ಅಟ್ಲಾಂಟಾ: ಪಂದ್ಯದ ಕೊನೆಯ ಕ್ಷಣದಲ್ಲಿ ಭರ್ಜರಿ ಪುನರಾಗಮನ ಮಾಡಿಕೊಂಡಿರುವ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವು, 2026ರ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್‌ನಲ್ಲಿ ಈಜಿಪ್ಟ್ ವಿರುದ್ದ 3-2 ಗೋಲುಗಳ ರೋಚಕ ಜಯ ಸಾಧಿಸಿ ಅಂತಿಮ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದೆ.
ಪಂದ್ಯದ ದ್ವಿತೀಯಾರ್ಧದಲ್ಲಿ ಒಂದು ಹಂತದಲ್ಲಿ 78ನೇ ನಿಮಿಷದವರೆಗೂ ಅರ್ಜೆಂಟೀನಾ 0-2 ಗೋಲುಗಳ ಹಿನ್ನಡೆಯಲ್ಲಿತ್ತು. ಆದರೆ ಅದರ ಬಳಿಕ ಅಕ್ಷರಶಃ ಮೆಸ್ಸಿ ಮ್ಯಾಜಿಕ್ ಪಂದ್ಯದ ಚಿತ್ರಣವನ್ನೇ ಬದಲಿಸಿತ್ತು.
79ನೇ ನಿಮಿಷದಲ್ಲಿ ಅರ್ಜೆಂಟೀನಾ ಪರ ಕ್ರಿಸ್ಟಿಯನ್ ರೊಮೇರೊ ಮೊದಲ ಗೋಲು ಗಳಿಸಿದರೆ, 83ನೇ ನಿಮಿಷದಲ್ಲಿ ನಾಯಕ ಮೆಸ್ಸಿ ಸಮಬಲದ ಗೋಲು ದಾಖಲಿಸಿದರು. ಅಂತಿಮವಾಗಿ ಇಂಜುರಿ ಟೈಮ್‌ನಲ್ಲಿ (ಹೆಚ್ಚುವರಿ ಸಮಯ) ಎಂಝೊ ಫರ್ನಾಂಡೀಸ್ ಗಳಿಸಿದ ಗೋಲು ತಂಡದ ಸತತ ಎರಡನೇ ವಿಶ್ವಕಪ್ ಕನಸನ್ನು ಜೀವಂತವಾಗಿರಿಸಿತು.
ಮೆಸ್ಸಿ ಪೆನಾಲ್ಟಿ ಮಿಸ್...
ಪಂದ್ಯ ಆರಂಭವಾದ ಕೆಲವೇ ನಿಮಿಷಗಳಲ್ಲಿ ಅರ್ಜೆಂಟೀನಾಗೆ ಆಘಾತ ಎದುರಾಯಿತು. 15ನೇ ನಿಮಿಷದಲ್ಲಿ ಈಜಿಪ್ಟ್‌ನ ಮರ್ವಾನ್ ಅತ್ತಿಯಾ ನೀಡಿದ ಕಾರ್ನರ್ ಕಿಕ್ ಅನ್ನು ಬಳಸಿಕೊಂಡ ಯಾಸೆರ್ ಇಬ್ರಾಹಿಂ, ಹೆಡರ್ ಮೂಲಕ ಅದ್ಭುತ ಗೋಲು ಬಾರಿಸಿ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.
ಆ ಬಳಿಕ ಅಲೆಕ್ಸಿಸ್ ಮ್ಯಾಕ್ ಅಲಿಸ್ಟರ್ ಮತ್ತು ಜೂಲಿಯನ್ ಅಲ್ವಾರೆಜ್ ಅವರ ಗೋಲಿನ ಪ್ರಯತ್ನಗಳಿಗೂ ಗೋಲ್‌ಕೀಪರ್ ಶೋಬಿರ್ ತಡೆಯೊಡ್ಡಿದರು. ಈ ನಡುವೆ ಮೆಸ್ಸಿ ಅವರ ಫ್ರೀ-ಕಿಕ್ ಸಹ ಗೋಲ್ ಪೋಸ್ಟ್‌ಗೆ ಬಡಿದು ಹೊರಹೋಯಿತು. ಹೀಗಾಗಿ ಮೊದಲಾರ್ಧದಲ್ಲಿ ಈಜಿಪ್ಟ್ 1-0 ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಲಯೊನೆಲ್ ಮೆಸ್ಸಿ
ಮೆಸ್ಸಿ ಮ್ಯಾಜಿಕ್...
