ಮೊಳಕಾಲ್ಮುರು: ಪಟ್ಟಣದಲ್ಲಿ ಶುಕ್ರವಾರ ತಹಶೀಲ್ದಾರ್ ಟಿ. ನಾಗವೇಣಿ ನೇತೃತ್ವದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಪ್ರಗತಿ ಕುರಿತು ಮಾಹಿತಿ ಸಂಗ್ರಹಿಸಿದರು.
'ತಾಲ್ಲೂಕು ಹಾಗೂ ಪಟ್ಟಣ ಆಂಧ್ರಪ್ರದೇಶ ಗಡಿಭಾಗದಲ್ಲಿದ್ದು, ಕೆಲವರ ಮತಗಳು ಎರಡೂ ರಾಜ್ಯಗಳಲ್ಲಿ ಇರಬಹುದು.
ಅಂತಹವರು ಪರಿಷ್ಕರಣೆ ಸಮಯದಲ್ಲಿ ನಿಗದಿತ ಅರ್ಜಿ ತುಂಬುವ ಮೂಲಕ ಇಷ್ಟ ಬಂದ ರಾಜ್ಯದ ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಂಡು ಇನ್ನೊಂದು ರಾಜ್ಯದಲ್ಲಿನ ಹೆಸರು ರದ್ದುಪಡಿಸಬಹುದಾಗಿದೆ. ಈವರೆಗೆ ಇಂತಹ ಪ್ರಕರಣ ವರದಿಯಾಗಿಲ್ಲ' ಎಂದು ತಹಶೀಲ್ದಾರ್ ಹೇಳಿದರು.
2002ರ ಮತಪಟ್ಟಿ ಪ್ರಕಾರ ಮತದಾರರ ಪಟ್ಟಿ ಮ್ಯಾಪಿಂಗ್ ಕಾರ್ಯ ಜುಲೈ 3ರ ಸಂಜೆಗೆ ಶೇ 90ರಷ್ಟು ಪೂರ್ಣಗೊಂಡಿದೆ. ವಿಧಾನಸಭಾ ಕ್ಷೇತ್ರದ ಶೇ 70ರಷ್ಟು ಮನೆಗಳಿಗೆ ಎಸ್‌ಐಆರ್ ಅರ್ಜಿಗಳನ್ನು ವಿತರಣೆ ಮಾಡಲಾಗಿದ್ದು, ಅರ್ಜಿ ಪಡೆಯಲು ಹಾಗೂ ತುಂಬಿ ವಾಪಸ್ ನೀಡಲು ಜುಲೈ 29ರವರೆಗೂ ಅವಕಾಶವಿದೆ' ಎಂದು ತಿಳಿಸಿದರು.
'ಬಿಎಲ್‌ಒ ಮತ್ತು ಪರಿಷ್ಕರಣೆ ಸಿಬ್ಬಂದಿಗೆ ಆಯಪ್ ನಿರ್ವಹಣೆ, ಅರ್ಜಿ ಭರ್ತಿ ಮಾಡುವುದು ಸೇರಿ ಎಲ್ಲ ಬಗೆಯ ತರಬೇತಿ ನೀಡಲಾಗಿದ್ದು, ಯಾವುದಾದರೂ ತಾಂತ್ರಿಕ ಸಮಸ್ಯೆ, ಗೊಂದಲ ಎದುರಾದಲ್ಲಿ ತಾಲ್ಲೂಕು ಕಚೇರಿ ಗಮನಕ್ಕೆ ತಂದರೆ ಪರಿಹರಿಸಲಾಗುವುದು' ಎಂದು ತಿಳಿಸಿದರು.
ಶಿರಸ್ತೇದಾರ್ ಬಿ. ಗೋಪಾಲ್, ಬಿಎಲ್‌ಒ ಪ್ರದೀಪ್, ಚುನಾವಣಾ ಶಾಖೆಯ ಗೌಡ ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-44-1249359297

