ ಕಾರ್ಯಕ್ರಮ ವೇದಿಕೆ ಕಲ್ಪಿಸುತ್ತದೆ.

ಅಲ್ಲದೆ, ಯುಎಇಯಲ್ಲಿ ವ್ಯಾಸಂಗ ಮಾಡುತ್ತಿರುವ ಕನ್ನಡ ವಿದ್ಯಾರ್ಥಿಗಳ ಪೈಕಿ ಉತ್ತಮ ಅಂಕ ಗಳಿಸಿದ ಪ್ರತಿಭಾವಂತರನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ. ಮಕ್ಕಳಲ್ಲಿ ವಿದ್ಯಾಭ್ಯಾಸದ ಆಸಕ್ತಿ ಮತ್ತು ಕಲಾತ್ಮಕ ಪ್ರತಿಭೆಯನ್ನು ಪ್ರೋತ್ಸಾಹಿಸುವುದು ಈ ಕಾರ್ಯಕ್ರಮಗಳ ಉದ್ದೇಶವಾಗಿದೆ. ತಾಯ್ನಾಡಿನಿಂದ ಖ್ಯಾತ ಕಲಾವಿದರನ್ನು ಆಹ್ವಾನಿಸಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅನಿವಾಸಿ ಕನ್ನಡಿಗರಿಗೆ ಸಾಂಸ್ಕೃತಿಕ ರಸದೌತಣವನ್ನೂ ನೀಡಲಾಗುತ್ತದೆ.

ಎಲ್ಲ ಧರ್ಮಗಳ ಹಬ್ಬಗಳಿಗೂ ಒಂದೇ ವೇದಿಕೆ

ವಿವಿಧ ಧರ್ಮ ಮತ್ತು ಸಂಸ್ಕೃತಿಗಳ ಜನರು ಒಟ್ಟಾಗಿ ನೆಲೆಸಿರುವ ಯುಎಇಯಲ್ಲಿ ಪರಸ್ಪರ ಸೌಹಾರ್ದ ಮತ್ತು ಸಾಮರಸ್ಯವನ್ನು ಬೆಳೆಸುವ ಉದ್ದೇಶದಿಂದ ಸಂಘವು ಎಲ್ಲ ಧರ್ಮಗಳ ಹಬ್ಬಗಳನ್ನು ಒಟ್ಟಾಗಿ ಆಚರಿಸುತ್ತದೆ. ರಂಜಾನ್‌ ಇಫ್ತಾರ್‌, ಯುಗಾದಿ, ಕ್ರಿಸ್ಮಸ್‌, ಸಂಕ್ರಾಂತಿ, ಈದ್‌ ಸೇರಿದಂತೆ ವಿವಿಧ ಹಬ್ಬಗಳನ್ನು ಸಂಘದ ಸದಸ್ಯರು ಒಗ್ಗೂಡಿ ಆಚರಿಸುತ್ತಾರೆ.

ಇಂತಹ ಕಾರ್ಯಕ್ರಮಗಳ ಮೂಲಕ ಕನ್ನಡಿಗರ ನಡುವೆ ಪರಸ್ಪರ ಪರಿಚಯ, ಸ್ನೇಹ ಮತ್ತು ಒಗ್ಗಟ್ಟನ್ನು ಬೆಳೆಸುವುದರ ಜೊತೆಗೆ ವಿವಿಧ ಧರ್ಮಗಳ ಸಂಪ್ರದಾಯ ಮತ್ತು ಆಚರಣೆಗಳಿಗೂ ಗೌರವ ನೀಡಲಾಗುತ್ತದೆ.

ವೈದ್ಯರ ದಿನ, ಮಹಿಳಾ ದಿನ ಮತ್ತು ರಕ್ತದಾನ ಶಿಬಿರ

ಯುಎಇಯಲ್ಲಿ ನೆಲಸಿರುವ ಕನ್ನಡ ವೈದ್ಯರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಪ್ರತಿವರ್ಷ ವೈದ್ಯರ ದಿನಾಚರಣೆಯನ್ನು ಸಂಘ ಆಯೋಜಿಸುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸುವುದು ಮತ್ತು ಅವರ ನಡುವಿನ ಸಂಪರ್ಕವನ್ನು ಬಲಪಡಿಸುವುದು ಇದರ ಉದ್ದೇಶವಾಗಿದೆ.

