Dailyhunt Logo
  • Light mode
    Follow system
    Dark mode
    • Play Story
    • App Story
ಮುನಿಸು ಮರೆತ ನೆತನ್ಯಾಹು-ಟ್ರಂಪ್: ದೂರವಾಣಿಯಲ್ಲಿ ಮಾತುಕತೆ, ಶೀಘ್ರವೇ ಭೇಟಿ

ಮುನಿಸು ಮರೆತ ನೆತನ್ಯಾಹು-ಟ್ರಂಪ್: ದೂರವಾಣಿಯಲ್ಲಿ ಮಾತುಕತೆ, ಶೀಘ್ರವೇ ಭೇಟಿ

ಟೆಲ್ ಅವೀವ್‌: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ದೂರವಾಣಿ ಸಂಭಾಷಣೆ ನಡೆಸಿದ್ದು, ಶೀಘ್ರದಲ್ಲೇ ಭೇಟಿಯಾಗಲು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಅಮೆರಿಕದ 250ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ನೆತನ್ಯಾಹು ಅವರು ಟ್ರಂಪ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಇದೇ ವೇಳೆ ಅಮೆರಿಕವು ಪ್ರಪಂಚದ ಸ್ವಾತಂತ್ರ್ಯವನ್ನು ಖಾತ್ರಿಪಡಿಸುವ ದೇಶವಾಗಿದೆ ಮತ್ತು ಉಭಯ ದೇಶಗಳ ನಡುವಿನ ನಿಕಟ ಬಾಂಧವ್ಯವನ್ನು ಇಸ್ರೇಲ್ ಹೆಚ್ಚು ಗೌರವಿಸುತ್ತದೆ ಎಂದು ಇಸ್ರೇಲ್ ಪ್ರಧಾನಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

'ಪ್ರಧಾನಿ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್ ಶೀಘ್ರದಲ್ಲೇ ಭೇಟಿಯಾಗಲು ಒಪ್ಪಿಕೊಂಡಿದ್ದಾರೆ. ಆದರೆ, ಪ್ರಸ್ತಾವಿತ ಭೇಟಿಗೆ ದಿನಾಂಕ ಅಥವಾ ಸ್ಥಳವನ್ನು ಪ್ರಧಾನಿ ಕಚೇರಿ ಬಹಿರಂಗಪಡಿಸಿಲ್ಲ' ಎಂದು 'ಟೈಮ್ಸ್ ಆಫ್ ಇಸ್ರೇಲ್' ಉಲ್ಲೇಖಿಸಿದೆ.

ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಜತೆಗಿನ ಇಸ್ರೇಲ್‌ನ ಯುದ್ಧವು ಇರಾನ್‌ನೊಂದಿಗಿನ ಶಾಂತಿ ಮಾತುಕತೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಇತ್ತೀಚಿನ ವಾರಗಳಲ್ಲಿ ಟ್ರಂಪ್ ಅವರು ನೆತನ್ಯಾಹು ಅವರನ್ನು ಸಾರ್ವಜನಿಕವಾಗಿ ಟೀಕಿಸುತ್ತಿರುವ ಬೆನ್ನಲೇ ಈ ಬೆಳವಣಿಗೆ ನಡೆದಿದೆ.

ಇರಾನ್‌ ಮತ್ತು ಅಮೆರಿಕ ನಡುವಿನ ತಿಳಿವಳಿಕೆ ಪತ್ರದಲ್ಲಿನ (ಎಂಒಯು) 14 ಅಂಶಗಳ ಕುರಿತು ಮಾತುಕತೆ ನಡೆಯುತ್ತಿದೆ. ಕತಾರ್ ಮತ್ತು ಪಾಕಿಸ್ತಾನವು ಜುಲೈ 1ರಂದು ದೋಹಾದಲ್ಲಿ ಅಮೆರಿಕ ಮತ್ತು ಇರಾನ್ ಸಂಧಾನಕಾರರೊಂದಿಗೆ ಪ್ರತ್ಯೇಕ ಸಭೆಗಳನ್ನು ಮುಕ್ತಾಯಗೊಳಿಸಿದ್ದು, ತಿಳುವಳಿಕಾ ಒಪ್ಪಂದಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಕಾರಾತ್ಮಕ ಪ್ರಗತಿ ಕಂಡುಬಂದಿದೆ ಎಂದು ಕತಾರ್‌ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಮುಂಬರುವ ಅವಧಿಯಲ್ಲಿ ಚರ್ಚೆ ಮುಂದುವರಿಸಲು ಉಭಯ ದೇಶಗಳು (ಇರಾನ್-ಅಮೆರಿಕ) ಒಪ್ಪಿಕೊಂಡಿದ್ದು, ಇರಾನ್‌ನ ಮಾಜಿ ಸರ್ವೋಚ್ಚ ನಾಯಕನ ಆಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆ ಪ್ರಕ್ರಿಯೆಗಳು ಮುಗಿದ ಬಳಿ ಮುಂದಿನ ಸಭೆಯನ್ನು ಆದಷ್ಟು ಬೇಗ ನಿಗದಿಪಡಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಜುಲೈ 1ರಂದು ಇಸ್ರೇಲ್, ಲೆಬನಾನ್ ಜತೆಗಿನ ಅಸ್ತಿತ್ವದಲ್ಲಿರುವ ಕದನ ವಿರಾಮದ ಹೊರತಾಗಿಯೂ ಹಿಜ್ಬುಲ್ಲಾ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ಮುಂದುವರಿಸುವುದಾಗಿ ಹೇಳಿತ್ತು. ಇರಾನ್ ಬೆಂಬಲಿತ ಸಶಸ್ತ್ರ ಗುಂಪು (ಹಿಜ್ಬುಲ್ಲಾ) ನೇರ ಭದ್ರತಾ ಬೆದರಿಕೆಯನ್ನು ಒಡ್ಡುವುದನ್ನು ಮುಂದುವರಿಸಿದ್ದು, ಹಿಜ್ಬುಲ್ಲಾವನ್ನು ನಿಶ್ಯಸ್ತ್ರಗೊಳಿಸದ ಹೊರತು ಲೆಬನಾನ್‌ನಲ್ಲಿ ಶಾಶ್ವತ ಸ್ಥಿರತೆ ಅಸಾಧ್ಯ ಎಂದು ಇಸ್ರೇಲ್‌ನ ಉಪ ವಿದೇಶಾಂಗ ಸಚಿವೆ ಶ್ಯಾರೆನ್ ಹ್ಯಾಸ್ಕೆಲ್ ವಾದಿಸಿದ್ದಾರೆ.

