ಈ ವರ್ಷದ ಫೆಬ್ರುವರಿ 28ರವರೆಗೂ ದೇಶದ ಅರ್ಥ ವ್ಯವಸ್ಥೆಯ ಸ್ಥಿತಿ ಬಹಳ ಚೆನ್ನಾಗಿಯೇ ಇತ್ತು.
2025-26ನೆಯ ಹಣಕಾಸು ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪಾದನೆಯ ಬೆಳವಣಿಗೆ ಪ್ರಮಾಣ ಶೇ 7.6ರಷ್ಟು ಇತ್ತು, ದೇಶದಲ್ಲಿ ಹಣದುಬ್ಬರ ಪ್ರಮಾಣ ಶೇ 2.75ರಷ್ಟು ಇತ್ತು, ವಿತ್ತೀಯ ಕೊರತೆ ಹಾಗೂ ಚಾಲ್ತಿ ಖಾತೆ ಕೊರತೆ ಪ್ರಮಾಣವು ಕ್ರಮವಾಗಿ ಶೇ 4.4 ಹಾಗೂ ಶೇ 1ರ ಮಟ್ಟದೊಳಗೆ ಇದ್ದವು, ವಿದೇಶಿ ವಿನಿಮಯ ಸಂಗ್ರಹವು 720 ಬಿಲಿಯನ್ ಡಾಲರ್‌ನಷ್ಟು ಇತ್ತು, ಬ್ರೆಂಟ್ ಕಚ್ಚಾ ತೈಲದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 70 ಡಾಲರ್ ಆಸುಪಾಸಿನಲ್ಲಿತ್ತು.
ಕೇಂದ್ರ ಸರ್ಕಾರ ಹಾಗೂ ಆರ್‌ಬಿಐ 2025ರಲ್ಲಿ ಜಾರಿಗೆ ತಂದ ವಿತ್ತೀಯ ಮತ್ತು ಹಣಕಾಸಿನ ಉತ್ತೇಜನಾ ಕ್ರಮಗಳು 2026-27ರಲ್ಲಿ ಕಂಪನಿಗಳ ವರಮಾನದ ಏರಿಕೆ ಆಗಬಹುದಾದ ಸಾಧ್ಯತೆಯನ್ನು ಹೆಚ್ಚು ಮಾಡಿದ್ದವು. ಆ ಸಂದರ್ಭದಲ್ಲಿ ನಿಫ್ಟಿ ಸೂಚ್ಯಂಕವು 26 ಸಾವಿರದ ಮಟ್ಟದಲ್ಲಿತ್ತು, ಗಟ್ಟಿತನ ಪ್ರದರ್ಶಿಸಿತ್ತು.
ಆದರೆ ಫೆಬ್ರುವರಿ 28ರಂದು ಪಶ್ಚಿಮ ಏಷ್ಯಾದಲ್ಲಿ ಶುರುವಾದ ಯುದ್ಧವು ಅರ್ಥ ವ್ಯವಸ್ಥೆಯ ಚಿತ್ರಣವನ್ನು ಸಂಪೂರ್ಣವಾಗಿ ಬದಲಾಯಿಸಿತು. ಯುದ್ಧದಿಂದಾಗಿ ಸೃಷ್ಟಿಯಾದ ಇಂಧನ ಬಿಕ್ಕಟ್ಟು ದೇಶದ ಅರ್ಥವ್ಯವಸ್ಥೆಯ ದೌರ್ಬಲ್ಯವನ್ನು ತೋರಿಸಿತು - ಅಂದರೆ, ಇಂಧನ ಆಮದಿನ ಮೇಲೆ ದೇಶವು ಅದೆಷ್ಟು ಅವಲಂಬಿತವಾಗಿದೆ, ಬೇರೆಡೆಗಳಲ್ಲಿ ಸೃಷ್ಟಿಯಾಗುವ ಸಮಸ್ಯೆಗಳಿಂದಾಗಿ ದೇಶದ ಇಂಧನ ಲಭ್ಯತೆಯ ಮೇಲೆ ಆಗುವ ಅಪಾಯ ಏನು ಎಂಬುದನ್ನು ಇದು