Dailyhunt Logo
  • Light mode
    Follow system
    Dark mode
    • Play Story
    • App Story
ಮಸೂದ್‌ ಅಜರ್‌ ಹುಡುಕಿ ಕೊಟ್ಟವರಿಗೆ ₹24 ಲಕ್ಷ ಬಹುಮಾನ ಘೋಷಿಸಿದ ಪಾಕಿಸ್ತಾನ

ಮಸೂದ್‌ ಅಜರ್‌ ಹುಡುಕಿ ಕೊಟ್ಟವರಿಗೆ ₹24 ಲಕ್ಷ ಬಹುಮಾನ ಘೋಷಿಸಿದ ಪಾಕಿಸ್ತಾನ

ಇಸ್ಲಾಮಾಬಾದ್‌ (ಪಾಕಿಸ್ತಾನ): ಭಯೋತ್ಪಾದಕ ಸಂಘಟನೆ ಜೈಷ್‌ -ಎ-ಮೊಹಮ್ಮದ್‌ (ಜೆಇಎಂ) ಸಂಸ್ಥಾಪಕ ಮಸೂದ್‌ ಅಜರ್‌ನನ್ನು ಹುಡುಕಿಕೊಟ್ಟವರಿಗೆ 70 ಲಕ್ಷ ಪಾಕಿಸ್ತಾನಿ ರೂಪಾಯಿ (ಭಾರತದಲ್ಲಿ ಇದರ ಮೌಲ್ಯ ₹24.19 ಲಕ್ಷ) ಬಹುಮಾನ ನೀಡುವುದಾಗಿ ಪಾಕಿಸ್ತಾನ ಘೋಷಿಸಿದೆ. ಅಲ್ಲದೇ, ಪಾಕಿಸ್ತಾನದ ತನಿಖಾ ಸಂಸ್ಥೆಯು (ಎಫ್‌ಟಿಎ) ಪ್ರಮುಖ ಅಪರಾಧಿಗಳ ‍ಪಟ್ಟಿಯಲ್ಲಿ ಅಜರ್‌ನ ಹೆಸರನ್ನು ಹಾಗೆಯೇ ಉಳಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೆಇಎಂನ ಸಂಸ್ಥಾಪಕನಾದ ಅಜರ್‌, 2001ರಲ್ಲಿ ಸಂಸತ್‌ ಭವನದಲ್ಲಿ ನಡೆದ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಹಲವು ಭಯೋತ್ಪಾದಕ ದಾಳಿಗಳಲ್ಲಿ ನೇರವಾಗಿ ಭಾಗಿಯಾಗಿದ್ದು, ದೇಶಕ್ಕೆ ಬೇಕಾದ ಆರೋಪಿ ಯಾಗಿದ್ದಾನೆ. ಕಳೆದೆರಡು ದಶಕಗಳಿಂದ ಭಾರತದ ಮೇಲೆ ನಡೆದ ಹಲವು ದಾಳಿಗಳಲ್ಲಿ ಈತನ ಸಂಘಟನೆ ಕೂಡ ಭಾಗಿಯಾಗಿದೆ. ಈತನಲ್ಲದೇ, ಭಾರತಕ್ಕೆ ಬೇಕಾಗಿರುವ 20 ಭಯೋತ್ಪಾದಕರು ಪಾಕಿಸ್ತಾನದಲ್ಲಿಯೇ ತಲೆಮರೆಸಿಕೊಂಡಿದ್ದಾರೆ.

2008ರಲ್ಲಿ ಮುಂಬೈನ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಂಘಟನೆಯ 10 ಮಂದಿ ಭಯೋತ್ಪಾದಕರು 166 ಮಂದಿಯನ್ನು ಹತ್ಯೆಗೈದಿದ್ದರು. 2016ರ ಪಠಾಣ್‌ಕೋಟ್‌, 2019ರ ಪುಲ್ವಾಮಾ ಬಾಂಬ್‌ ದಾಳಿಯಲ್ಲಿ ಸಂಘಟನೆಯ ಭಯೋತ್ಪಾದಕರು ನೇರವಾಗಿ ಭಾಗಿಯಾಗಿದ್ದರು ಎಂದು ಭಾರತವು ಆರೋಪಿಸುತ್ತಲೇ ಬಂದಿದೆ.

