ನಾಯಕನಹಟ್ಟಿ: ಮಧ್ಯ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ನಾಯಕನಹಟ್ಟಿಯಲ್ಲಿ 6 ತಿಂಗಳಿಂದ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ದುರ್ಬಲವಾಗಿದೆ. ಅವುಗಳ ದುರಸ್ತಿ ಮತ್ತು ನಿರ್ವಹಣೆಯ ಹೊಣೆ ಯಾರದ್ದು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಪಟ್ಟಣದಲ್ಲಿ ಐತಿಹಾಸಿಕ ಗುರುತಿಪ್ಪೇರುದ್ರಸ್ವಾಮಿ ಒಳಮಠ, ಹೊರಮಠ, ಏಕಾಂತ ಮಠಗಳಿದ್ದು, ಇಲ್ಲಿಗೆ ನಿತ್ಯ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಸಾವಿರಾರು ಭಕ್ತರು, ಪ್ರವಾಸಿಗರು, ಸಂಶೋಧಕರು, ವಿದ್ಯಾರ್ಥಿಗಳು ಭೇಟಿ ನೀಡುತ್ತಾರೆ. ಹಾಗೇ ಪಟ್ಟಣದಿಂದ 8 ಕಿ.ಮೀ ದೂರದಲ್ಲಿ ದೇಶದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳಾದ ಐಐಎಸ್‌ಇ, ಡಿಆರ್‌ಡಿಒ, ಬಾರ್ಕ್, ಇಸ್ರೊ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಜೊತೆಗೆ ಪಟ್ಟಣವು 48 ಹಳ್ಳಿಗಳ ಹೋಬಳಿ ಕೇಂದ್ರವಾಗಿದೆ.
ಈ ಕಾರಣ ಯಾವಾಗಲೂ ಜನಸಂದಣಿ ಇರುತ್ತದೆ. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ದೇವಾಲಯಗಳು, ಭಕ್ತರು, ಪ್ರವಾಸಿಗರು ಮತ್ತು ಪಟ್ಟಣಕ್ಕೆ ಬಂದು ಹೋಗುವ ವಾಹನಗಳ ಮೇಲೆ ನಿಗಾ ಇಡುವ ಉದ್ದೇಶದಿಂದ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಗಾವಲು ಅತ್ಯವಶ್ಯಕವಾಗಿದೆ.
40 ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆ: ಗುರುತಿಪ್ಪೇರುದ್ರಸ್ವಾಮಿ ದೇಗುಲದಿಂದ ಒಳಮಠ, ಹೊರಮಠ, ಏಕಾಂತ ಮಠ, ಈಶ್ವರ ದೇಗುಲಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿದೆ. ಆದರೆ ಪಟ್ಟಣದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ವ್ಯವಸ್ಥೆ ಇರಲಿಲ್ಲ. ಇದನ್ನು ಮನಗಂಡ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ವಾರ್ಷಿಕ ಜಾತ್ರೆ ಮತ್ತು ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ದೇವಾಲಯದ ವತಿಯಿಂದಲೇ ₹12 ಲಕ್ಷ ವೆಚ್ಚದಲ್ಲಿ 2 ವರ್ಷಗಳ ಹಿಂದೆ ಪಟ್ಟಣದಲ್ಲಿ ಶಾಶ್ವತವಾಗಿ 40 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಂಡಿದ್ದರು. ಅವುಗಳ ವೀಕ್ಷಣೆ, ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಪೊಲೀಸ್ ಠಾಣೆಗೆ ವಹಿಸಿದ್ದರು.
ನಿರ್ವಹಣೆ, ದುರಸ್ತಿ ವಿಚಾರದಲ್ಲಿ ಗೊಂದಲ: 'ಪಟ್ಟಣದಲ್ಲಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ಆರಂಭದ ಒಂದು ವರ್ಷ ಕ್ಯಾಮೆರಾ ಅಳವಡಿಸಿದ ಕಂಪನಿಯವರೇ ಕೈಗೊಂಡಿದ್ದರು. ಅವರ ಒಪ್ಪಂದ ಮುಕ್ತಾಯವಾದ ಬಳಿಕ 6 ತಿಂಗಳಿನಿಂದ 25ಕ್ಕೂ ಹೆಚ್ಚು ಕ್ಯಾಮೆರಾಗಳು ಕೆಟ್ಟಿವೆ. ದೇವಾಲಯದ ಆಡಳಿತ ಮಂಡಳಿ, ಪೊಲೀಸರು ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು, 'ಕ್ಯಾಮೆರಾಗಳ ನಿರ್ವಹಣೆ ಹೊಣೆ ನಮ್ಮದಲ್ಲ' ಎಂದು ಹೇಳುತ್ತಿದ್ದಾರೆ. ಇದರಿಂದ ಪಟ್ಟಣದ ಸುರಕ್ಷತೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ' ಎಂದು ಪಟ್ಟಣ ಪಂಚಾಯಿತಿ ನಾಮ ನಿರ್ದೇಶಿತ ಸದಸ್ಯ ಟಿ.ವಾಸೀಂ ಅಹಮ್ಮದ್, ಸಾರ್ವಜನಿಕರಾದ ಮಾರ್ಕಂಡೇಯ, ಟಿ.ರುದ್ರಮುನಿ ಹೇಳುತ್ತಾರೆ.