ಹಿಜ್ಬುಲ್ಲಾ ಸಂಘಟನೆ ಇಸ್ರೇಲ್ ಪ್ರದೇಶದ ಮೇಲೆ ದಾಳಿ ಮಾಡುವುದನ್ನು ನಿಲ್ಲಿಸುವವರೆಗೆ ನಮ್ಮ ಮಿಲಿಟರಿ ಕಾರ್ಯಾಚರಣೆ ಮುಂದುವರಿಯುತ್ತದೆ. ಹಿಜ್ಬುಲ್ಲಾ ಸದ್ದು ಅಡಗಿಸಲು ಇಸ್ರೇಲ್-ಲೆಬನಾನ್ ಸಮಾನ ಹಿತಾಸಕ್ತಿ ಹೊಂದಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಹಿಜ್ಬುಲ್ಲಾ ಬಂಡುಕೋರರು ಇಸ್ರೇಲ್ ಮೇಲೆ ದಾಳಿ ಮಾಡುವುದನ್ನು ಮುಂದುವರಿಸಿದರೆ, ನಾವು ನಮ್ಮ ಜನರನ್ನು, ಸಮುದಾಯಗಳನ್ನು ರಕ್ಷಿಸುವುದನ್ನು ಮುಂದುವರಿಸುತ್ತೇವೆ. ಇರಾನ್‌ ಬೆಂಬಲಿತ ಹಿಜ್ಬುಲ್ಲಾ ಬಂಡುಕೋರರು ಲೆಬನಾನ್‌ನಿಂದ ಹೊರಹೋಗುವುದಕ್ಕಿಂತ ಹೆಚ್ಚಿನದನ್ನು ನಾವು (ಇಸ್ರೇಲ್-ಲೆಬನಾನ್) ಏನನ್ನೂ ಬಯಸುತ್ತಿಲ್ಲ ಎಂದು ಹ್ಯಾಸ್ಕೆಲ್ ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ನೆರವು ಬೇಡವೆಂದ ನೆತನ್ಯಾಹು

ಜೂನ್ 30ರಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅಮೆರಿಕದ ಆರ್ಥಿಕ ನೆರವನ್ನು ಕೊನೆಗೊಳಿಸುವ ಉದ್ದೇಶದ ಮಹತ್ವಾಕಾಂಕ್ಷೆಯ ನೀತಿ ಬದಲಾವಣೆಯನ್ನು ಪ್ರಕಟಿಸಿದ್ದು, ದೇಶದ ಸದೃಢ ಆರ್ಥಿಕತೆಗೆ ಇನ್ನು ಮುಂದೆ ವಿದೇಶಿ ಸಬ್ಸಿಡಿಗಳ ಅಗತ್ಯವಿಲ್ಲ ಎಂದು ಘೋಷಿಸಿದ್ದರು.

ಅಮೆರಿಕದೊಂದಿಗಿನ ಆರ್ಥಿಕ ಸಂಬಂಧದ ಕುರಿತು ಮಾತನಾಡಿದ್ದ ನೆತನ್ಯಾಹು, 'ನಾನು ಅಮೆರಿಕದಿಂದ ನೆರವು ಪಡೆಯುವುದನ್ನು ನಿಲ್ಲಿಸಲು ಬಯಸುತ್ತೇನೆ. ಇದು ಕಲ್ಯಾಣ ಯೋಜನೆ ಇದ್ದಂತೆ; ನನಗೆ ಇದು ಬೇಡ' ಎಂದಿದ್ದರು.

'ನಮ್ಮ ಆರ್ಥಿಕತೆಯು ಇನ್ನು ಮುಂದೆ ಸಣ್ಣ ಆರ್ಥಿಕತೆಯಾಗಿರುವುದಿಲ್ಲ. ಅಮೆರಿಕದಿಂದ ನಾವು ಪಡೆಯುವ ಜಿಡಿಪಿಯ ಅತ್ಯಲ್ಪ ಹಣವಿಲ್ಲದೆಯೂ ನಮ್ಮನ್ನು ನಾವೇ ಪೋಷಿಸಿಕೊಳ್ಳಬಹುದು. ಈ ಪ್ರಕ್ರಿಯೆಯು ಇದೇ ವರ್ಷದಿಂದ ಆರಂಭವಾಗಬೇಕೆಂದು ನಾನು ಬಯಸುತ್ತೇನೆ' ಎಂದೂ ಹೇಳಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani