Thursday, 22 Oct, 6.08 am ಪ್ರಜಾವಾಣಿ

ಮೈಸೂರು
ಮುಖ್ಯಮಂತ್ರಿ ಬದಲಾವಣೆಯಿಲ್ಲ: ವಿಶ್ವನಾಥ್‌

ಮೈಸೂರು: 'ಮುಖ್ಯಮಂತ್ರಿ ಹುದ್ದೆಯಿಂದ ಬಿ.ಎಸ್‌.ಯಡಿಯೂರಪ್ಪ ಅವರ ಬದಲಾವಣೆಯ ಪ್ರಶ್ನೆಯೇ ಇಲ್ಲ. ಅವಧಿ ಪೂರೈಸಲಿದ್ದಾರೆ' ಎಂದು ವಿಧಾನ ಪರಿಷತ್ ಸದಸ್ಯ ಎಚ್‌.ವಿಶ್ವನಾಥ್ ಬುಧವಾರ ಇಲ್ಲಿ ತಿಳಿಸಿದರು.

'ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ ಕೇವಲ ಹೇಳಿಕೆಯಷ್ಟೇ. ಎಲ್ಲಿಯೂ ಮುಖ್ಯಮಂತ್ರಿ ಬದಲಾವಣೆ ವಿಚಾರ ಪ್ರಸ್ತಾಪವಾಗಿಲ್ಲ. ಯತ್ನಾಳ ಹೇಳಿಕೆ ಬಿಜೆಪಿಯವರ ಅನಿಸಿಕೆಯಲ್ಲ. ಪಕ್ಷದ ನಿರ್ಧಾರವೇ ಬೇರೆ. ವೈಯಕ್ತಿಕ ಹೇಳಿಕೆಗಳೇ ಬೇರೆ' ಎಂದು ತಮ್ಮನ್ನು ಭೇಟಿಯಾದ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

'ಸಾ.ರಾ.ಮಹೇಶ್ ಕೊಚ್ಚೆಗುಂಡಿ ಎಂದು ಈಗಾಗಲೇ ಹೇಳಿದ್ದೇನೆ. ನಾನು ಶುಭ್ರವಾಗಿದ್ದೇನೆ. ಕೊಚ್ಚೆಗುಂಡಿಗೆ ಕಲ್ಲು ಹಾಕಿ ನನ್ನ ಮೇಲೆಯೇ ಕೊಚ್ಚೆ ಹಾರಿಸಿಕೊಳ್ಳುವುದಿಲ್ಲ' ಎಂದು ತಮ್ಮನ್ನು 'ಕಳ್ಳಹಕ್ಕಿ' ಎಂದು ಕರೆದ ಜೆಡಿಎಸ್‌ ಶಾಸಕರಿಗೆ ಟಾಂಗ್‌ ನೀಡಿದರು.

‌'ನಂಜನಗೂಡು ವಿಧಾನಸಭಾ ಕ್ಷೇತ್ರದ ಮತದಾರರು ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವಂತಿದ್ದರೆ, ಸಂಸದ ಪ್ರತಾಪಸಿಂಹ ಅಲ್ಲಿನ ಜನ ಹಾಗೂ ಶಾಸಕರ ಬಗ್ಗೆ ಹುಷಾರಾಗಿ ಮಾತನಾಡುತ್ತಿದ್ದರು. ಕ್ಷೇತ್ರಕ್ಕೆ ಸಂಬಂಧವಿಲ್ಲದಿದ್ದರಿಂದಲೇ ಹೀಗೆ ಮಾತನಾಡಿದ್ದಾರೆ' ಎಂದು ಸ್ವಪಕ್ಷೀಯ ಸಂಸದರ ವಿರುದ್ಧವೂ ಕುಟುಕಿದರು.

'ಶಾಸಕ-ಸಂಸದ ಇಬ್ಬರೂ ಕೂತು ಮಾತನಾಡಿ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಜಾತಿ ಬಳಕೆ ಮಾಡಿಕೊಳ್ಳಬಾರದು' ಎಂದು ನಂಜನಗೂಡು ಶಾಸಕ ಬಿ.ಹರ್ಷವರ್ಧನ್‌ಗೆ ವಿಶ್ವನಾಥ್ ಸಲಹೆ ನೀಡಿದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top