Dailyhunt
ಮುಂಬೈ ಎದುರು‌ ಚೆನ್ನೈ 'ಸೂಪರ್‌ ಕಿಂಗ್'

ಮುಂಬೈ ಎದುರು‌ ಚೆನ್ನೈ 'ಸೂಪರ್‌ ಕಿಂಗ್'

ಚೆನ್ನೈ (ಪಿಟಿಐ): ಪ್ರಸಕ್ತ ಐಪಿಎಲ್‌ನಲ್ಲಿ ಏಳನೇ ಸೋಲು ಕಂಡ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್‌ನ ಪ್ಲೇಆಫ್‌ ಕನಸು ಬಹುತೇಕ ಕಮರಿತು.

ಚೆಪಾಕ್ ಕ್ರೀಡಾಂಗಣದಲ್ಲಿಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಆಲ್‌ರೌಂಡ್‌ ಆಟವಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 8 ವಿಕೆಟ್‌ಗಳಿಂದ ಮುಂಬೈ ತಂಡವನ್ನು ಮಣಿಸಿತು.

ಅದರೊಂದಿಗೆ, ಪ್ಲೇ-ಆಫ್‌ ತಲುಪುವ ಅವಕಾಶವನ್ನೂ ಜೀವಂತಗೊಳಿಸಿತು. ಆದರೆ, ಐದು ಬಾರಿಯ ಚಾಂಪಿಯನ್‌ ಮುಂಬೈ ತಂಡವು ದುರ್ಬಲ ಆಟಕ್ಕೆ ಮತ್ತೆ ಬೆಲೆ ತೆರಬೇಕಾಯಿತು.

ವೇಗಿ ಅನ್ಷುಲ್ ಕಂಬೋಜ್ (32ಕ್ಕೆ3) ಹಾಗೂ ಅಫ್ಗಾನಿಸ್ತಾನದ ಎಡಗೈ ಸ್ಪಿನ್ನರ್ ನೂರ್ ಅಹಮದ್ (26ಕ್ಕೆ2) ಮೋಡಿಯ ಎದುರು ಮುಂಬೈ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 159 ರನ್ ಗಳಿಸಿತು. ಚೆನ್ನೈ ತಂಡವು ನಾಯಕ ಋತುರಾಜ್‌ ಗಾಯಕವಾಡ್‌ ಹಾಗೂ ಯುವ ಪ್ರತಿಭೆ ಕಾರ್ತಿಕ್‌ ಶರ್ಮಾ ಅವರ ಅರ್ಧಶತಕ ಗಳ ಬಲದಿಂದ 18.1 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ನಿರಾಯಾಸವಾಗಿ ಗುರಿ ಮುಟ್ಟಿತು.

ಲಯದಲ್ಲಿದ್ದ ಸಂಜು ಸ್ಯಾಮ್ಸನ್‌ (11; 9ಎ) ಎರಡು ಬೌಂಡರಿ ಗಳಿಸಿ, ಆಕ್ರಮಣಕಾರಿ ಆಟಕ್ಕೆ ಮುಂದಾದರು. ಆದರೆ, ವೇಗಿ ಜಸ್‌ಪ್ರೀತ್‌ ಬೂಮ್ರಾ ಅವರು ಹಾಕಿದ ಎರಡನೇ ಓವರ್‌ನ ಕೊನೆಯ ಎಸೆತದಲ್ಲಿ ರಿಯಾನ್‌ ರಿಕೆಲ್ಟನ್‌ ಅವರಿಗೆ ಕ್ಯಾಚ್‌ ಆದರು.

ಉರ್ವಿಲ್‌ ಪಟೇಲ್‌ 12 ಎಸೆಗಳಲ್ಲಿ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್‌ ಗಳೊಂದಿಗೆ 24 ರನ್‌ ಬಾರಿಸಿದರು. ಅವರಿಗೆ, ಅಫ್ಗಾನಿಸ್ತಾನದ ಸ್ಪಿನ್ನರ್‌ ಅಲ್ಲಾಹ ಘಜನಫರ್‌ ಪೆವಿಲಿಯನ್‌ ಹಾದಿ ತೋರಿದರು.

ಎಚ್ಚರಿಕೆಯ ಆಟವಾಡಿದ ಋತುರಾಜ್‌ (ಔಟಾಗದೇ 67; 48ಎ, 4x5, 6x2) ಅವರು ಕಾರ್ತಿಕ್‌ (ಔಟಾಗದೇ 54; 40ಎ, 4x4, 6x3) ಜೊತೆಗೆ ಮುರಿಯದ ಮೂರನೇ ವಿಕೆಟ್‌ಗೆ 75 ಎಸೆತಗಳಲ್ಲಿ 98 ರನ್‌ ಸೇರಿಸಿದರು. ಹಾಲಿ ಲೀಗ್‌ನಲ್ಲಿ ಚೆನ್ನೈ ತಂಡಕ್ಕೆ ನಾಲ್ಕನೇ ಗೆಲುವು ತಂದುಕೊಟ್ಟರು.

