Dailyhunt Logo
  • Light mode
    Follow system
    Dark mode
    • Play Story
    • App Story
ನಾಳೆ ನೀರಿಲ್ಲ, ನಮ್ಮ ರಾಜ್ಯಕ್ಕೆ ಬರಗಾಲ ಹೊಸತಲ್ಲ: ಒಟ್ಟಾಗಿ ಪರಿಹಾರ ಹುಡುಕೋಣ

ನಾಳೆ ನೀರಿಲ್ಲ, ನಮ್ಮ ರಾಜ್ಯಕ್ಕೆ ಬರಗಾಲ ಹೊಸತಲ್ಲ: ಒಟ್ಟಾಗಿ ಪರಿಹಾರ ಹುಡುಕೋಣ

1791ರಲ್ಲಿ ಡೌಗಿ ಬರ,1863 ರಲ್ಲಿ ಅಮೇರಿಕಕ್ಕೆ ಹತ್ತಿ ಬೆಳೆಯಲು ಹೋಗಿ ಆಹಾರ ಧಾನ್ಯ ಕೊರತೆಯಾಗಿ ನಮ್ಮ ರಾಜ್ಯದಲ್ಲಿ ಬರ ಬಂದಿತ್ತು.1853-54 ಬರವಿತ್ತು,1876-77 ರ ಬರದಲ್ಲಿ 2,34,841 ಜನ ವಿಜಾಪುರದಲ್ಲಿ ಸಾವನ್ನಪ್ಪಿದ್ದರು. ಅದೇ ವರ್ಷ ಮೇಜರ್ ಸ್ಯಾಂಕಿ ಮೈಸೂರು ರಾಜ್ಯದ ಕೆರೆ ಸುತ್ತಾಡಿ ಹೂಳೆತ್ತುವ ಕಾರ್ಯದ ವರದಿ ನೀಡಿದ್ದಾರೆ.

1972ರ ಬರದಲ್ಲಿ ಇಂದಿನ ಕಲ್ಯಾಣ ಕರ್ನಾಟಕ ಪ್ರದೇಶದ ಬೆಳೆ ಸಂಪೂರ್ಣ ಹಾಳಾಗಿ ಬರಸಾಥ್ ಬರ ಎಂದು ಖ್ಯಾತಿ ಆಗಿತ್ತು. ಮೊನ್ನೆ ಮೊನ್ನೆ 2013ರಲ್ಲಿ 125 ತಾಲೂಕು, 2016ರಲ್ಲಿ 110, 2018ರಲ್ಲಿ 156 ತಾಲೂಕು ಬರ ಪೀಡಿತ ಎಂದು ಘೋಷಣೆ ಮಾಡಿದ್ದು ನೆನಪಿರಬಹುದು. ಸರಕಾರ ಈ ಬರಕ್ಕೆ ಯಾವ ಹೆಸರು ಇಡಲಿಲ್ಲ, ಆದರೆ ನಾನು ಇಡೀ ರಾಜ್ಯ ಸುತ್ತಾಡಿ ನೋಡಿದ ಹಿನ್ನಲೆಯಲ್ಲಿ ಟ್ಯಾಂಕರ್ ಬರ ಎಂದು ದಾಖಲಿಸಿದ್ದೇನೆ. ಕುಡಿಯುವ ನೀರು ಪೂರೈಸಲು 60-70 ಕಿಲೋ ಮೀಟರ್ ದೂರದ ವರೆಗೂ ಟ್ಯಾಂಕರ್ ಓಡಿದ್ದು ನೆನಪಿರಬಹುದು.

