ರಾಮನಗರ: ನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ, ಸೌಲಭ್ಯಗಳ ವಿತರಣೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭಕ್ಕಾಗಿ ಮಂಗಳವಾರ ನಿಗದಿಯಾಗಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭೇಟಿಯು ನ. 5ಕ್ಕೆ ಮುಂದೂಡಿಕೆಯಾಗಿದೆ.
ಈ ಕುರಿತು ನಗರಸಭೆಯ ತಮ್ಮ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ನಗರಸಭೆ ಅಧ್ಯಕ್ಷ ಕೆ.
ಶೇಷಾದ್ರಿ ಶಶಿ, 'ಮುಖ್ಯಮಂತ್ರಿ ಅವರು ನ. 3ಕ್ಕೆ ರಾಮನಗರಕ್ಕೆ ಬರಲು ಸಮಯ ನಿಗದಿಯಾಗಿತ್ತು. ಅದಕ್ಕೆ ಅಗತ್ಯ ತಯಾರಿ ಕೂಡ ನಡೆದಿತ್ತು. ಆದರೆ, ಉಪ ಚುನಾವಣೆ ನಡೆಯಲಿರುವ ಹಿರಿಯೂರಿ ನಲ್ಲಿ ಬಹುಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಅನಿವಾರ್ಯತೆ ಕಾರಣಕ್ಕೆ ರಾಮನಗರ ಭೇಟಿಯನ್ನು 2 ದಿನ ಮುಂದೂಡಿ ನ. 5ಕ್ಕೆ ಬರುವುದಾಗಿ ತಿಳಿಸಿದ್ದಾರೆ' ಎಂದರು.
'ಸಂಜೆ 4 ಗಂಟೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಅವರು ಮೊದಲಿಗೆ ನಗರಸಭೆ ಆವರಣದಲ್ಲಿ ಪ್ರತಿಷ್ಠಾಪಿಸಿರುವ ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣಗೊಳಿಸಲಿದ್ದಾರೆ. ಬಳಿಕ ಡಾ. ದೇವರಾಜ ಅರಸು ಸಭಾಂಗಣ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಗಡಿಯಾರ ಗೋಪುರ ಹಾಗೂ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಫುಡ್ಸ್ಟ್ರೀಟ್ ಉದ್ಘಾಟಿಸಲಿದ್ದಾರೆ. ನಂತರ, ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ನಗರಸಭೆಯ ವಿವಿಧ ಸವಲತ್ತುಗಳನ್ನು ವಿತರಿಸಲಿದ್ದಾರೆ' ಎಂದು ತಿಳಿಸಿದರು.
'ಇದೇ ವೇದಿಕೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವೂ ನಡೆಯಲಿದೆ. ಅಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಕೆಂಗಲ್ ಹನುಮಂತಯ್ಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದ ನಂತರ ರಸಮಂಜರಿ ಆಯೋಜಿಸಲಾಗಿದೆ. ದಿವ್ಯ ರಾಮಚಂದ್ರ ತಂಡದಿಂದ ರಸಮಂಜರಿ, ಹಾಸ್ಯ ಕಲಾವಿದ ಮಿಮಿಕ್ರಿ ಗೋಪಿ ಹಾಗೂ ಪಾವಗಡ ಮಂಜು ಅವರು ಜನರನ್ನು ರಂಜಿಸಲಿದ್ದಾರೆ' ಎಂದು ಹೇಳಿದರು.
261104-14-369319803