ಟಾಸ್ ಗೆದ್ದ ಮುಂಬೈ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಎರಡನೇ ಓವರ್‌ನಲ್ಲಿಯೇ ತಂಡಕ್ಕೆ ಬಲವಾದ ಪೆಟ್ಟು ಬಿತ್ತು. ಭರವಸೆಯ ಬ್ಯಾಟರ್ ವಿಲ್ ಜ್ಯಾಕ್ಸ್‌ (1 ರನ್) ಅವರ ವಿಕೆಟ್ ಗಳಿಸಿದ ವೇಗಿ ಅನ್ಷುಲ್ ಸಂಭ್ರಮಿಸಿದರು.

ಈ ಹಂತದಲ್ಲಿ ರಿಯಾನ್ ರಿಕೆಲ್ಟನ್ (37; 24ಎ, 6x5) ಮತ್ತು ನಮನ್ ಧೀರ್ (57; 37ಎ, 4x4, 6x3) ಅವರು ಎರಡನೇ ವಿಕೆಟ್ ಜೊತೆಯಾಟದಲ್ಲಿ 58 ರನ್ ಸೇರಿಸಿದರು. ಇದರಿಂದಾಗಿ ಸ್ವಲ್ಪಮಟ್ಟಿಗೆ ಇನಿಂಗ್ಸ್ ಚೇತರಿಕೆ ಕಂಡಿತು.

ಆದರೆ ಪವರ್‌ಪ್ಲೇ ಮುಗಿದ ನಂತರದ ಓವರ್‌ನಲ್ಲಿಯೇ ನೂರ್ ಅಹಮದ್ ಅವರು ರಿಕೆಲ್ಟನ್ ವಿಕೆಟ್ ಗಳಿಸಿ ಜೊತೆಯಾಟ ಮುರಿದರು. ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್ (21; 12ಎ) ಉತ್ತಮ ಲಯದಲ್ಲಿದ್ದಂತೆಕಂಡರು. ಆದರೆ ಅವರೂ ಬೇಗನೆ ನಿರ್ಗಮಿಸಿದರು. ತಿಲಕ್ ವರ್ಮಾ (5; 8ಎ) ಮತ್ತು ಹಾರ್ದಿಕ್ ಪಾಂಡ್ಯ (18; 23ಎ) ಅವರು ದೊಡ್ಡ ಹೊಡೆತವಾಡಲು ಪರದಾಡಿದರು.

ನೂರ್ ಅಹಮದ್ ಬೌಲಿಂಗ್‌ನಲ್ಲಿ ತಿಲಕ್ ಅವರ ಕ್ಯಾಚ್ ಪಡೆದ ಋತುರಾಜ್ ಗಾಯಕವಾಡ್‌ ಮಿಂಚಿದರು. ಪಾಂಡ್ಯಗೆ ವೇಗಿ ಕಂಬೋಜ್ ಅವರು ಡಗ್‌ಔಟ್ ದಾರಿ ತೋರಿಸಿದರು. ರಾಬಿನ್ ಮಿನ್ಝ್‌ ಅವರನ್ನೂ ಕಂಬೋಜ್ ಕ್ಲೀನ್‌ಬೌಲ್ಡ್ ಮಾಡಿದರು.

ಅರ್ಧಶತಕ ಗಳಿಸಿ ಆಡುತ್ತಿದ್ದ ನಮನ್ ಅವರು ಒವರ್ಟನ್ ಬೌಲಿಂಗ್‌ನಲ್ಲಿ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದರು. ಬದಲೀ ಫೀಲ್ಡರ್ ಸರ್ಫರಾಜ್ ಖಾನ್ ಅವರು ಪಡೆದ ಆಕರ್ಷಕವಾದ ಕ್ಯಾಚ್‌ನಿಂದಾಗಿ ನಮನ್ ಇನಿಂಗ್ಸ್‌ಗೆ ತೆರೆಬಿತ್ತು. ನಮನ್ ಅವರು 19 ರನ್‌ ಗಳಿಸಿದ್ದ ಸಂದರ್ಭದಲ್ಲಿ ಶಿವಂ ದುಬೆ ಅವರು ಸುಲಭ ಕ್ಯಾಚ್ ಕೈಚೆಲ್ಲಿದ್ದರು. ಇದರ ಲಾಭ ನಮನ್ ಅವರಿಗಾಯಿತು.

ಚೆನ್ನೈ ತಂಡದ ಮುಕೇಶ್ ಚೌಧರಿ ಅವರು ವಿಕೆಟ್ ಪಡೆಯಲಿಲ್ಲ. ಆದರೆ ರನ್‌ ನಿಯಂತ್ರಿಸಿದರು. ಇನಿಂಗ್ಸ್‌ನ ಮೊದಲ ಓವರ್‌ ಹಾಕಿದ ಅವರು ಕೇವಲ ಒಂದು ರನ್ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-51-1484440592

Dailyhunt
Disclaimer: This content has not been generated, created or edited by Dailyhunt. Publisher: Prajavani