ತೋರಿಸಿತು. ಯುದ್ಧದಿಂದಾಗಿ ಸೃಷ್ಟಿಯಾದ ಇಂಧನ ಬಿಕ್ಕಟ್ಟು, ಶಕ್ತಿಶಾಲಿಯಾಗಿದ್ದ ದೇಶದ ಅರ್ಥ ವ್ಯವಸ್ಥೆಯನ್ನು ಕುಗ್ಗಿಸುವ ಕೆಲಸ ಮಾಡಿತು. ವಿದೇಶಿ ಹೂಡಿಕೆದಾರರು (ಎಫ್‌ಪಿಐ) ಹೂಡಿಕೆಯನ್ನು ಹಿಂದಕ್ಕೆ ಪಡೆಯುತ್ತಿರುವುದು ಚಾಲ್ತಿ ಖಾತೆ ಕೊರತೆಯ (ಸಿಎಡಿ) ಸಮಸ್ಯೆಯ ತೀವ್ರತೆಯನ್ನು ಹೆಚ್ಚಿಸಿತು. ಇದರಿಂದಾಗಿ ರೂಪಾಯಿ ಮೌಲ್ಯ ತಗ್ಗಿತು. ಈ ಪರಿಣಾಮವಾಗಿ ವಿದೇಶಿ ಬಂಡವಾಳದ (ಎಫ್‌ಪಿಐ) ಹೊರಹರಿವು ಇನ್ನಷ್ಟು ಜಾಸ್ತಿ ಆಯಿತು.
ಅರ್ಥ ವ್ಯವಸ್ಥೆಗೆ ಹಾಗೂ ಕಾರ್ಪೊರೇಟ್ ಕಂಪನಿಗಳ ವರಮಾನಕ್ಕೆ ಏಟು ಬೀಳಲಿದೆ ಎಂಬುದನ್ನು ಗ್ರಹಿಸಿದ ಷೇರುಪೇಟೆಯು ಇಳಿಮುಖವಾಯಿತು. ಮಾರ್ಚ್ 30ರಂದು ನಿಫ್ಟಿ 22,331ರ ಮಟ್ಟಕ್ಕೆ ಕುಸಿಯಿತು. ಇದು ಈ ವರ್ಷದ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ ಶೇ 15ರಷ್ಟು ಕುಸಿತ.
ಬಿಕ್ಕಟ್ಟು ನಿವಾರಣೆ: ಕಚ್ಚಾ ತೈಲದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇನ್ನೂ ಕೆಲವು ತಿಂಗಳುಗಳವರೆಗೆ ಪ್ರತಿ ಬ್ಯಾರಲ್‌ಗೆ 95 ಡಾಲರ್‌ಗಿಂತ ಹೆಚ್ಚಿನ ಮಟ್ಟದಲ್ಲಿ ಉಳಿದಿದ್ದರೆ ದೇಶದ ಅರ್ಥ ವ್ಯವಸ್ಥೆಯ ಮೇಲೆ ತೀವ್ರ ಒತ್ತಡ ಸೃಷ್ಟಿಯಾಗುತ್ತಿತ್ತು. ಆದರೆ ಅದೃಷ್ಟದ ಸಂಗತಿಯೆಂದರೆ ಅಮೆರಿಕ ಮತ್ತು ಇರಾನ್ ನಡುವೆ ಒಪ್ಪಂದವೊಂದು ಸಾಧ್ಯವಾಗಿದೆ ಹಾಗೂ ಇದರ ಪರಿಣಾಮವಾಗಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಬಹಳಷ್ಟು ಕಡಿಮೆ ಆಗಿದೆ. ಅದು ಈಗ ಬ್ಯಾರಲ್‌ಗೆ 75 ಡಾಲರ್‌ಗಿಂತ ಕಡಿಮೆ ಇದೆ. ಇದು ದೇಶದ ಅರ್ಥ ವ್ಯವಸ್ಥೆಯ ಪಾಲಿಗೆ ದೊಡ್ಡ ಸಮಾಧಾನದ ಸಂಗತಿ.
