ಬೆಳಗಾವಿ: ಮೀನು ಸಾಕಾಣಿಕೆಯಲ್ಲಿ ಸಾಧನೆ ಮಾಡಿದ ತಾಲ್ಲೂಕಿನ ಬೋಡಕ್ಯಾನಟ್ಟಿಯ ರೈತ ಶಿವಲಿಂಗಪ್ಪ ಸಾತಪ್ಪ ಹುದ್ದಾರ ಅವರ ಯಶಸ್ಸಿನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದ್ದಾರೆ.
ಒಂದು ಎಕರೆಯಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ನಾಲ್ಕು ಕೃಷಿಹೊಂಡ ನಿರ್ಮಿಸಿದ್ದಾರೆ.
ಅದರಲ್ಲಿ ಮುರೆಲ್ (ಕುಚ್ಚು) ತಳಿಯ ಮೀನಿನ ಮರಿ ಸಾಕಿ, ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಈಗ ಶಿವಲಿಂಗಪ್ಪ ಪುತ್ರ ರಾಜು ಹುದ್ದಾರ ಅವರು, ಮೀನು ಸಾಕಾಣಿಕೆ ಕಾಯಕ ಮುನ್ನಡೆಸುತ್ತಿದ್ದಾರೆ.
ಈ ಬಗ್ಗೆ 'ಪ್ರಜಾವಾಣಿ'ಯೊಂದಿಗೆ ಸಂತಸ ಹಂಚಿಕೊಂಡ ರಾಜು ಹುದ್ದಾರ, 'ಪ್ರಧಾನಿ ನರೇಂದ್ರ ಮೋದಿ ಅವರು, 'ಮನ್ ಕಿ ಬಾತ್'ನಲ್ಲಿ ನಮ್ಮ ಯಶಸ್ಸಿನ ಬಗ್ಗೆ ಮಾತನಾಡಿರುವುದು ಖುಷಿ ತಂದಿದೆ. ದೆಹಲಿಯವರೆಗೂ ನಮ್ಮ ಸಾಧನೆ ತಲುಪಿರುವುದು ಸಂತಸ ಇಮ್ಮಡಿಗೊಳಿಸಿದೆ' ಎಂದರು.
'ನನಗೆ ಸೇನೆ ಸೇರುವ ಆಸೆ ಇತ್ತು. ಆದರೆ, ಅದು ಕೈಗೂಡಲಿಲ್ಲ. ಹಾಗಾಗಿ ಸಾಂಪ್ರದಾಯಿಕ ಕೃಷಿಯಿಂದ ಹೊರಬಂದು, ಬಯೋಪ್ಲಾಕ್ ಎನ್ನುವ ತಂತ್ರಜ್ಞಾನ ಬಳಸಿ ಮೂರು ವರ್ಷಗಳಿಂದ ಮೀನು ಸಾಕಾಣಿಕೆ ಮಾಡುತ್ತಿದ್ದೇವೆ. ಆಂಧ್ರಪ್ರದೇಶದ ವಿಜಯವಾಡದಿಂದ ಮೀನಿನ ಮರಿ ತಂದು ಸಾಕುತ್ತಿದ್ದೇವೆ. ಇಲ್ಲಿಂದ ಹೈದರಾಬಾದ್ ಮಾರುಕಟ್ಟೆಗೆ ಕಳುಹಿಸುತ್ತಿದ್ದು, ಉತ್ತಮ ಆದಾಯ ಬರುತ್ತಿದೆ' ಎಂದು ಹರ್ಷ ವ್ಯಕ್ತಪಡಿಸಿದರು.

