ತಿ.ನರಸೀಪುರ: ನಾಲೆಗಳಿಗೆ ಕೂಡಲೇ ನೀರು ಹರಿಸುವಂತೆ ಒತ್ತಾಯಿಸಿ ಕಬಿನಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರು ಪಟ್ಟಣದ ಕಬಿನಿ ನಾಲಾ ವಿತರಣಾ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.
ನಿಗದಿತ ವೇಳಾಪಟ್ಟಿಯಂತೆ ನೀರು ಹರಿಯದೇ ಬೆಳೆಗೆ ತೊಂದರೆಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರ ಸೂಚನೆ ಮೇರೆಗೆ ನಮ್ಮ ಭಾಗದ ನಾಲೆಗಳನ್ನು ಬಂದ್ ಮಾಡಿ ಕೊಳ್ಳೇಗಾಲ ಭಾಗಕ್ಕೆ ಮಾತ್ರ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿದ ಮುಖಂಡರು, ಅವರು ಕೇವಲ ಕೊಳ್ಳೇಗಾಲ ಅಥವಾ ಚಾಮರಾಜನಗರ ಕ್ಷೇತ್ರಕ್ಕೆ ಮಾತ್ರ ಸಚಿವರೇ ? ಎಲ್ಲ ಕ್ಷೇತ್ರಗಳ ರೈತರನ್ನು ಸಮಾನವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಇಲಾಖೆಯು ಈ ಹಿಂದೆ ಪ್ರಕಟಿಸಿದಂತೆ ಮುಂದಿನ ಏಳು ದಿನಗಳು ನಮ್ಮ ಭಾಗದ ಬೆಳೆಗಳಿಗೆ ನಿರಂತರ ನೀರು ಹರಿಸಬೇಕು. ಇದರಿಂದ ತೆನೆ ಕಟ್ಟುವ ಹಂತದಲ್ಲಿರುವ ಭತ್ತದ ಬೆಳೆಗೆ ಅನುಕೂಲವಾಗುತ್ತದೆ. ತಕ್ಷಣ ನೀರು ಹರಿಸದಿದ್ದರೆ ಕಚೇರಿ ಆವರಣ ಬಿಟ್ಟು ಕದಲುವುದಿಲ್ಲ ಎಂದು ಪಟ್ಟುಹಿಡಿದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ತೊಟ್ಟವಾಡಿ ಮಹದೇವಸ್ವಾಮಿ ಮಾತನಾಡಿ, ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಕಬಿನಿ ನಾಲಾ ವಿತರಣಾ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದಿನೇಶ್ ಕುಮಾರ್ ಅವರು ಸ್ಥಳಕ್ಕೆ ಆಗಮಿಸಿ, ನಾಲೆಗಳಿಗೆ ನೀರು ಹರಿಸಲು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಆ ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.
ಮುಖಂಡರಾದ ಬನ್ನಹಳ್ಳಿ ಶಿವಕುಮಾರ್, ಸುಜ್ಜಲೂರು ಜೈಸ್ವಾಮಿ, ಹೊಸಪುರ ಸಿದ್ದರಾಜು, ಮಹದೇವು, ಮಹೇಶ, ನಿಲಸೋಗೆ ಮಹದೇವಪ್ರಸಾದ್, ಕಿರಸೂರು ರಂಗಯ್ಯ, ಮಹದೇವನಾಯಕ, ಪಾಪನಾಯಕ, ಮನು, ಸೋಮಣ್ಣ ಭಾಗವಹಿಸಿದ್ದರು.