ಅಜರ್‌ ಹೆಸರು ಫೆಡರಲ್‌ ತನಿಖಾ ಸಂಸ್ಥೆಯ ಪ್ರಮುಖ ಪ್ರಕರಣಗಳಲ್ಲಿ ಭಾಗಿಯಾಗಿರುವ ಭಯೋತ್ಪಾದಕರ ಪಟ್ಟಿಯಲ್ಲಿ 2021ರಲ್ಲಿ ಸೇರ್ಪಡೆಯಾಗಿದೆ. 2026ರ ರೆಡ್‌ಬುಕ್‌ನಲ್ಲಿ ಆತನ ಹೆಸರು ಇದೆ.

ಅಜರ್‌ಗೆ ಪಾಕಿಸ್ತಾನವು ಆಶ್ರಯ ಒದಗಿಸಿದೆ ಎಂದು ಭಾರತವು ಮೊದಲಿನಿಂದಲೂ ಆರೋಪಿಸುತ್ತಿದೆ. ಆದರೆ, ಆತ ಅಫ್ಗಾನಿಸ್ತಾನಕ್ಕೆಪರಾರಿಯಾಗಿದ್ದಾನೆ ಎಂದು ಪಾಕಿಸ್ತಾನವು ಪ್ರತಿಪಾದಿಸಿದೆ. ತಮ್ಮ ನೆಲದಲ್ಲಿ ಇಲ್ಲ ಎಂದು ಅಫ್ಗಾನಿಸ್ತಾನದ ತಾಲಿಬಾನ್‌ ಸರ್ಕಾರ ಸ್ಪಷ್ಟಪಡಿಸಿದೆ.

ಮುಂಬರುವ ಅಕ್ಟೋಬರ್‌ ತಿಂಗಳಲ್ಲಿ ವಿಶ್ವ ಹಣಕಾಸು ಮಂಡಳಿ (ಎಫ್‌ಎಟಿಎಫ್‌) ಸಭೆಯು ಪ್ಯಾರಿಸ್‌ನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ಹಾಗೂ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ. ಅದಕ್ಕೂ ಮುನ್ನವೇ, ಪಾಕಿಸ್ತಾನವು ಬಹುಮಾನದ ಮೊತ್ತವನ್ನು ಹೆಚ್ಚಿಸುವ ಮೂಲಕ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಪಾಕಿಸ್ತಾನದ ಗಿಮಿಕ್‌: ಭಾರತ ತಿರುಗೇಟು

ನವದೆಹಲಿ (ಪಿಟಿಐ): 'ಭಯೋತ್ಪಾದನೆಯನ್ನು ಎದುರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ಅಜರ್‌ ಸುಳಿವು ನೀಡಿದವರಿಗೆ ಬಹುಮಾನದ ಮೊತ್ತ ಹೆಚ್ಚಿಸಿರುವುದು ಪಾಕಿಸ್ತಾನದ ಗಿಮಿಕ್‌' ಎಂದು ಭಾರತ ಪ್ರತಿಕ್ರಿಯಿಸಿದೆ.

'ಇಂತಹ ಗಿಮಿಕ್‌ಗಳ ಮೂಲಕ ವಂಚಿಸುವುದು ಪಾಕಿಸ್ತಾನಕ್ಕೆ ಹೊಸತೇನಲ್ಲ. ಈ ರೀತಿಯ ವರಸೆಗಳನ್ನು ಭಾರತವು ಈ ಹಿಂದೆಯೂ ಹಲವು ಸಲ ನೋಡಿದೆ' ಎಂದು ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್‌ ಜೈಸ್ವಾಲ್‌ ತಿಳಿಸಿದ್ದಾರೆ.

'ಭಯೋತ್ಪಾದನೆಯನ್ನು ಪ್ರಾಯೋಜಿಸುವ ರಾಷ್ಟ್ರವೊಂದು ಇಂತಹ ನಕಲಿ ಘೋಷಣೆಗಳನ್ನು ಮಾಡುವುದು ಎಷ್ಟು ಟೊಳ್ಳು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಭಯೋತ್ಪಾದನೆಯನ್ನು ಎದುರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು' ಎಂದು ಒತ್ತಾಯಿಸಿದ್ದಾರೆ.

260916-51-1854062983

Dailyhunt
Disclaimer: This content has not been generated, created or edited by Dailyhunt. Publisher: Prajavani