ಕುಶಾಲನಗರ: ರಾಜ್ಯ ಸರ್ಕಾರದ 'ಗ್ರಾಮಾನುಭವ' ಯೋಜನೆಯಡಿ ಮಡಿಕೇರಿಯ ಪಿ.ಎಂ.ಶ್ರೀ. ಶಾಲೆಯ ಮಕ್ಕಳು ತಮ್ಮ ಶಿಕ್ಷಕರೊಂದಿಗೆ ಭಾನುವಾರ ಹೆಬ್ಬಾಲೆ, ತೊರೆನೂರು ಹಾಗೂ ಶಿರಂಗಾಲ ಗ್ರಾಮದ ಚಿಕ್ಕನಾಯಕನ ಹೊಸಳ್ಳಿ ಗ್ರಾಮಕ್ಕೆ ತೆರಳಿ ರೈತರ ಕೃಷಿ ಜಮೀನಿಗೆ ಭೇಟಿ ನೀಡಿ ರೈತರ ಮನೆಯಂಗಳದಲ್ಲಿ ಕೃಷಿ ಅನುಭವ ಪಡೆದುಕೊಂಡರು.
ಮಡಿಕೇರಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲಾ ವಿಭಾಗ ಹಾಗೂ ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಿಂದ 8, 9 ಮತ್ತು 11 ನೇ ತರಗತಿಯ ಒಟ್ಟು 50 ಮಕ್ಕಳು ಕೃಷಿ ಕುರಿತು ರೈತರಿಂದ ನೇರ ಅನುಭವ ಪಡೆದರು.
ಚಿಕ್ಕನಾಯಕಹಳ್ಳಿ ಪ್ರಗತಿಪರ ಕೃಷಿಕ ಟಿ.ಜೆ.ಶೇಷಪ್ಪ ಅವರ ಮನೆಯಂಗಳದಲ್ಲಿ ರೈತರೊಂದಿಗೆ ಸಂವಾದ ನಡೆಸಿದರು.
ಈ ವೇಳೆ ಮಾತನಾಡಿದ ಟಿ.ಜೆ.ಶೇಷಪ್ಪ, ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಸೂಕ್ತ ಕಾಲದಲ್ಲಿ ವೈಜ್ಞಾನಿಕ ಕ್ರಮದಿಂದ ಕೃಷಿ ಮಾಡಿದರೆ ಖಂಡಿತವಾಗಿಯೂ ಕೃಷಿಯಲ್ಲಿ ಉತ್ತಮ ಲಾಭ ಗಳಿಸಬಹುದು' ಎಂದು ಹೇಳಿದರು.
ಕೃಷಿ ಇಲಾಖೆಯ ನಿವೃತ್ತ ಕೃಷಿ ಅಧಿಕಾರಿ ಎಸ್.ವಿ.ಶಿವಾನಂದ ಅವರು, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಪ್ರಗತಿಪರ ಕೃಷಿಕ ಟಿ.ಜೆ.ಶೇಷಪ್ಪ ವೈವಿಧ್ಯಮಯ ಬೆಳೆ ತೆಗೆಯುವ ಮೂಲಕ ಕೃಷಿ ಜೀವನದಿಂದ ಹೇಗೆ ಹೆಚ್ಚಿನ ಆದಾಯ ಗಳಿಸಬಹುದು ಎಂಬುದಕ್ಕೆ ಮಾದರಿ ರೈತನಾಗಿ ಹೊರಹೊಮ್ಮಿದ್ದಾರೆ ಎಂದರು.
