ಬೆಂಗಳೂರು: ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅಂಗೀಕರಿಸಿದ್ದಾರೆ. ಈ ಕುರಿತಂತೆ ಲೋಕಭವನವು ಪ್ರಕಟಣೆ ಹೊರಡಿಸಿದೆ.
ಆಗಸ್ಟ್ 29ರಂದು ನಾಗೇಂದ್ರ ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಡಿ.ಕೆ.
ಶಿವಕುಮಾರ್ ಅವರು ಲೋಕಭವನಕ್ಕೆ ಕಳುಹಿಸಿದ್ದು, ರಾಜೀನಾಮೆ ಅಂಗೀಕಾರಕ್ಕೆ ಶಿಫಾರಸು ಮಾಡಿದ್ದರು. ಅವರ ಶಿಫಾರಸಿನ ಅನ್ವಯ ರಾಜೀನಾಮೆ ಅಂಗೀಕರಿಸಿರುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ ಎಂದು ಲೋಕಭವನ ಪ್ರಕಟಣೆಯಲ್ಲಿ ತಿಳಿಸಿದೆ.
ತಿಂಗಳು ಕಳೆಯುವ ಮುನ್ನವೇ ಡಿಕೆಶಿ ಸಂಪುಟಕ್ಕೆ ನಾಗೇಂದ್ರ ರಾಜೀನಾಮೆ
ಪ್ರಮಾಣವಚನ ಸ್ವೀಕರಿಸಿ ತಿಂಗಳು ತುಂಬುವ ಮೊದಲೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ಅವರು ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಮೂರು ತಿಂಗಳು ದಾಟುವಷ್ಟರಷ್ಟೇ ಅವರ ಓರ್ವ ಸಹೋದ್ಯೋಗಿಯ ಪದಚ್ಯುತಿ ಆದಂತಾಗಿದೆ. ಸಿದ್ದರಾಮಯ್ಯ ನೇತೃತ್ವದ ಮೂರು ವರ್ಷಗಳ ಅವಧಿಯಲ್ಲಿ, ಮೊದಲಿಗೆ ಬಿ. ನಾಗೇಂದ್ರ ಹಾಗೂ ಬಳಿಕ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ನಡೆ ಟೀಕಿಸಿದ್ದಕ್ಕೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಲಾಗಿತ್ತು.
ಶಿವಕುಮಾರ್ ಅವರ ಸಂಪುಟದಲ್ಲಿ ಯೋಜನೆ ಮತ್ತು ಸಾಂಖ್ಯಿಕ ಸಚಿವರಾಗಿ ನಾಗೇಂದ್ರ ಅವರು ಇದೇ ಆ. 3ರಂದು ಪ್ರಮಾಣವಚನ ಸ್ವೀಕರಿಸಿದ್ದರು. 2023ರ ವಿಧಾನಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾಗಿದ್ದರು. ಆಗ ನಡೆದಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದಲ್ಲಿ ಭಾಗಿಯಾದ ಆರೋಪ ಅವರ ಮೇಲಿತ್ತು. ಅಂದು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಶಿವಕುಮಾರ್ ನೇತೃತ್ವದ ಹೊಸ ಸರ್ಕಾರ ಜೂನ್ 3ರಂದು ಅಸ್ತಿತ್ವಕ್ಕೆ ಬಂದ ಎರಡು ತಿಂಗಳ ನಂತರ ನಡೆದ ಸಂಪುಟ ವಿಸ್ತರಣೆಯಲ್ಲಿ ಮತ್ತೆ ಅವರಿಗೆ ಸ್ಥಾನ ನೀಡಲಾಗಿತ್ತು. ಈಚೆಗೆ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಸದನದ ಒಳಗೆ ನಿರಂತರ ಪ್ರತಿಭಟನೆ ನಡೆಸಿದ್ದವು. ಇಡೀ ಅಧಿವೇಶನವೇ ವ್ಯರ್ಥವಾಗಿತ್ತು. ಅಹೋರಾತ್ರಿ ಧರಣಿ ನಡೆಸುವುದಾಗಿ ವಿರೋಧ ಪಕ್ಷಗಳು ಘೋಷಿಸಿದ ನಂತರ ನಿಗದಿತ ಅವಧಿಯ ಎರಡು ದಿನ ಮೊದಲೇ ಅಧಿವೇಶನವನ್ನು ಮುಕ್ತಾಯ ಮಾಡಲಾಗಿತ್ತು. ಸೆ. 1ರಿಂದ 10ರವರೆಗೆ ಸುಮಾರು 200 ಕಿ.ಮೀ ಪಾದಯಾತ್ರೆ ಹಮ್ಮಿಕೊಳ್ಳಲು ಬಿಜೆಪಿ ನಾಯಕರು ಸಿದ್ಧತೆ ನಡೆಸಿದ್ದರು.

