ಜಲಂಧರ್ (ಪಿಟಿಐ): ಐದು ಸಲದ ಚಾಂಪಿಯನ್ ಭಾರತ ತಂಡವು, ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಸೋಮವಾರ ದಕ್ಷಿಣ ಕೊರಿಯಾ ತಂಡವನ್ನು 8-0 ಗೋಲುಗಳಿಂದ ನಿರಾಯಾಸವಾಗಿ ಸೋಲಿಸಿತು. ಇದರೊಂದಿಗೆ ಅಜೇಯ ದಾಖಲೆಯೊಡನೆ ಸೆಮಿಫೈನಲ್ ತಲುಪಿತು.
ಐದು ಪಂದ್ಯಗಳಲ್ಲಿ ಅಷ್ಟೂ ಗೆದ್ದ ಆತಿಥೇಯ ತಂಡವು ಸಂಭವನೀಯ 15 ಪಾಯಿಂಟ್ಸ್ ಕಲೆಹಾಕಿತು. ಭಾರತ ತಂಡ, ಇದಕ್ಕೆ ಮೊದಲಿನ ಪಂದ್ಯಗಳಲ್ಲಿ ಬಾಂಗ್ಲಾದೇಶ (13-0), ಚೀನಾ (5-2), ಜಪಾನ್ (4-1) ಮತ್ತು ಮಲೇಷ್ಯಾ (4-2) ವಿರುದ್ಧ ಜಯಗಳಿಸಿತ್ತು.
ಈ ಟೂರ್ನಿಯು ಇನ್ನು ಮೊಹಾಲಿಗೆ ಸ್ಥಳಾಂತರಗೊಳ್ಳಲಿದೆ. ಅಲ್ಲಿ ನಾಕೌಟ್ ಪಂದ್ಯಗಳು ನಡೆಯಲಿದ್ದು, ಭಾರತ ತಂಡವು ಬುಧವಾರ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಲಿದೆ. ಏಷ್ಯನ್ ಕ್ರೀಡೆಗಳ ರನ್ನರ್ ಅಪ್ ಮಲೇಷ್ಯಾ ತಂಡವು ಮತ್ತೊಂದು ಸೆಮಿಫೈನಲ್ ಹಣಾಹಣಿಯಲ್ಲಿ ಜಪಾನ್ ತಂಡವನ್ನು ಎದುರಿಸಲಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಭಾರತ ತಂಡದ ಪರ ದಿಲ್‌ಪ್ರೀತ್ ಸಿಂಗ್ (8 ಮತ್ತು 40ನೇ ನಿಮಿಷ) ಎರಡು ಗೋಲುಗಳನ್ನು ಹೊಡೆದರು. ಜುಗರಾಜ್ ಸಿಂಗ್ (11ನೇ ನಿಮಿಷ), ಹರ್ಮನ್‌ಪ್ರೀತ್ ಸಿಂಗ್ (15ನೇ ನಿಮಿಷ), ಶಿಲಾನಂದ ಲಾಕ್ರಾ (33ನೇ ನಿಮಿಷ), ಸುಖಜೀತ್ ಸಿಂಗ್ (34ನೇ ನಿಮಿಷ), ಸಂಜಯ್ (36ನೇ ನಿಮಿಷ) ಮತ್ತು ಅಂಗದ್ ವೀರ್ ಸಿಂಗ್ (60ನೇ ನಿಮಿಷ) ಅವರು ಗೋಲು ಗಳಿಸಿದ ಇತರ ಆಟಗಾರರು.
ಜಪಾನ್‌ಗೆ ಜಯ: ಜಪಾನ್ ದಿನದ ಇನ್ನೊಂದು ಲೀಗ್ ಪಂದ್ಯದಲ್ಲಿ 2-1 ಗೋಲುಗಳಿಂದ ಮಲೇಷ್ಯಾ ತಂಡವನ್ನು ಸೋಲಿಸಿತು. ಚೀನಾ ಮತ್ತು ಬಾಂಗ್ಲಾದೇಶ ತಂಡಗಳ ನಡುವಣ ಇನ್ನೊಂದು ಪಂದ್ಯ ಗೋಲಿಲ್ಲದೇ ಡ್ರಾ ಆಯಿತು.
261103-51-981765813