ಎಲ್-ನಿನೊ ಅಪಾಯ: ಈಗ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುವ ಹೊಸ ಅಪಾಯವೊಂದು ಎದುರಾಗಿದೆ. ದೀರ್ಘಾವಧಿಯ ಸರಾಸರಿಗೆ ಹೋಲಿಸಿದರೆ ಈ ಬಾರಿ ಮುಂಗಾರು ಮಳೆಯು ಶೇ 90ರಷ್ಟು ಮಾತ್ರ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ. ಖಾಸಗಿ ಸಂಸ್ಥೆಯಾದ ಸ್ಕೈಮೆಟ್ ಪ್ರಕಾರ ಮುಂಗಾರು ಮಳೆ ಶೇ 94ರಷ್ಟು ಆಗಲಿದೆ. ನಮ್ಮಲ್ಲಿ ಆಹಾರ ಧಾನ್ಯಗಳ ಸಂಗ್ರಹ ಚೆನ್ನಾಗಿದೆ, ಕಳೆದ ಎರಡು ವರ್ಷಗಳಲ್ಲಿ ಮುಂಗಾರು ಮಳೆಯು ವಾಡಿಕೆಗಿಂತ ಚೆನ್ನಾಗಿ ಸುರಿದ ಕಾರಣದಿಂದಾಗಿ ಜಲಾಶಯಗಳಲ್ಲಿ ನೀರಿನ ಮಟ್ಟವೂ ಚೆನ್ನಾಗಿದೆ. ಹೀಗಾಗಿ ಮುಂಗಾರು ಈ ಬಾರಿ ಶೇ 10ರಷ್ಟು ಕಡಿಮೆ ಆಗುವುದರಿಂದ ದೊಡ್ಡ ಅಪಾಯ ಉಂಟಾಗಲಿಕ್ಕಿಲ್ಲ.
ದೇಶದಲ್ಲಿ ನೀರಾವರಿ ಸೌಲಭ್ಯವಿರುವ ಕೃಷಿ ಜಮೀನಿನ ವ್ಯಾಪ್ತಿ ಸ್ಥಿರ ಪ್ರಮಾಣದಲ್ಲಿ ಹೆಚ್ಚುತ್ತಿದೆ, ಈಗ ಕೃಷಿ ಜಮೀನಿನಲ್ಲಿ ಶೇ 55ರಷ್ಟು ಭಾಗಕ್ಕೆ ನೀರು ಪೂರೈಕೆಯ ಖಾತರಿ ಇದೆ. ಹೀಗಾಗಿ, ಆಹಾರ ಧಾನ್ಯಗಳ ಉತ್ಪಾದನೆಯ ಮೇಲೆ ಗಣನೀಯ ಪರಿಣಾಮ ಆಗದು. ಆದರೂ ಕೃಷಿ ವಲಯದ ಬೆಳವಣಿಗೆ ತಗ್ಗಿದಾಗ ಒಟ್ಟಾರೆ ಜಿಡಿಪಿ ಬೆಳವಣಿಗೆ ಕೂಡ ತುಸು ಕಡಿಮೆ ಆಗುತ್ತದೆ. ಅದು ಶೇ 6.5ರ ಆಸುಪಾಸಿಗೆ ಬರಬಹುದು. ಹೆಚ್ಚು ನೀರು ಬೇಕಾಗುವ ತರಕಾರಿ ಬೆಳೆಯುವ ಬದಲು ರೈತರು ಸಿರಿಧಾನ್ಯಗಳನ್ನು ಬೆಳೆಯಲು ಮುಂದಾದರೆ ತರಕಾರಿಗಳ ಬೆಲೆ ದುಬಾರಿ ಆಗಬಹುದು ಎಂಬ ಕಳವಳವೊಂದು ಇದೆ.
ಎಲ್ಲ ಬಾರಿಯೂ ಕಡಿಮೆ ಮಳೆ ಆಗಬೇಕೆಂದಿಲ್ಲ: ಎಲ್-ನಿನೊ ಪರಿಸ್ಥಿತಿಯು ಎಲ್ಲ ಬಾರಿಯೂ ಮುಂಗಾರು ಕೊರತೆಗೆ ದಾರಿ ಮಾಡಿಕೊಡುತ್ತದೆ ಎನ್ನಲಾಗದು. 1951ರಿಂದ 2022ರ ನಡುವೆ ಒಟ್ಟು 15 ಎಲ್-ನಿನೊ ವರ್ಷಗಳು ಇದ್ದವು. ಈ 15 ವರ್ಷಗಳ ಪೈಕಿ ಆರು ವರ್ಷಗಳಲ್ಲಿ (ಅಂದರೆ ಶೇ 40ರಷ್ಟು) ಮುಂಗಾರು ಮಳೆಯು ವಾಡಿಕೆಯಷ್ಟು ಆಗಿತ್ತು ಅಥವಾ ವಾಡಿಕೆಗಿಂತ ಹೆಚ್ಚೇ ಆಗಿತ್ತು. 1997ರಲ್ಲಿ ಸೂಪರ್ ಎಲ್-ನಿನೊ ಇದ್ದರೂ ದೇಶದಲ್ಲಿ ವಾಡಿಕೆಗೆ ಹೋಲಿಸಿದರೆ ಶೇ 94.4ರಷ್ಟು ಮಳೆ ಆಗಿತ್ತು. ಹೀಗಾಗಿ ಮಳೆ ಕೊರತೆ ಆಗಲಿದೆ ಎಂದು ಈಗಲೇ ಅಂದುಕೊಳ್ಳಬೇಕಿಲ್ಲ.
ಷೇರುಪೇಟೆ ಮೇಲೆ ಪರಿಣಾಮ: ಮುಂಗಾರು ಮಳೆಯ ಪ್ರಮಾಣವು ದೀರ್ಘಾವಧಿ ಸರಾಸರಿಯ ಶೇ 90ಕ್ಕಿಂತ ಕಡಿಮೆ ಮಟ್ಟಕ್ಕೆ ಕುಸಿದರೆ, ಬರದಂತಹ ಸನ್ನಿವೇಶ ಸೃಷ್ಟಿಯಾದರೆ ದೇಶದ ಅರ್ಥವ್ಯವಸ್ಥೆ ಹಾಗೂ ಷೇರುಪೇಟೆಗಳ ಮೇಲೆ ಪರಿಣಾಮ ಆಗುತ್ತದೆ. ಮುಂಗಾರು ಮಳೆಯ ಆರಂಭಿಕ ಗತಿಯನ್ನು ಗಮನಿಸಿದರೆ ಕೊರತೆ ದೊಡ್ಡ ಮಟ್ಟದಲ್ಲಿದೆ ಎಂಬಂತೆ ಕಾಣುತ್ತಿದೆ. ಜೂನ್ 23ರವರೆಗಿನ ದತ್ತಾಂಶದ ಪ್ರಕಾರ ಮುಂಗಾರು ಕೊರತೆಯು ಶೇ 43.2ರಷ್ಟಿದೆ. ಮುಂಬರುವ ವಾರಗಳಲ್ಲಿ ಮಳೆ ಚೆನ್ನಾಗಿ ಆಗದಿದ್ದರೆ ಹವಾಮಾನ ಇಲಾಖೆಯ ಅಂದಾಜು ನಿಜವಾಗಬಹುದು, ಪರಿಸ್ಥಿತಿಯು ಇನ್ನಷ್ಟು ವಿಷಮಗೊಳ್ಳಬಹುದು.
ಮುಂಗಾರು ಕೊರತೆಯ ವಲಯವಾರು ಪರಿಣಾಮ
ರಸಗೊಬ್ಬರ, ಟ್ರ್ಯಾಕ್ಟರ್, ಎಫ್‌ಎಂಸಿಜಿ (ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಉತ್ಪನ್ನಗಳು) ಹಾಗೂ ಆರಂಭಿಕ ಹಂತದ ದ್ವಿಚಕ್ರ ವಾಹನ ವಲಯಗಳು ಮುಂಗಾರು ಮಳೆಯ ಕೊರತೆಯ ಪರಿಣಾಮ
ಅನುಭವಿಸುತ್ತವೆ. ಈ ವಲಯಗಳು ಒಂದೋ ಕೃಷಿ ಆದಾಯವನ್ನು ಅಥವಾ ಗ್ರಾಮೀಣ ಪ್ರದೇಶಗಳಲ್ಲಿನ ಬೇಡಿಕೆಯನ್ನು ಆಧರಿಸಿವೆ. ರಸಗೊಬ್ಬರ ಹಾಗೂ ಟ್ರ್ಯಾಕ್ಟರ್‌ಗಳಿಗೆ ಬರುವ ಬೇಡಿಕೆಯು ಮುಂಗಾರಿನ ಜೊತೆ ನೇರ ಸಂಬಂಧ ಹೊಂದಿವೆ. ಆರಂಭಿಕ ಹಂತದ ದ್ವಿಚಕ್ರ ವಾಹನಗಳ ಬೇಡಿಕೆಯಲ್ಲಿ ಶೇ 54ರಷ್ಟು ಗ್ರಾಮೀಣ ಪ್ರದೇಶಗಳಿಂದ ಬರುತ್ತದೆ. ಹೀರೊ ಮೋಟೊಕಾರ್ಪ್ ಹಾಗೂ ಟಿವಿಎಸ್‌ನಂತಹ ಕಂಪನಿಗಳಿಗೆ ಇದು
ಶೇ 60ಕ್ಕಿಂತ ಜಾಸ್ತಿ.
ಬೇಡಿಕೆ ತಗ್ಗಿದರೆ ಟ್ರ್ಯಾಕ್ಟರ್ ತಯಾರಿಕಾ ಕಂಪನಿಗಳಾದ ಮಹೀಂದ್ರ ಆಯಂಡ್ ಮಹೀಂದ್ರ, ಟಾಫೆ, ಎಸ್ಕಾರ್ಟ್ಸ್ ಕುಬೊಟಾ ಮೇಲೆ ಪರಿಣಾಮ ಆಗಬಹುದು. ಆದರೆ ಪರಿಣಾಮದ ತೀವ್ರತೆಯು ಎಲ್ಲ ಕಂಪನಿಗಳ ಮೇಲೆಯೂ ಒಂದೇ ಬಗೆಯಲ್ಲಿ ಇರುವುದಿಲ್ಲ. ಟ್ರ್ಯಾಕ್ಟರ್ ತಯಾರಿಕಾ ವಲಯದಲ್ಲಿ ಅತಿದೊಡ್ಡ ಕಂಪನಿಯಾದ ಮಹೀಂದ್ರ ಆಯಂಡ್ ಮಹೀಂದ್ರ ಪಾಲಿಗೆ ಟ್ರ್ಯಾಕ್ಟರ್ ಮಾರಾಟದಿಂದ ಬರುವ ವರಮಾನವು ಒಟ್ಟು ವರಮಾನದ ಶೇ 21ರಷ್ಟು ಮಾತ್ರ. ಈ ಕಂಪನಿಯ ವಾಹನ ವಿಭಾಗವು ಉತ್ತಮ ಸಾಧನೆ ತೋರುತ್ತಿರುವ ಕಾರಣದಿಂದಾಗಿ, ಕಂಪನಿಯ ಮೇಲೆ ಗಣನೀಯ ಪರಿಣಾಮ ಆಗಲಿಕ್ಕಿಲ್ಲ.
ಟಾಫೆ ಕಂಪನಿಯು ಷೇರುಪೇಟೆ ನೋಂದಾಯಿತ ಅಲ್ಲ. ಎಸ್ಕಾರ್ಟ್ಸ್ ಕುಬೊಟಾ ಪಾಲಿಗೆ ಒಟ್ಟು ವರಮಾನದಲ್ಲಿ ಶೇ 80ಕ್ಕಿಂತ ಹೆಚ್ಚು ಟ್ರ್ಯಾಕ್ಟರ್ ಹಾಗೂ ಇತರ ಕೃಷಿ ಉಪಕರಣಗಳ ವಿಭಾಗದಿಂದ ಬರುತ್ತದೆ. ಮುಂಗಾರು ಮಳೆ ದುರ್ಬಲವಾಗುವುದರಿಂದ ರಸಗೊಬ್ಬರಗಳು ಹಾಗೂ ಬೆಳೆ ರಕ್ಷಣೆಯ ವಲಯದ ಕಂಪನಿಗಳ ಮೇಲೆ ಪರಿಣಾಮ ಆಗುತ್ತದೆ.