ಅದೇ ರೀತಿ, ಯುಎಇಯ ಕನ್ನಡ ಮಹಿಳೆಯರಿಗಾಗಿ ವಿಶ್ವ ಮಹಿಳಾ ದಿನಾಚರಣೆಯನ್ನೂ ಆಚರಿಸಲಾಗುತ್ತದೆ. ಮಹಿಳೆಯರ ಸಾಧನೆ, ಪ್ರತಿಭೆ ಮತ್ತು ಕೊಡುಗೆಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಕನ್ನಡ ರಾಜ್ಯೋತ್ಸವ ಮತ್ತು ಯುಎಇ ರಾಷ್ಟ್ರೀಯ ದಿನದ ಪ್ರಯುಕ್ತ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ 'ರಕ್ತದಾನ ಮಹಾದಾನ' ಎಂಬ ಸಂದೇಶವನ್ನು ಸಾರಲಾಗುತ್ತಿದೆ. ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಅಗತ್ಯವಿರುವವರಿಗೆ ನೆರವಾಗುವ ಕಾರ್ಯವೂ ಇದರ ಮೂಲಕ ನಡೆಯುತ್ತಿದೆ.

ಕನ್ನಡಿಗರ ವ್ಯಾಪಾರ ವಹಿವಾಟಿಗೆ ವೇದಿಕೆ

'ಕನ್ನಡಿಗರಿಂದ ಕನ್ನಡಿಗರಿಗಾಗಿ ವ್ಯವಹಾರ' ಎಂಬ ಉದ್ದೇಶದೊಂದಿಗೆ ಯುಎಇಯಲ್ಲಿ ಇರುವ ಕನ್ನಡ ಉದ್ಯಮಿಗಳು ಮತ್ತು ವ್ಯಾಪಾರಸ್ಥರನ್ನು ಒಗ್ಗೂಡಿಸಲು ಸಂಘವು ಪ್ರತ್ಯೇಕ ವ್ಯಾಪಾರ ವೇದಿಕೆಯನ್ನು ಸ್ಥಾಪಿಸಿದೆ. ಈ ವೇದಿಕೆಯ ಮೂಲಕ ಕನ್ನಡಿಗ ಉದ್ಯಮಿಗಳು ಪರಸ್ಪರ ಪರಿಚಯ ಬೆಳೆಸಿಕೊಳ್ಳಲು, ವ್ಯಾಪಾರ ವಹಿವಾಟು ನಡೆಸಲು ಹಾಗೂ ತಮ್ಮ ಉದ್ಯಮಗಳ ಮಾಹಿತಿಯನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇದರ ಉದ್ದೇಶ ಯುಎಇಯಲ್ಲಿ ಕನ್ನಡಿಗರ ನಡುವಿನ ಆರ್ಥಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ಬಲಪಡಿಸುವುದಾಗಿದೆ. ಪರಸ್ಪರ ಸಹಕಾರದ ಮೂಲಕ ಕನ್ನಡಿಗರ ಉದ್ಯಮಶೀಲತೆಯನ್ನು ಉತ್ತೇಜಿಸುವ ಕಾರ್ಯವೂ ಈ ವೇದಿಕೆಯ ಮೂಲಕ ನಡೆಯುತ್ತಿದೆ.

ಕನ್ನಡ ಸಾಹಿತ್ಯ ಮತ್ತು ನಾಡು-ನುಡಿಯ ಜಾಗೃತಿ

ಯುಎಇಯಲ್ಲಿ ನೆಲೆಸಿರುವ ಕನ್ನಡ ಸಾಹಿತ್ಯಾಸಕ್ತರು, ಕವನ ಮತ್ತು ಲೇಖನ ಬರಹಗಾರರನ್ನು ಒಗ್ಗೂಡಿಸಿ ಕನ್ನಡ ಸಾಹಿತ್ಯ ಸಂಘದ ಮೂಲಕ ಸಾಹಿತ್ಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಹವ್ಯಾಸಿ ಬರಹಗಾರರಿಗೆ ತಮ್ಮ ಬರವಣಿಗೆಯನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸುವುದರ ಜೊತೆಗೆ, ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಕುರಿತು ಜಾಗೃತಿ ಮೂಡಿಸುವ ಕಾರ್ಯವೂ ನಡೆಯುತ್ತಿದೆ.

ಅನಿವಾಸಿ ಕನ್ನಡಿಗರ ಸಾಹಿತ್ಯಿಕ ಅಭಿರುಚಿಗೆ ಪ್ರೋತ್ಸಾಹ ನೀಡುವುದು, ಹೊಸ ಬರಹಗಾರರನ್ನು ಗುರುತಿಸುವುದು ಮತ್ತು ದೂರದ ದೇಶದಲ್ಲಿಯೂ ಕನ್ನಡ ಸಾಹಿತ್ಯದ ಚಟುವಟಿಕೆಗಳು ನಿರಂತರವಾಗಿರುವಂತೆ ನೋಡಿಕೊಳ್ಳುವುದು ಈ ಸಂಘಟನೆಯ ಪ್ರಮುಖ ಉದ್ದೇಶಗಳಾಗಿವೆ.