ಹೆಚ್ಚಾದ ಕಳ್ಳರ ಕೈಚಳಕ: ಸಿ.ಸಿ.ಟಿ.ವಿ ಕ್ಯಾಮೆರಾ ಸ್ಥಗಿತಗೊಂಡಿದ್ದರಿಂದ ಪಟ್ಟಣದಲ್ಲಿ ನಡೆಯುವ ಸೋಮವಾರದ ಸಂತೆ ದಿನ ಮೊಬೈಲ್ ಕಳ್ಳರು ಕೈಚಳಕ ತೋರಿಸುತ್ತಿದ್ದಾರೆ. ಕ್ಯಾಮೆರಾಗಳಿರುವ ಕಡೆ ಅಪರಾಧ ಕೃತ್ಯಗಳನ್ನು ಎಸಗಿದರೆ ಸಿಕ್ಕಿಬೀಳುವ ಸಾಧ್ಯತೆ ಹೆಚ್ಚಾಗಿರುವುದರಿಂದ ಕಳ್ಳರು ಹಿಂಜರಿಯುತ್ತಾರೆ. ಅಲ್ಲದೇ ಸರಗಳವು, ಅಪಘಾತ, ಸಂಚಾರ ನಿಮಯ ಉಲ್ಲಂಘಿಸಿದ ಆರೋಪಿಗಳನ್ನು ಪತ್ತೆ ಹಚ್ಚಲು ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳು ಸಹಕಾರಿಯಾಗಲಿವೆ.
40ಕ್ಕೂ ಹೆಚ್ಚು ಕ್ಯಾಮೆರಾಗಳು ಕೆಟ್ಟಿರುವುದರಿಂದ ಪಟ್ಟಣದ ಪ್ರಮುಖ ಸ್ಥಳಗಳಲ್ಲಾಗುವ ಆಗು ಹೋಗುಗಳು ಮತ್ತು ಕೆಲವು ಪ್ರಕರಣಗಳನ್ನು ಪತ್ತೆಹಚ್ಚಲು ಹೆಣಗಾಡುವ ಪರಿಸ್ಥಿತಿ ಎದುರಾಗಿದೆ ಎಂದು ಪೊಲೀಸರು ಹೇಳುತ್ತಾರೆ.
ಎಚ್.ಗಂಗಾಧರಪ್ಪ, ದೇವಾಲಯ ಕಾರ್ಯ ನಿರ್ವಹಣಾಧಿಕಾರಿಗುರುತಿಪ್ಪೇರುದ್ರಸ್ವಾಮಿ ವಾರ್ಷಿಕ ಜಾತ್ರೆ ಮತ್ತು ಸಾರ್ವಜನಿಕ ಉದ್ದೇಶದಿಂದ ದೇವಾಲಯದ ವತಿಯಿಂದ ಪಟ್ಟಣದಲ್ಲಿ 40 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸ ಲಾಗಿದೆ. ಅವುಗಳ ನಿರ್ವಹಣೆ ಜವಾಬ್ದಾರಿ ಪೊಲೀಸದ್ದೇ.-ಒ.ಶ್ರೀನಿವಾಸ್, ಪ.ಪಂ. ಮುಖ್ಯಾಧಿಕಾರಿ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ ಕ್ಯಾಮೆರಾಗಳ ನಿರ್ವಹಣೆಯ ವಿಚಾರವನ್ನು ಕೌನ್ಸಿಲ್ ಸಭೆ ಗಮನಕ್ಕೆ ತಂದು ಅವುಗಳ ದುರಸ್ತಿಗೆ ಮುಂದಾಗುತ್ತೇವೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260703-44-1533614532