ನೀರಿನ ಬಳಕೆ ಹೆಚ್ಚಿದೆ, ಅರಣ್ಯ ನಾಶವಾಗಿದೆ. ರಾಜ್ಯದ 39, 173ಕೆರೆಗಳಲ್ಲಿ ಬಹುತೇಕ ಕೆರೆ ಹೂಳು ತುಂಬಿದೆ. ಇವತ್ತು ರಾಜ್ಯದಲ್ಲಿ ಸುಮಾರು 55ಲಕ್ಷ ಕೊಳವೆ ಬಾವಿಗಳು ಇವೆ! ವರ್ಷದಿಂದ ವರ್ಷಕ್ಕೆ ಅಂತರ್ಜಲ ಕುಸಿಯುತ್ತಿದೆ. ಮಳೆ ಈ ವರ್ಷ ಕೊರತೆಯಾಗಿದೆ. ವಾಡಿಕೆ ಮಳೆಯ ಮೂರು ಪಟ್ಟು ಮಳೆ ಬಂದರೂ ನಮ್ಮ ರಾಜ್ಯ ಜಲಕ್ಷಾಮ ಅನುಭವಿಸುವ ಪರಿಸ್ಥಿತಿ ಇದೆ. ಇಂಥ ಸ್ಥಿತಿಯಲ್ಲಿ ಮಳೆ ಕಡಿಮೆ ಆದರೆ ಹೇಗೆಂದು ಯೋಚಿಸುವುದು ಕಷ್ಟವಿದೆ.

ಸರಕಾರದ ಬಳಿ ಅಧಿಕಾರಿ ವರ್ಗ, ಆಧುನಿಕ ತಂತ್ರ ಜ್ಞಾನ, ಸಂಪರ್ಕ ಸೌಲಭ್ಯ ಎಲ್ಲವೂ ಇದೆ.ಹಳ್ಳಿಯಲ್ಲಿರುವ ನಾವು ಕೇವಲ ಅರ್ಧ ಗಂಟೆ ಸಮಯದಲ್ಲಿ ಇಡೀ ರಾಜ್ಯದಲ್ಲಿ ಆಯ್ದ ಕೃಷಿಕರ ಜೊತೆಗೆ ಮಾತಾಡಿ ನೀರಿನ ಸ್ಥಿತಿ ಹೇಳಬಹುದು. ಹೀಗಿರುವಾಗ ಸರ್ಕಾರ ಸರಿಯಾಗಿ ಶಿಸ್ತುಬದ್ಧ ಕೆಲಸ ಮಾಡಿದರೆ ಬರ ಎದುರಿಸುವ ಸಿದ್ಧತೆ ಸಾಧ್ಯವಿದೆ.

ಈಗ ನೀರಿಲ್ಲ, ಬೆಳೆ ಬೆಳೆಯಬಾರದು, ಭತ್ತ ನಾಟಿ ಬೇಡ, ಕಬ್ಬು ವಿಸ್ತೀರ್ಣ ಬೇಡ ಎಂದು ಹೇಳುತ್ತಾ ಹೋಗುವ ಬದಲು ಏನು ಮಾಡಬೇಕು? ಹೇಳುವುದು ಮುಖ್ಯ. ಬೆಂಕಿ ಬಿದ್ದಾಗ ಬಾವಿ ತೆಗೆಯುವ ಹಾಗೇ ಸರಕಾರ ಕೂಡ ವರ್ತಿಸಬಾರದು. ತಕ್ಷಣ ಪ್ರತೀ ಹೋಬಳಿ, ತಾಲೂಕು, ಜಿಲ್ಲಾ ಮಟ್ಟದ ರೈತರ ನಿಜ ಸ್ಥಿತಿ ಸಮೀಕ್ಷೆ ನಡೆಸಬೇಕು.

ಬರ ಗೆಲ್ಲುವ ತಂತ್ರ ಬೇರೆ ಬೇರೆ ಪ್ರದೇಶದ ರೈತರಲ್ಲಿದೆ, ಅದನ್ನು ಮೊದಲು ಅರಿಯಬೇಕು. ಬಹುವಾರ್ಷಿಕ ತೋಟಗಾರಿಕೆ ಬೆಳೆ ವಿಸ್ತೀರ್ಣವಾಗಿದೆ, ನೀರು ಖಾಲಿಯಾಗುತ್ತಿದೆ. ನೀರು ಉಳಿಸುವ ಕಾರ್ಯ ಕೂಡಾ ಅತ್ಯಂತ ಮುಖ್ಯ.

