ಬಕ್ಕಚೌಡಿ(ಜನವಾಡ): 'ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಎಸ್‍ಐಆರ್ ಹೆಸರಲ್ಲಿ ಬಡ ಜನರ ಮತದಾನದ ಹಕ್ಕು ಕಸಿಯಲು ಪ್ರಯತ್ನಿಸುತ್ತಿದೆ' ಎಂದು ಮೈಸೂರಿನ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಆರೋಪಿಸಿದರು.
ಬೀದರ್ ತಾಲ್ಲೂಕಿನ ಬಕ್ಕಚೌಡಿ ಗ್ರಾಮದಲ್ಲಿ ಗೌತಮ ಬುದ್ಧ ಮಹಾದ್ವಾರ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಅನಾವರಣ ಸಮಾರಂಭವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
'ದೇಶದ ಸಂವಿಧಾನವು ಎಲ್ಲ ನಾಗರಿಕರಿಗೆ ಸಮಾನ ಹಕ್ಕು, ರಕ್ಷಣೆ, ಪ್ರಗತಿ ಹಾಗೂ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರ ನೀಡಿದೆ. ಮತದಾನದ ಹಕ್ಕು ಕಿತ್ತುಕೊಳ್ಳುವುದು ಸಂವಿಧಾನದ ಕಗ್ಗೊಲೆ ಆಗಲಿದೆ. ಮತದಾನದ ಹಕ್ಕು ರಕ್ಷಿಸಿಕೊಳ್ಳಲು ಜನರು ಹೋರಾಟ ನಡೆಸುವುದು ಅನಿವಾರ್ಯವಾಗಿದೆ' ಎಂದು ತಿಳಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ, ಬೆಲ್ದಾಳ ಸಿದ್ಧರಾಮ ಶರಣರು, ಜಿ.ಪಂ ಮಾಜಿ ಸದಸ್ಯೆ ಶಕುಂತಲಾ ಬೆಲ್ದಾಳೆ, ಮುಖಂಡರಾದ ಹೊಣ್ಣೂರು ಶ್ರೀನಿವಾಸ್, ಅನಿಲಕುಮಾರ ಬೆಲ್ದಾರ್, ಬಾಬುರಾವ ಪಾಸ್ವಾನ್, ಶ್ರೀಪತರಾವ ದೀನೆ, ರಮೇಶ ಡಾಕುಳಗಿ, ನಿವೃತ್ತ ಪ್ರಾಚಾರ್ಯ ಶಿವಶರಣಪ್ಪ ಹುಗ್ಗಿಪಾಟೀಲ ಮಾತನಾಡಿದರು.
ಭಜನೆ ತಂಡದ ಕಲಾವಿದರು ಭಜನೆ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಧಮ್ಮಾನಂದ ಥೇರೋ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಸಂತೋಷ ಸಂಗಮ, ಕೃಷ್ಣ ಆಣದೂರು, ಪ್ರಭುಲಿಂಗ ವೀರಶೆಟ್ಟಿ ಕಾಂಬಳೆ ಇದ್ದರು. ಪರಮೇಶ್ವರ ಗುಬ್ಬಿ ಸ್ವಾಗತಿಸಿದರು. ಅಂಬಾದಾಸ ಗಾಯಕವಾಡ್ ನಿರೂಪಿಸಿದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260615-33-731083920

