ಆಲೂರು (ಹಾಸನ): ಮುಸ್ಲಿಂ ಧರ್ಮಗುರುಗಳಿಗೆ ಅವಮಾನ ಮಾಡಿದ್ದಾರೆ ಎಂಬ ದೂರಿನ ಮೇಲೆ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಸ್ವಗ್ರಾಮ ಕೆರೆಹಳ್ಳಿಯಲ್ಲಿದ್ದ ಅವರನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು ಶುಕ್ರವಾರ ಬಂಧಿಸಿ, ಕರೆದೊಯ್ದರು.
ಮೌಲ್ವಿಗಳ ವಿರುದ್ಧ ನಿಂದನಾರ್ಹ ಹೇಳಿಕೆ ನೀಡಿದ್ದಾರೆ ಎಂದು ಅಬ್ದುಲ್ ರಜಾಕ್ ಎಂಬುವರು ಕೆರೆಹಳ್ಳಿ ವಿರುದ್ಧ ದೂರು ನೀಡಿದ್ದರು. ದೂರಿನ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದು ದೂರಿನಲ್ಲಿ ಉಲ್ಲೇಖಿಸಿರುವ ಆರೋಪಗಳ ಕುರಿತು ಕಾನೂನು ಪ್ರಕ್ರಿಯೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪುನೀತ್, 'ನನಗೆ ಜೀವ ಬೆದರಿಕೆ ವಿಚಾರವಾಗಿ ನಾನು ಅಬ್ದುಲ್ ರಜಾಕ್ ವಿರುದ್ಧ ದೂರು ನೀಡಿದ್ದೇನೆ. ಅವರನ್ನು ಬಂಧಿಸದೆ ದೂರುದಾರನಾದ ನನ್ನನ್ನೇ ಬಂಧಿಸಲಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಅಧಿಕಾರ ದುರ್ಬಳಕೆ. ನನ್ನ ವಿರುದ್ಧ ಪೂರ್ವನಿಯೋಜಿತ ಷಡ್ಯಂತ್ರ ನಡೆಸಲಾಗಿದೆ' ಎಂದು ಆರೋಪಿಸಿದರು. ಪುನೀತ್ ಅವರನ್ನು ಪೊಲೀಸರು ಬಂಧಿಸಿ ಕರೆದೊಯ್ಯುವ ವೇಳೆ ಅವರ ತಾಯಿ ಕಣ್ಣೀರಿಟ್ಟರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-4-1662769405