ಅಣೆಕಟ್ಟೆ ನೀರು ನಗರದ ಕುಡಿಯುವ ನೀರು ಸರಬರಾಜು ಕಾರ್ಯಕ್ಕೆ ಖಾಲಿ ಆಗುವ ಸಾಧ್ಯತೆ ಇದೆ. ನಗರದ ಕೆರೆಗಳನ್ನು ಹಾಳು ಮಾಡುತ್ತಾ ಬಡಾವಣೆಗೆ ಹಳ್ಳಿ ನುಂಗುತ್ತಾ ಹೋಗುವ ಅಭಿವೃದ್ಧಿ ಮಾದರಿ ಅನಾಹುತ ಕೃಷಿಕರು ಅನುಭವಿಸಬೇಕಿದೆ. ಭತ್ತದ ಗದ್ದೆಗೆ ದನಕರು ಮೇಯಲು ಬಿಟ್ಟವರು, 40 ಸಾವಿರ ಹೆಕ್ಟೇರ್ ಪ್ರದೇಶದ ಕಬ್ಬು ಕಡಿದು ದನಕರುವಿಗೆ ಮೇವಿಗೆ ಹಾಕಿದ 2017ರ ಚಿತ್ರ ನೆನಪಿದೆ.

ನಮ್ಮ ರಾಜ್ಯದ ರಾಜಕಾರಣಿಗಳ ದೊಡ್ಡ ಸಮಸ್ಯೆಯೆಂದರೆ ಚುನಾವಣೆ ನೆನಪಿರುವಷ್ಟು ಜನ ಅನುಭವಿಸಿದ ಬರಗಾಲ ಇವರಿಗೆ ನೆನಪೇ ಇರುವುದಿಲ್ಲ. ಮಹಾರಾಷ್ಟ್ರ ಲಾತೂರು ರೇಲ್ವೆ ಮೂಲಕ ಬರದಲ್ಲಿ ನೀರು ಪಡೆದಿತ್ತು, ಈ ವರ್ಷ ಇಂಥ ದು:ಸ್ಥಿತಿ ನಮ್ಮ ರಾಜ್ಯಕ್ಕೆ ಬಾರದಂತೆ ಎಚ್ಚರ ವಹಿಸಬೇಕು.

ನದಿ ಒಣಗಿದಾಗ ಮರಳು ಸಾಗಿಸಿ ಬದುಕುವ ಕಾರ್ಯವನ್ನು ಟ್ರ್ಯಾಕ್ಟರ್ ಮೂಲಕ ಶುರುವಾಗುತ್ತದೆ, ಹೀಗೆ ನದಿ ಸಾಯಿಸುತ್ತಾ ಹೋದರೆ ಮುಂದೆ ಭಯಾನಕ ಪರಿಸ್ಥಿತಿ ಬರುತ್ತದೆ. ಬರ ಎದುರಿಸುವುದು ,ನಿರ್ವಹಿಸುವುದು ಸೂಕ್ಷ್ಮ ಕಾರ್ಯ, ಇದಕ್ಕೆ ಅಧ್ಯಯನ ಅಗತ್ಯ. ನಮ್ಮ ಅಧಿಕಾರಿಗಳಲ್ಲಿ ಯಾರಿಗೆ ಇಡೀ ಕರ್ನಾಟಕದ ವಿವಿಧ ವಲಯದ ಕೃಷಿಯ ನಿಜವಾದ ಕಷ್ಟ ಗೊತ್ತಿದೆ? ತಿಳಿಯಬೇಕು.

ಬರ ಎದುರಿಸುವುದು ಸರ್ಕಾರದ ಕೆಲಸ ಮಾತ್ರವಲ್ಲ, ಜನರ ಜೊತೆಗೂ ಮಾತಾಡಿ ಸರಿಯಾದ ಪರಿಹಾರದ ದಾರಿ ಹುಡುಕೋಣ.

Dailyhunt
Disclaimer: This content has not been generated, created or edited by Dailyhunt. Publisher: Prajavani