ಬೆಂಗಳೂರು/ಹೊಸದೆಹಲಿ: 'ಕಳೆದ ಒಂದು ದಶಕದಿಂದ ನರೇಂದ್ರ ಮೋದಿ ಮತ್ತು ಆರ್‌ಎಸ್‌ಎಸ್‌ನವರ ವಿರುದ್ಧ ನಾನು ಹೋರಾಡುತ್ತಿದ್ದು, ಅವರ ಮನಸ್ಥಿತಿ ಬಗ್ಗೆ ಚೆನ್ನಾಗಿ ಅರಿಯಬಲ್ಲೆ. ಅವರ ವ್ಯಕ್ತಿತ್ವದ ಮೂಲ ಸ್ವಭಾವವೇ ಹೇಡಿತನ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಎಸ್‌ಐಆರ್ ವಿರುದ್ಧ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸುತ್ತಿರುವುದರ ಕುರಿತು ಕಾಂಗ್ರೆಸ್ ನಾಯಕ ವಿಡಿಯೊ ಸಂದೇಶ ಹಂಚಿಕೊಂಡಿದ್ದು, 'ನಾವು ನಿಮ್ಮನ್ನು ಸುತ್ತುವರಿದಿದ್ದೇವೆ, ಹಿಂಜರಿಯುವ ಪ್ರಶ್ನೆಯೇ ಇಲ್ಲ' ಎಂದು ಹೇಳಿದ್ದಾರೆ. ಅಲ್ಲದೆ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ಮುಂದುವರಿಸುವಂತೆ ಯುವಜನರಿಗೆ ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋಭಾಲ್ ಈ ಕಥೆಯ 'ವಿಲನ್‌ಗಳು' ಎಂದು ವಾಗ್ದಾಳಿ ನಡೆಸಿದ್ದಾರೆ.
|
ಪೊಲೀಸರ ಬಗ್ಗೆ ಭಯ ಇಲ್ಲ:
'ಮಿಸ್ಟರ್ ಮೋದಿ, ನಿಮಗೆ ಬೇಕಾದದ್ದನ್ನು ಮಾಡಿ. 10,000, 20,000, ಅಥವಾ 50,000 ಪೊಲೀಸರನ್ನು ಬೇಕಾದರೂ ಕರೆಯಿಸಿ, ಯಾರನ್ನಾದರೂ ನಿಯೋಜಿಸಿ. ಎಲ್ಲ ನಾಯಕರನ್ನು ಬಂಧಿಸಿ, ಯುವ ಜನರನ್ನು ಬಂಧಿಸಿ, ನಮ್ಮೆಲ್ಲರನ್ನೂ ಸೆರೆಮನೆಗೆ ತಳ್ಳಿ. ನಾವು ನಿಮ್ಮನ್ನು ಸುತ್ತುವರಿಯುತ್ತಿದ್ದೇವೆ ಮತ್ತು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ನನ್ನ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ. ನಮಗೆ ಅಗತ್ಯವಿರುವ ಎಲ್ಲಾ ಮಾಹಿತಿ ಲಭ್ಯವಿದೆ' ಎಂದು ಅವರು ಹೇಳಿದ್ದಾರೆ.
ಸಂವಿಧಾನ ರಕ್ಷಣೆ ನಮ್ಮ ಗುರಿ:
'ದೇಶದ ಸಂವಿಧಾನವನ್ನು ರಕ್ಷಿಸಲು ನಾವು ದೃಢಸಂಕಲ್ಪ ಮಾಡಿದ್ದೇವೆ. ಕಳೆದ 10-15 ವರ್ಷಗಳಲ್ಲಿ ದೇಶಕ್ಕೆ ಎಸಗಿದ ಅನ್ಯಾಯವನ್ನು ಎಂದಿಗೂ ಪುನರಾವರ್ತಿಸಲು ಬಿಡುವುದಿಲ್ಲ' ಎಂದು ಅವರು ಎಚ್ಚರಿಸಿದ್ದಾರೆ.
ಪ್ರತಿಭಟನೆ ಮುಂದುವರಿಸುತ್ತಿರುವ ದೇಶದ ಯುವಜನತೆಯನ್ನು ಶ್ಲಾಘಿಸಿರುವ ರಾಹುಲ್, 'ದೇಶದ ಯುವಜನರೇ, ನಿಮ್ಮ ಬಗ್ಗೆ ನನಗೆ ಹೆಮ್ಮೆಯಿದೆ. ಪ್ರತಿಭಟನೆಯನ್ನು ಮುಂದುವರಿಸಿ, ನಾವು ನಿಮ್ಮ ಬೆಂಬಲಕ್ಕೆ ಅಚಲವಾಗಿ ನಿಂತಿದ್ದೇವೆ' ಎಂದು ಹೇಳಿದ್ದಾರೆ.
ಸಂವಿಧಾನದ ಮೇಲೆ ದಾಳಿ ನಡೆಸಿದವರನ್ನು ಸೋಲಿಸುವುದೇ ನಮ್ಮ ಅಂತಿಮ ಗುರಿ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

