ಉಪ್ಪಿನಂಗಡಿ: ಸರ್ಕಾರಕ್ಕೆ ಶರಣಾಗತಿಯಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ಮುಂಡಗಾರು ಗ್ರಾಮದ ಲತಾ ಎಂಬಾಕೆಯನ್ನು ಪ್ರಕರಣವೊಂದರ ವಿಚಾರಣೆಗಾಗಿ ಮಂಗಳವಾರ ಕಡಬ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
'ಸರ್ಕಾರಕ್ಕೆ ಶರಣಾಗಿದ್ದ ಲತಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಳು.
ಆಕೆ ವಿರುದ್ಧ ದಾಖಲಾಗಿದ್ದ ಕೆಲ ಪ್ರಕರಣಗಳು ರಾಜ್ಯದ ವಿವಿಧ ಠಾಣೆಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ. ಕಡಬ ತಾಲ್ಲೂಕಿನ ಶಿರಾಡಿ ಗ್ರಾಮದ ಮಿತ್ತಮಜಲು ಸುರೇಶ ಹಾಗೂ ಲೀಲಾ ಎಂಬುವರ ಮನೆಗೆ 2018ರಲ್ಲಿ ನಕ್ಸಲರ ತಂಡ ರಾತ್ರಿ ವೇಳೆ ಭೇಟಿ ನೀಡಿ, ಮನೆಯವರನ್ನು ಬೆದರಿಸಿ ಊಟ ಮಾಡಿ, ಅಕ್ಕಿ ಮತ್ತಿತರ ಸಾಮಗ್ರಿ ಒಯ್ದ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಪ್ರಕರಣದಲ್ಲಿ ಲತಾ ಕೂಡ ಆರೋಪಿ. ಹಾಗಾಗಿ ಆಕೆಯನ್ನು ಪೊಲೀಸ್ ಬಂದೋಬಸ್ತಿನಲ್ಲಿ ಉಪ್ಪಿನಂಗಡಿ ಠಾಣೆಗೆ ಕರೆತಂದು ಕಡಬ ಸಂಚಾರಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಆಕೆಗೆ ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ನಡೆಸಲಾಗಿದೆ' ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಿರಾಡಿಯ ಮಿತ್ತಮಜಲಿನಲ್ಲಿ ಪ್ರಕರಣ ನಡೆದಿದ್ದ ಮನೆಗೆ ಆಕೆಯನ್ನು ಬುಧವಾರ ಕರೆದೊಯ್ದು ಮಹಜರು ನಡೆಸುವ ಸಾಧ್ಯತೆ ಇದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಗಾಗಿ ಜನರ ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ನಡೆದಿದ್ದ ಹೋರಾಟದಲ್ಲಿ ಸಕ್ರಿಯವಾಗಿದ್ದ ಲತಾ 2000ರಲ್ಲಿ ನಕ್ಸಲ್ ತಂಡವನ್ನು ಸೇರಿದ್ದಳು. ಸುಮಾರು 25 ವರ್ಷ ನಕ್ಸಲರ ಜೊತೆಗೆ ಇದ್ದ ಲತಾ 2025ರಲ್ಲಿ ಸರ್ಕಾರದ ಮುಂದೆ ಶರಣಾಗಿದ್ದಳು. ಆಕೆ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ 85ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.
261104-29-1183606112