ಕನ್ನಡಿಗರ ಒಗ್ಗಟ್ಟಿಗೆ ಸಂಘಟನಾ ಬಲ

ದುಬೈಯಲ್ಲಿ ಆರಂಭವಾದ ಹೆಮ್ಮೆಯ ದುಬೈ ಕನ್ನಡ ಸಂಘವು ಯುಎಇಯ ವಿವಿಧ ಭಾಗಗಳ ಕನ್ನಡಿಗರನ್ನು ಒಗ್ಗೂಡಿಸುವಲ್ಲಿಯೂ ಪಾತ್ರ ವಹಿಸಿದೆ. ರಾಸ್‌ ಅಲ್‌ ಖೈಮಾದಲ್ಲಿ ನೆಲೆಸಿರುವ ಕನ್ನಡಿಗರನ್ನು ವಾಟ್ಸ್‌ಆಯಪ್‌ ಮೂಲಕ ಒಗ್ಗೂಡಿಸಿ, ಅಲ್ಲಿನ ಕನ್ನಡಿಗರಿಗಾಗಿ 'ರಾಕ್‌ ಕನ್ನಡ ಸಂಘ' ರಚನೆಯಾಗುವಲ್ಲಿ ಹೆಮ್ಮೆಯ ದುಬೈ ಕನ್ನಡ ಸಂಘ ಪ್ರಮುಖ ಪಾತ್ರ ವಹಿಸಿದೆ. ಹೊಸ ಸಂಘಟನೆಯ ರಚನೆ ಮತ್ತು ಕಾರ್ಯಚಟುವಟಿಕೆಗಳಿಗೆ ಅಗತ್ಯ ಸಹಕಾರ ನೀಡಿದೆ.

ಇದರ ಜೊತೆಗೆ ದುಬೈ ಕನ್ನಡ ಸಾಹಿತ್ಯ ಸಂಘ, ಅನಿವಾಸಿ ಯುಎಇ ಕನ್ನಡ ವೈದ್ಯರ ವೇದಿಕೆ ಹಾಗೂ ಕನ್ನಡಿಗರ ವ್ಯಾಪಾರ ವೇದಿಕೆಯಂತಹ ವಿವಿಧ ಸಂಘಟನಾ ಪ್ರಯತ್ನಗಳ ಮೂಲಕ ಕನ್ನಡಿಗರ ನಡುವಿನ ಸಂಪರ್ಕ ಮತ್ತು ಸಹಕಾರವನ್ನು ವಿಸ್ತರಿಸುತ್ತಿದೆ.

ಮುಂದಿನ ಪಯಣದಲ್ಲೂ ಕನ್ನಡ ಸೇವೆಯ ಆಶಯ

ಒಂದು ಸಣ್ಣ ವಾಟ್ಸ್‌ಆಯಪ್‌ ಗುಂಪಿನಿಂದ ಆರಂಭವಾಗಿ 25 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಸಂಘಟನೆಯಾಗಿ ಬೆಳೆದಿರುವ ಹೆಮ್ಮೆಯ ದುಬೈ ಕನ್ನಡ ಸಂಘದ ಹತ್ತು ವರ್ಷಗಳ ಪಯಣವು ಕನ್ನಡಿಗರ ಒಗ್ಗಟ್ಟು ಮತ್ತು ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ. ಉದ್ಯೋಗ ಅರಸುವವರಿಗೆ ನೆರವು, ಸಂಕಷ್ಟದಲ್ಲಿರುವವರಿಗೆ ಆಸರೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಹಕಾರ, ಸರ್ಕಾರಿ ಶಾಲೆಗಳ ಅಭಿವೃದ್ಧಿ, ಕ್ರೀಡೆ ಮತ್ತು ಕಲೆಗೆ ಪ್ರೋತ್ಸಾಹ, ಸಾಹಿತ್ಯ ಚಟುವಟಿಕೆಗಳು ಹಾಗೂ ಕನ್ನಡ ಹಬ್ಬಗಳ ಆಚರಣೆ ಹೀಗೆ ಹಲವು ಆಯಾಮಗಳಲ್ಲಿ ಸಂಘ ಕಾರ್ಯನಿರ್ವಹಿಸುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani