Dailyhunt Logo
  • Light mode
    Follow system
    Dark mode
    • Play Story
    • App Story
ಮತ್ತೆ ಶಾಲೆ ಶುರು; ಮಕ್ಕಳಲ್ಲಿ ಮೂಡಿಸಬೇಕು ಒಂದಷ್ಟು ಹುರುಪು

ಮತ್ತೆ ಶಾಲೆ ಶುರು; ಮಕ್ಕಳಲ್ಲಿ ಮೂಡಿಸಬೇಕು ಒಂದಷ್ಟು ಹುರುಪು

ಷ್ಟು ದಿನಗಳವರೆಗೆ ಬೇಸಿಗೆ ರಜೆಯ ಬಿಡುವು ತೆಗೆದುಕೊಂಡಿದ್ದ ಮಕ್ಕಳು ಶಾಲೆಗೆ ಮತ್ತೆ ಮರಳುತ್ತಿದ್ದಾರೆ. ಮುನಿಸಿನಿಂದಲೋ ಮಂದಹಾಸದಿಂದಲೋ ಶಾಲಾ ಬಸ್ಸುಗಳನ್ನು ಏರುವ ಚಿಣ್ಣರ ಕಲರವ ಮತ್ತೆ ಗರಿಗೆದರುತ್ತಿದೆ. ಹಬ್ಬವೆಂಬಂತೆ ತಳಿರು-ತೋರಣಗಳಿಂದ ಶಾಲೆಗಳನ್ನು ಸಿಂಗರಿಸಿ ಮಕ್ಕಳನ್ನು ಹೂವಿನ ಮೂಲಕ, ಸಿಹಿಯ ಮೂಲಕ ಬರಮಾಡಿಕೊಳ್ಳವ ದೃಶ್ಯಗಳನ್ನು ಮತ್ತೆ ಕಣ್ತುಂಬಿಕೊಳ್ಳಬಹುದು.

ಶಾಲಾರಂಭ ಎಂದರೆ ಮಕ್ಕಳಿಗೆ ಹೊಸವರ್ಷವೆ ಅಲ್ಲವೆ? ಬರಿ ಸಂಭ್ರಮವಲ್ಲ ಅದು! ಸಿಹಿ ಸಂಭ್ರಮ!

ಹೊಸ ಶೈಕ್ಷಣಿಕ ವರ್ಷದ ಹೊಸ್ತಿಲಲ್ಲಿ ಹೊಸತಾದ ಬಣ್ಣ ಬಣ್ಣದ ಪುಸ್ತಕಗಳನ್ನೇ ನೋಡುತ್ತಾ, ಪುಸ್ತಕಗಳಿಗೆ ಬೈಂಡ್ ಮಾಡಿಸಿಕೊಂಡು ತಮಗಿಷ್ಟವಾದ ಲೇಬಲುಗಳನ್ನು ಅಂಟಿಸಿಕೊಂಡು ಅದನ್ನೆ ನೋಡುತ್ತಾ ಮೈಮರೆವ ಮಕ್ಕಳ ಕಣ್ಣುಗಳಲ್ಲಿ ಅದೆಷ್ಟು ಹೊಳಪು ಅದೆಷ್ಟು ಭರವಸೆ? ಅದರೆ ಶೈಕ್ಷಣಿಕ ವರ್ಷದ ಮುಕ್ತಾಯದವರೆಗೂ ಈ ಭರವಸೆ, ಉತ್ಸಾಹ ಉಳಿಯಬೇಕು. ಮಕ್ಕಳು ಬಾಡಿದ ಸಸಿಗಳಂತೆ ಉತ್ಸಾಹ ಕಳೆದುಕೊಂಡು ಯಾಂತ್ರಿಕವಾಗಿ ಶೈಕ್ಷಣಿಕ ವರ್ಷದ ಕಡೆಗೆ ಬರುವುದನ್ನು ತಪ್ಪಿಸಲು ಶಾಲೆಗಳು, ಪೋಷಕರು ವಿದ್ಯಾರ್ಥಿ ಸ್ನೇಹಿ ಕಲಿಕಾ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಬೇಕಿದೆ. ಬಿಡಿ ಬಿಡಿ ಹೂಗಳನ್ನು ಓರಣಗೊಳಿಸಿ ಮನೆಗಳನ್ನು ಅಲಂಕಾರ ಮಾಡಿಕೊಳ್ಳುವಂತೆ ಸಮಾಜ ಎಂಬ ಮನೆಯನ್ನು ಮಕ್ಕಳೆಂಬ ಬಿಡಿ ಹೂಗಳನ್ನು ಓರಣಗೊಳಿಸಿ, ಹುರಿಗೊಳಿಸಿ ಚಂದ ಕಾಣುವಂತೆ ಮಾಡುವ ಜವಾಬ್ದಾರಿ ಶಾಲೆಗಳು ಮತ್ತು ಪೋಷಕರ ಮೇಲಿದೆ.

ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳನ್ನು ಪಟ್ಟಿಮಾಡಿಕೊಳ್ಳುವಾಗ ಶಾಲೆಗಳು ಮಕ್ಕಳಿಗೆ ಹೊರೆ ಎನಿಸಿದ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ. ಶೈಕ್ಷಣಿಕ ಕ್ಯಾಲೆಂಡರಿನಲ್ಲಿ ಮೊದಲೇ ನಿಗದಿ ಪಡಿಸಿದ್ದೇವೆ ಎನ್ನುವ ಕಾರಣಕ್ಕೆ ಧಾವಂತದ ಚಟುವಟಿಕೆಗಳು ಇರಲೇ ಕೂಡದು. ಶಾಲಾಚಟುವಟಿಕೆಗಳ ಹೆಸರಿನಲ್ಲಿ ಅವುಗಳಿಗಾಗಿಯೇ ಮಾರುಕಟ್ಟೆಗಳಲ್ಲಿ ಸಿಗುವ ಸಿದ್ಧ ಸಲಕರಣೆಗಳನ್ನು ತಂದು ಪೋಷಕರು ಕೊಡುವುದಕ್ಕಿಂತ ಮನೆಯಲ್ಲಿಯೇ ಲಭ್ಯವಿರುವ ವಸ್ತುಗಳಲ್ಲಿಯೇ ಶಾಲಾ ಚಟುವಟಿಕೆಗಳನ್ನು ಮಾಡಲು ಪ್ರೇರೇಪಿಸಿ ಮಕ್ಕಳ ಕ್ರಿಯಾಶೀಲತೆಯನ್ನು ಹೆಚ್ಚಿಸಬೇಕು. ಮಿಗಿಲಾಗಿ ಮಕ್ಕಳನ್ನು ಅಂಕಗಳ ಅಂಕೆಯಿಂದ ಹೊರತಂದು ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ. ಶಿಕ್ಷಣವೆಂದರೆ ಶಿಕ್ಷೆಯಲ್ಲ ಅದೊಂದು ಸಂಸ್ಕಾರವೆಂಬುದನ್ನು ಎಲ್ಲರೂ ಅರಿಯಬೇಕು.

ಶಿಸ್ತು ಮತ್ತು ಸಂಯಮದ ವಿಚಾರದಲ್ಲಿ ಮಕ್ಕಳು ಪ್ರಸ್ತುತ ದಿನಮಾನದಲ್ಲಿ ಬಹಳ ಹಿಂದೆ ಇದ್ದಾರೆ. ಹಿರಿಯರು ಅನುಸರಿಸುತ್ತಿರುವ ಜೀವನಶೈಲಿಯೇ ಅಂತಿಮ ಎಂದು ಪರಿಭಾವಿಸುತ್ತಿದ್ದಾರೆ. ಆಲಸಿ ಜೀವನಕ್ಕೆ ಒಗ್ಗಿಕೊಳ್ಳದೆ ಧ್ಯಾನ, ಯೋಗ, ಪ್ರಾಣಾಯಾಮಗಳನ್ನು ಮಾಡುವುದು, ದಿನಪತ್ರಿಕೆ ಓದುವುದು, ಮನೆಕೆಲಸಗಳಲ್ಲಿ ನೆರವಾಗುವುದು, ಶಾಲಾ ವೇಳಾಪಟ್ಟಿಗೆ ಅನುಗುಣವಾಗಿ ತಮ್ಮ ಪುಸ್ತಕಗಳು, ಸಮವಸ್ತ್ರಗಳನ್ನು ಅಣಿಯಾಗಿಸಿಕೊಳ್ಳುವುದು, ತಮ್ಮ ಮನೆಯ, ಶಾಲಾ ಪರಿಸರದ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿ ಹಿರಿಕಿರಿಯರನ್ನು ಗೌರವ ಆದರಗಳಿಂದ ಕಾಣುವ ಮನೋಭಾವಗಳನ್ನು ಬೆಳೆಸಿಕೊಳ್ಳುವಂತೆ ಹಿರಿಯರು ಮಾಡಬೇಕಿದೆ.

