ಮೂಡಿಗೆರೆ: 'ವಿಶ್ವ ಹಿಂದೂ ಪರಿಷತ್‌ನ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಭರತ್ ಕನ್ನೆಹಳ್ಳಿ ಉತ್ತಮ ಸಂಘಟನಾಕಾರರಾಗಿದ್ದರು. ಹುಟ್ಟು ಸಾವಿನ ನಡುವೆ ಬದುಕು ಹೇಗಿರಬೇಕು ಎಂದು ಅವರು ತೋರಿಸಿ ಕೊಟ್ಟಿದಾರೆ' ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಹೇಳಿದರು.
ಇತ್ತೀಚೆಗೆ ನಿಧನರಾದ ಭರತ್ ಕನ್ನೆಹಳ್ಳಿ ಅವರಿಗೆ ಪಟ್ಟಣದ ಅಡ್ಯಂತಾಯ ರಂಗಮಂದಿರದಲ್ಲಿ ಶುಕ್ರವಾರ ಹಿಂದೂ ಮಹಾಗಣಪತಿ ಸೇವಾ ಸಮಿತಿ ವತಿಯಿಂದ ಏರ್ಪಡಿಸಿದ್ದ ನುಡಿನಮನ ಸಭೆಯಲ್ಲಿ ಅವರು ಮಾತನಾಡಿದರು.
ಸದಾ ಹಸನ್ಮುಖಿಯಾಗಿದ್ದ ಭರತ್ ಅವರು ಎರಡು ದಶಕಗಳಿಂದ ವಿಶ್ವ ಹಿಂದು ಪರಿಷತ್ ಮೂಲಕ ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಹೊಸದೊಂದು ಗಣಪತಿ ಪೆಂಡಾಲ್‌ಗೆ ಅವರ ಹೆಸರು ಇಡುವಂತೆ ಯೋಚಿಸಲಾಗಿದೆ' ಎಂದು ಹೇಳಿದರು.
ಮುಖಂಡ ಬಿ.ಬಿ. ನಿಂಗಯ್ಯ ಮಾತನಾಡಿ, 'ಎಲ್ಲರ ಒಡನಾಡಿಯಾಗಿದ್ದ ಭರತ್ ಇನ್ನಿಲ್ಲ ಎಂಬುದನ್ನು ಗ್ರಹಿಸಲು ಸಾಧ್ಯವಿಲ್ಲ. ಸಣ್ಣ ವಯಸ್ಸಿನಲ್ಲಿಯೇ ಭಾರಿ ಜನರ ಪ್ರೀತಿ ಸಂಪಾದಿಸಿದ್ದರು. ಚುನಾವಣೆ ಸಂದರ್ಭ ಮಾತ್ರ ಪಕ್ಷ ಎಂದು ಇದ್ದ ಅವರು, ನಂತರ ನಾವೆಲ್ಲ ಒಂದೇ ಎಂಬ ಭಾವನೆಯಲ್ಲಿ ಬೆರೆಯುತ್ತಿದ್ದರು. ಯಾರೇ ಸಮಸ್ಯೆಯಲ್ಲಿ ಇದ್ದರು ತಕ್ಷಣಕ್ಕೆ ಧಾವಿಸುತ್ತಿದ್ದ ಅವರ ಕುಟುಂಬದ ಜೊತೆ ನಾವು ಸದಾ ಜೊತೆಗಿರಬೇಕು' ಎಂದು ಹೇಳಿದರು.
ಭರತ್ ಪತ್ನಿ, ಮಕ್ಕಳು, ಸಹೋದರರು, ಮುಖಂಡ ಎಂ.ಪಿ. ಕುಮಾರಸ್ವಾಮಿ, ಹಳಸೆ ಶಿವಣ್ಣ, ಬಿ.ಎಲ್. ಸಂದೀಪ್, ಗಣಪತಿ ಸೇವಾ ಸಮಿತಿ ಅಧ್ಯಕ್ಷ ಅನುಕುಮಾರ್, ವಿನೋದ್ ಕಣಚೂರು, ಜೆ.ಎಸ್. ರಘು, ದೀಪಕ್ ದೊಡ್ಡಯ್ಯ, ಸುಷ್ಮಾ ವಿಭಾ, ಮಹೇಶ್ ಸಾಲುಮರ, ಸಚಿನ್ ಬಾನಹಳ್ಳಿ, ಪ್ರವೀಣ್ ಮಗ್ಗಲಮಕ್ಕಿ, ಮಂಜುನಾಥ್ ಪಾಲ್ಗೊಂಡಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-126-1382662799