ದ್ವಿತೀಯಾರ್ಧದ ಆರಂಭದಲ್ಲೇ ಈಜಿಪ್ಟ್‌ನ ಮುಸ್ತಫಾ ಝಿಕೊ ಮತ್ತೊಂದು ಗೋಲು ಬಾರಿಸಿದರಾದರೂ ವಿಎಆರ್ ಪರಿಶೀಲನೆಯಲ್ಲಿ ಅದು ಫೌಲ್ ಎಂದು ಸಾಬೀತಾಗಿ ತಿರಸ್ಕರಿಸಲ್ಪಟ್ಟಿತು. ಆದರೆ ಈಜಿಪ್ಟ್‌ನ ದಾಳಿ ನಿಲ್ಲಲಿಲ್ಲ. 67ನೇ ನಿಮಿಷದಲ್ಲಿ ಸ್ಟಾರ್ ಆಟಗಾರ ಮೊಹಮ್ಮದ್ ಸಲಾ ಮತ್ತು ಹೈಸಮ್ ಹಸನ್ ಅವರ ಜಂಟಿ ಆಟದ ನೆರವಿನಿಂದ ಝಿಕೊ ಕೌಂಟರ್ ಅಟ್ಯಾಕ್ ಮೂಲಕ ಭರ್ಜರಿ ಗೋಲು ಗಳಿಸಿ ಈಜಿಪ್ಟ್ ಮುನ್ನಡೆಯನ್ನು 2-0ಗೆ ಹೆಚ್ಚಿಸಿದರು.
ಎರಡು ಗೋಲುಗಳ ಹಿನ್ನಡೆ ಅನುಭವಿಸಿದ ನಂತರ ಅರ್ಜೆಂಟೀನಾದ ಆಟಗಾರರು ಪಂದ್ಯದ ಚಿತ್ರಣವನ್ನೇ ಬದಲಿಸಿದರು. 79ನೇ ನಿಮಿಷದಲ್ಲಿ ಮೆಸ್ಸಿ ನೀಡಿದ ಫ್ರೀ-ಕಿಕ್ ಪಾಸ್ ಅನ್ನು ಕ್ರಿಸ್ಟಿಯನ್ ರೊಮೆರೊ ಹೆಡರ್ ಮೂಲಕ ಗೋಲಾಗಿ ಪರಿವರ್ತಿಸಿ ಹಿನ್ನಡೆಯನ್ನು 1-2ಕ್ಕೆ ತಗ್ಗಿಸಿದರು.
ಇದಾಗಿ ಕೇವಲ ನಾಲ್ಕೇ ನಿಮಿಷಗಳಲ್ಲಿ (83ನೇ ನಿಮಿಷ) ನಾಯಕ ಲಯೊನೆಲ್ ಮೆಸ್ಸಿ ಹೊಡೆದ ಚೆಂಡು ಬಲೆಯೊಳಗೆ ಸೇರಿತು. ಇದರಿಂದ 2-2ರ ಸಮಬಲ ಸಾಧಿಸಿತು. ಪಂದ್ಯವು ಹೆಚ್ಚುವರಿ ಸಮಯಕ್ಕೆ ಹೋಗುವ ಮುನ್ಸೂಚನೆ ಇತ್ತಾದರೂ, ಇಂಜುರಿ ಟೈಮ್‌ನಲ್ಲಿ ಅರ್ಜೆಂಟೀನಾ ರೋಚಕ ಗೆಲುವು ದಾಖಲಿಸಿತು. ಮಿಡ್‌ಫೀಲ್ಡರ್ ಎಂಝೊ ಫರ್ನಾಂಡೀಸ್ ಗೋಲು ಗಳಿಸಿದಾಗ ತಂಡದ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ಕಣ್ಣೀರಿಟ್ಟ ಮೆಸ್ಸಿ...
ನಾಲ್ಕು ವರ್ಷಗಳ ಹಿಂದೆ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಗೆದ್ದು ಚಾಂಪಿಯನ್ ಆದಾಗ ಮೆಸ್ಸಿ ಕೊನೆಯದಾಗಿ ಮೈದಾನದಲ್ಲಿ ಕಣ್ಣೀರು ಸುರಿಸಿದ್ದರು. ಈಗ ಈಜಿಪ್ಟ್ ವಿರುದ್ಧದ ಪಂದ್ಯದಲ್ಲಿ ಸೋಲಿನ ಅಂಚಿನಿಂದ ಪಾರಾಗಿದ್ದಾರೆ. ಈ ಗೆಲುವಿನ ಬಳಿಕ ಮತ್ತೆ ಭಾವುಕರಾದ ಮೆಸ್ಸಿ, ಆನಂದಭಾಷ್ಪವನ್ನು ಸುರಿಸಿದ್ದಾರೆ.
ಒಂದು ವೇಳೆ ಈ ಪಂದ್ಯದಲ್ಲಿ ಸೋತಿದ್ದರೆ ಇದು ಮೆಸ್ಸಿ ಅವರ ಕೊನೆಯ ವಿಶ್ವಕಪ್ ಆಗಿರುತ್ತಿತ್ತು.

