ಆರ್ಲಿಂಗ್ಟನ್ (ಅಮೆರಿಕ): ಅರ್ಜೆಂಟೀನಾ ತಂಡದ ನಾಯಕ ಲಯೊನೆಲ್ ಮೆಸ್ಸಿ ಅವರು ಫಿಫಾ ವಿಶ್ವಕಪ್ ಟೂರ್ನಿಯ ಇತಿಹಾಸದಲ್ಲೇ ಅತಿ ಹೆಚ್ಚು ಗೋಲು ಹೊಡೆದ ಆಟಗಾರನೆಂಬ ದಾಖಲೆ ಬರೆದರು.
ಸೋಮವಾರ ನಡೆದ ಆಸ್ಟ್ರಿಯಾ ವಿರುದ್ಧದ 'ಜೆ' ಗುಂಪಿನ ಪಂದ್ಯದಲ್ಲಿ ಕಾಲ್ಚಳಕ ಮೆರೆದ ದಿಗ್ಗಜ ಆಟಗಾರ ಅವಳಿ ಗೋಲು ಹೊಡೆದರು.
ಇದರೊಂದಿಗೆ ವಿಶ್ವಕಪ್‌ನಲ್ಲಿ ಅವರ ಗೋಲುಗಳ ಸಂಖ್ಯೆ 18ಕ್ಕೆ ಏರಿಕೆಯಾಯಿತು. ಇದರೊಂದಿಗೆ ಜರ್ಮನಿಯ ಸ್ಟ್ರೇಕರ್ ಮಿರೋಸ್ಲಾವ್ ಕ್ಲೋಸ್ ಅವರ (16) ದಾಖಲೆಯನ್ನು ಮೀರಿನಿಂತರು.
ಕಳೆದ ವಾರ ಅಲ್ಜೀರಿಯಾ ವಿರುದ್ಧ ಹ್ಯಾಟ್ರಿಕ್ ಗೋಲು ಬಾರಿಸಿದ್ದ 38 ವರ್ಷ ವಯಸ್ಸಿನ ಮೆಸ್ಸಿ ಅವರು ಕ್ಲೋಸ್ ಅವರ ದಾಖಲೆಯನ್ನು ಸರಿಗಟ್ಟಿದ್ದರು. ಎರಡು ಪಂದ್ಯಗಳಲ್ಲಿ ಒಟ್ಟು 5 ಗೋಲು ಗಳಿಸಿರುವ ಅವರು ಪ್ರಸಕ್ತ ಟೂರ್ನಿಯಲ್ಲಿ 'ಅತ್ಯಧಿಕ ಸ್ಕೋರರ್' ಎನಿಸಿದ್ದಾರೆ.
ಮೆಸ್ಸಿ ಅವರ ಅಮೋಘ ಆಟದ ನೆರವಿನಿಂದ ಹಾಲಿ ಚಾಂಪಿಯನ್ ಅರ್ಜೆಂಟೀನಾ 2-0 ಅಂತರದಿಂದ ಆಸ್ಟ್ರಿಯಾ ತಂಡವನ್ನು ಮಣಿಸಿ ನಾಕೌಟ್ ಪ್ರವೇಶಿಸಿತು. ಅಲ್ಜೀರಿಯಾವನ್ನು ಮಣಿಸಿ ಭರ್ಜರಿಯಾಗಿ ಅಭಿಯಾನ ಆರಂಭಿಸಿದ್ದ ತಂಡವು, ಗುಂಪು ಹಂತದ ತನ್ನ ಕೊನೆಯ ಪಂದ್ಯದಲ್ಲಿ ಇದೇ 28ರಂದು ಜೋರ್ಡನ್ ತಂಡವನ್ನು ಎದುರಿಸಲಿದೆ.
ಪಂದ್ಯದ ಆರಂಭದಲ್ಲಿ ಲಭಿಸಿದ್ದ ಪೆನಾಲ್ಟಿ ಅವಕಾಶದಲ್ಲಿ ಎಡವಿದ್ದ ಮೆಸ್ಸಿ 38ನೇ ನಿಮಿಷದಲ್ಲಿ ಮೈಲಿಗಲ್ಲಿನ 17ನೇ ಗೋಲು ಹೊಡೆದರು. ಈ ವೇಳೆ ಭಾವುಕರಾದ ಅವರನ್ನು ತಂಡದ ಸಹ ಆಟಗಾರರು ಬಿಗಿದಪ್ಪಿ ಸಂಭ್ರಮಿಸಿದರು. ಪಂದ್ಯದ ಕೊನೆಯ ಹೆಚ್ಚುವರಿ ಅವಧಿಯಲ್ಲಿ ಮತ್ತೊಮ್ಮೆ ಪರಾಕ್ರಮ ಮೆರೆದ ಮೆಸ್ಸಿ (90+5ನೇ) ಗೆಲುವಿನ ಅಂತರವನ್ನು ಹೆಚ್ಚಿಸಿದರು.
ಮೆಸ್ಸಿ ಅವರಿಗೆ ಇದು ಆರನೇ ವಿಶ್ವಕಪ್ ಟೂರ್ನಿಯಾಗಿದೆ. 201 ಅಂತರ
ರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅವರು 122 ಗೋಲು ಗಳಿಸಿದ್ದಾರೆ.