ರಕ್ಷಣಾತ್ಮಕ ವಲಯಗಳು: ಪ್ರೀಮಿಯಂ ವರ್ಗದ ಗ್ರಾಹಕರನ್ನು ತಲುಪುವ ವಲಯಗಳು, ನಗರ ಕೇಂದ್ರಿತ ಬೇಡಿಕೆ ಪೂರೈಸುವ ವಲಯಗಳು, ಐ.ಟಿ ಮತ್ತು ರಫ್ತು ಆಧಾರಿತ ವಲಯಗಳು ಮುಂಗಾರು ಕೊರತೆಯಿಂದ ಬಾಧಿತ ಆಗುವುದಿಲ್ಲ. ಈಗ ಚಾಲ್ತಿಯಲ್ಲಿರುವ ಎಫ್‌ಸಿಎನ್‌ಆರ್ ಬಿ ಠೇವಣಿ ಸಂಗ್ರಹ ಅಭಿಯಾನದ ಕಾರಣದಿಂದಾಗಿ ದೊಡ್ಡ ಗಾತ್ರದ ಬ್ಯಾಂಕ್‌ಗಳಿಗೆ ಪ್ರಯೋಜನ ಆಗುತ್ತದೆ. ದೇಶದ ಅರ್ಥ ವ್ಯವಸ್ಥೆಯಲ್ಲಿ ಸಾಲ ನೀಡಿಕೆ ಪ್ರಮಾಣ ಕೂಡ ಉತ್ತಮ ಬೆಳವಣಿಗೆ ಕಾಣುತ್ತಿದೆ. ಅದಕ್ಕಿಂತ ಹೆಚ್ಚಾಗಿ, ಈ ವಲಯದ ಷೇರುಗಳ ಮೌಲ್ಯವು ಆಕರ್ಷಕವಾಗಿದೆ. ಫಾರ್ಮಾ ಹಾಗೂ ಆರೋಗ್ಯಸೇವಾ ವಲಯಗಳು ಸುರಕ್ಷಿತವಾದವುಗಳು. ಮುಂಗಾರು ಮಳೆ ದುರ್ಬಲವಾಗಿರುವ ವರ್ಷಗಳಲ್ಲಿ ಫಾರ್ಮಾ ವಲಯವು ಸಾಮಾನ್ಯವಾಗಿ ಇತರ ವಲಯಗಳಿಗಿಂತ ಹೆಚ್ಚಿನ ಗಳಿಕೆ ನೀಡುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ ಮುಂಗಾರು ಮಳೆಯ ಗತಿ ಹೇಗಿರುತ್ತದೆ ಎಂಬುದನ್ನು ಹೂಡಿಕೆದಾರರು ಗಮನಿಸಬೇಕು. ಹಿಂದಿನ ಹಲವು ವರ್ಷಗಳಲ್ಲಿ ಜೂನ್‌ನಲ್ಲಿ ಮಳೆ ಕೊರತೆ ಇದ್ದರೂ, ನಂತರದ ತಿಂಗಳುಗಳಲ್ಲಿ ಸುರಿದ ಮಳೆಯು ಆ ಕೊರತೆಯನ್ನು ತುಂಬಿಕೊಡುವ ಕೆಲಸ ಮಾಡಿದೆ. ಹೀಗಾಗಿ, ಮುಂಗಾರಿನ ಪ್ರಮಾಣವನ್ನು ಗಮನಿಸಬೇಕು, ಅದರ ಗತಿಗೆ ಅನುಗುಣವಾಗಿ
ಪೋರ್ಟ್‌ಫೋಲಿಯೊವನ್ನು ಈಗ ಹೇಳಿರುವ ಅಂಶಗಳನ್ನು ಆಧರಿಸಿ ಮರುಹೊಂದಿಸಬೇಕು. ಮಳೆ ಕೊರತೆಯು ಹೆಚ್ಚಿನ ಅವಧಿಗೆ ಇದ್ದರೆ ರಕ್ಷಣಾತ್ಮಕ ವಲಯಗಳಿಗೆ ಹೆಚ್ಚಿನ ಹಣ ಇರಿಸಿ, ತೊಂದರೆಗೆ ಒಳಗಾಗುವ ವಲಯಗಳಲ್ಲಿನ ಮೊತ್ತವನ್ನು ಕಡಿಮೆ ಮಾಡಬೇಕು.
ಲೇಖಕ: ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಮುಖ್ಯ ಹೂಡಿಕೆ ತಜ್ಞ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260702-51-1166558881