ಕೃಷಿ ಮಾರ್ಗದರ್ಶಕ ಟಿ.ಯು.ಪುನೀತ್ ಮಕ್ಕಳೊಂದಿಗೆ ಸಂವಾದ ನಡೆಸಿದರು. ಪರಿಸರಪ್ರೇಮಿ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ನಗರದ ಮಕ್ಕಳು ಹಳ್ಳಿಗೆ ಮತ್ತು ರೈತರ ಜಮೀನಿಗೆ ಭೇಟಿ ನೀಡುವ 'ಗ್ರಾಮಾನುಭವ' ಕಾರ್ಯಕ್ರಮವು ತರಗತಿಯ 4 ಗೋಡೆಗಳ ಮಧ್ಯೆ ಕಲಿಯಲಾಗದ ಜೀವನ ಪಾಠಗಳನ್ನು ಮಕ್ಕಳು ಹಳ್ಳಿಯ ಈ ಭೇಟಿ ಮತ್ತು ರೈತರಿಂದ ಕಲಿಯುತ್ತಾರೆ ಎಂದರು.
ಇದಕ್ಕೂ ಮೊದಲು ಹೆಬ್ಬಾಲೆ ಗ್ರಾಮದ ಪ್ರಗತಿಪರ ಕೃಷಿಕ ಎಚ್.ಆರ್.ಶಿವಪ್ಪ(ಹುರಕ್ಕಿ ಕುಮಾರ್) ಅವರ ಕೃಷಿ ಜಮೀನಿಗೆ ಭೇಟಿ ನೀಡಿ ಅಡಿಕೆ ತೋಟ ಮತ್ತು ಹೆಬ್ಬಾಲೆಯ ಎಚ್.ಎನ್.ಬಸಪ್ಪ ಅವರ ತೋಟದಲ್ಲಿ ಕೃಷಿಹೊಂಡ ವೀಕ್ಷಿಸಿದ ತಂಡವು ಹೈನುಗಾರಿಕೆ ಕೃಷಿ ಅನುಭವ ಪಡೆಯಿತು. ಮಧ್ಯಾಹ್ನ ರೈತ ಟಿ.ಜೆ.ಶೇಷಪ್ಪ ಅವರ ಮನೆಯಂಗಳದಲ್ಲಿ ಮಕ್ಕಳು ಹಳ್ಳಿ ಊಟದ ರುಚಿ ಸವಿದರು.
ಹೆಬ್ಬಾಲೆ ಕ್ಲಸ್ಟರ್ ಸಿಆರ್‌ಪಿ ಎಂ.ಕೆ.ದಯಾನಂದ, ಮಡಿಕೇರಿ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕಿ ಕೆ.ಎನ್.ಪಲ್ಲವಿ, ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಕೆ.ವಿ.ಶಶಿಕಲಾ, ಶಿಕ್ಷಕಿ ಸುಮ, ಪ್ರಾಥಮಿಕ ಶಾಲಾ ವಿಭಾಗದ ಡಿ.ಶೃತಿಶ್ರೀ, ಎಂ.ಎಸ್.ಪ್ರಿಯ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿದ್ದರು.
ಪ್ರಗತಿಪರ ರೈತರಾದ ತೊರೆನೂರು ಗ್ರಾಮದ ಟಿ.ಎನ್.ಶಿವಾನಂದ, ಟಿ.ಸಿ.ತ್ರಿಣೇಶ್, ಟಿ.ಬಿ.ಬಸಪ್ಪ,ಮಣಜೂರಿನ ಎಂ.ಜಿ.ಕುಮಾರಸ್ವಾಮಿ, ಎಂ.ಎನ್.ಶಶಾಂಕ್, ಯಶೋಧ, ಟಿ.ಜೆ.ನಾಗೇಶ್ಹೆಬ್ಬಾಲೆಯ ಎಚ್.ಎನ್.ಬಸವಣ್ಣ, ಎಚ್.ಆರ್.ಶಿವಪ್ಪ( ಹುರಕ್ಕಿ ಕುಮಾರ್) ನಿವೃತ್ತ ಶಿಕ್ಷಕ ಜಿ.ಮೂರ್ತಿ,ಶೇಷಪ್ಪ ಅವರ ಪತ್ನಿ ಎಂ.ಆರ್.ಜ್ಯೋತಿ, ಮಕ್ಕಳಾದ ಕವನ್ ಮತ್ತು ಕಾವ್ಯ, ಗ್ರಾಮಸ್ಥರು ಪಾಲ್ಗೊಂಡಿದ್ದರು.
261104-51-2039611729

