ಸಿಇಸಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಅಕ್ಟೋಬರ್ 10ರಂದು ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಪ್ರತಿಭಟನೆ ನಡೆಸಲು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳು ಸಜ್ಜುಗೊಂಡಿರುವ ಬೆನ್ನಲ್ಲೇ, ಭದ್ರತೆಗಾಗಿ 20 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ.
'ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಯಾವುದೇ ರಾಜಕೀಯ ಪಕ್ಷ, ವಿದ್ಯಾರ್ಥಿ ಸಂಘಟನೆಗಳಿಗೆ ಅನುಮತಿ ನೀಡಿಲ್ಲ. ಸಾರ್ವಜನಿಕರು ಇಂತಹ ಅನಧಿಕೃತ ಸಭೆ, ಕೂಟಗಳಲ್ಲಿ ಭಾಗವಹಿಸಬಾರದು. ಪೊಲೀಸ್, ಭದ್ರತಾ ಸಿಬ್ಬಂದಿ ಮೇಲೆ ದಾಳಿ ನಡೆಸುವುದಾಗಲೀ, ಹಿಂಸಾಚಾರದಲ್ಲಿ ಭಾಗಿಯಾಗುವುದಾಗಲೀ, ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಸುದ್ದಿ ಹರಡುವುದಾಗಲೀ ಮಾಡಬಾರದು. ಕಾನೂನು ಸುವ್ಯವಸ್ಥೆ ಪಾಲಿಸಲು ನಾವು ಸಿದ್ಧರಾಗಿದ್ದೇವೆ' ಎಂದು ದೆಹಲಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಸಾರ್ವಜನಿಕ ಶಾಂತಿಗೆ ಭಂಗ ತರುವುದನ್ನು ತಡೆಯಲು, ಜನರ ಮತ್ತು ವಾಹನಗಳ ಸುಗಮ ಸಂಚಾರವನ್ನು ಖಚಿತಪಡಿಸಲು ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿಯಲ್ಲಿ ಹೆಚ್ಚುವರಿ ಭದ್ರತೆ ನಿಯೋಜಿಸಲಾಗಿದೆ. ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಸಾಮಾಜಿಕ ಜಾಲತಾಣ, ಆನ್‌ಲೈನ್ ಸುದ್ದಿಗಳನ್ನು ಹಂಚಿಕೊಳ್ಳುವ ಮೊದಲು, ದೆಹಲಿ ಪೊಲೀಸರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿನ ಮಾಹಿತಿ ಪರಿಶೀಲಿಸಿ ಖಚಿತಪಡಿಸಿಕೊಳ್ಳುವಂತೆಯೂ ಪೊಲೀಸರು ಮನವಿ ಮಾಡಿದ್ದಾರೆ.
261009-51-69781437