ಹೊಸ ಶೈಕ್ಷಣಿಕ ವರ್ಷ ಬಂತೆಂದರೆ ಮಕ್ಕಳಿಗೆ ಬೇಕಾದ ಶಾಲಾ ಬ್ಯಾಗುಗಳು, ಊಟದ ಡಬ್ಬಿಗಳು, ವಾಟರ್ ಬಾಟಲ್‌ಗಳು, ಸ್ಟೇಷನರಿಗಳು ಮೊದಲಾದವುಗಳ ತರಹೇವಾರಿ ಮಾದರಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಮಕ್ಕಳ ಮನಸ್ಸುಗಳು ಬಣ್ಣಗಳ ಆಕರ್ಷಣೆಗೆ ಒಳಗಾಗಿ ಅವುಗಳನ್ನೇ ಬಯಸುತ್ತವೆ. ಅಂಥ ವಸ್ತುಗಳು ವಿಷಕಾರಿ ಪ್ಲಾಸ್ಟಿಕ್ ಮತ್ತು ಹಾನಿಕಾರಕ ರಾಸಾಯನಿಕ ಬಣ್ಣಗಳಿಂದ ಕೂಡಿರುತ್ತವೆ. ಮಕ್ಕಳ ಭವಿಷ್ಯದ ಕನಸನ್ನು ಹೊತ್ತಿರುವ ಪೋಷಕರು ಮಕ್ಕಳನ್ನು ಇಲ್ಲಿ ಬಲವಂತವಾಗಿ ನಿಯಂತ್ರಿಸುವುದಕ್ಕಿಂತ ಮಕ್ಕಳಿಗೆ ತಿಳಿ ಹೇಳಿ ಅವಶ್ಯಕ ಅನ್ನಿಸಿದ್ದನ್ನು ಮಾತ್ರ ಕೊಡಿಸಬೇಕು. ಇದರ ಜೊತೆಗೆ ಶಾಲೆಗಳು ಮತ್ತು ಪೋಷಕ ವರ್ಗ ಮಕ್ಕಳನ್ನು ಕಂಪ್ಯೂಟರ್, ಟ್ಯಾಬ್, ಮೊಬೈಲ್ ಮೊದಲಾದ ಪರದೆಗಳ ಬಳಕೆಯಿಂದ ಆದಷ್ಟು ದೂರ ಇರಿಸಬೇಕಾಗಿದೆ.

ಸಮಯದ ಅಭಾವದಿಂದ ಹೊಟೇಲಿನಲ್ಲಿ ಪ್ಯಾಕ್ ಮಾಡಿದ ಆಹಾರವನ್ನು ಮಕ್ಕಳಿಗೆ ಯಥಾವತ್ತಾಗಿ ಕೊಡುವುದನ್ನು ನಿಲ್ಲಿಸಿ, ಮನೆಯಲ್ಲಿಯೇ ತಯಾರಿಸಿದ ತಿನಿಸುಗಳೇ ಆರೋಗ್ಯಕ್ಕೆ ಹಿತ ಎನ್ನುವುದನ್ನು ಮರೆಯುವಂತಿಲ್ಲ.

Dailyhunt
Disclaimer: This content has not been generated, created or edited by Dailyhunt. Publisher: Prajavani