Dailyhunt Logo
  • Light mode
    Follow system
    Dark mode
    • Play Story
    • App Story
ನಮೂನೆ 6 | 'ಸುಪ್ರೀಂ' ತಕರಾರು: ಯಾವುದೇ ಬದಲಾವಣೆಗೆ ಅನುಮೋದನೆ ನೀಡಿಲ್ಲ ಎಂದ CJI

ನಮೂನೆ 6 | 'ಸುಪ್ರೀಂ' ತಕರಾರು: ಯಾವುದೇ ಬದಲಾವಣೆಗೆ ಅನುಮೋದನೆ ನೀಡಿಲ್ಲ ಎಂದ CJI

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗವು ಬಳಸುತ್ತಿರುವ 'ನಮೂನೆ 6'ರಲ್ಲಿನ ಯಾವುದೇ ಬದಲಾವಣೆಗಳಿಗೆ ತಾನು ಅನುಮೋದನೆ ನೀಡಿರಲಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.

'ನಮೂನೆ 6 ಅನ್ನು ಯಾರು ತಿದ್ದುಪಡಿ ಮಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ನಾವು ಬಯಸುತ್ತೇವೆ.

ಸಂಬಂಧಪಟ್ಟ ದಾಖಲೆಗಳನ್ನು ಹಾಜರುಪಡಿಸಿದಾಗ ಈ ವಿಷಯದ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸುತ್ತೇವೆ' ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ನೇತೃತ್ವದ ಪೀಠ ತಿಳಿಸಿದೆ.

'ನಮೂನೆ 6' ಎಂಬುದು ಅರ್ಹ ಮತದಾರರೊಬ್ಬರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಲು ಸಲ್ಲಿಸುವ ಅರ್ಜಿಯಾಗಿದೆ. ಸಿಇಸಿ ಜ್ಞಾನೇಶ್ ಕುಮಾರ್ ಅವರು ತಮ್ಮ ಇಬ್ಬರು ಸಹೋದ್ಯೋಗಿಗಳ ಒಪ್ಪಿಗೆಯಿಲ್ಲದೆ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿ ಶೈಲೇಂದ್ರ ಮಣಿ ತ್ರಿಪಾಠಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸಿಜೆಐ ಮತ್ತು ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಹಾಗೂ ವಿ. ಮೋಹನಾ ಅವರ ಪೀಠವು ನಡೆಸುತ್ತಿದೆ.

ತ್ರಿಪಾಠಿ ಪರ ಹಾಜರಾದ ಹಿರಿಯ ವಕೀಲೆ ಮೇನಕಾ ಗುರುಸ್ವಾಮಿ, ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸಲು ಅರ್ಜಿ ಸಲ್ಲಿಸಲು ಬಳಸುವ ನಮೂನೆ 6ರಲ್ಲಿ ಮಾಡಲಾದ ಬದಲಾವಣೆಗಳ ಕುರಿತು ಕಳವಳ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ನಡೆಸಲಾದ ಎಸ್‌ಐಆರ್‌ ಪ್ರಕ್ರಿಯೆಯ ವಿಧಾನವನ್ನು ಪ್ರಸ್ತಾಪಿಸಿದ ಅವರು, ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಎರಡು ಹೆಚ್ಚುವರಿ ಷರತ್ತುಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಿದರು.

ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಎಸ್‌ಐಆರ್‌ ಪ್ರಕ್ರಿಯೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಂಡ ವಿಧಾನದ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ನ್ಯಾಯಾಲಯದ ಈ ಅವಲೋಕನ ಹೊರಬಂದಿದೆ.

ತ್ರಿಪಾಠಿ ಅವರ ಅರ್ಜಿಯ ಸಂಬಂಧ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದ ಪೀಠ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪಟ್ನಾ ನಿವಾಸಿ ರಾಕೇಶ್ ಕುಮಾರ್ ಸಿಂಗ್ ಅವರು ಸಲ್ಲಿಸಿದ್ದ ಮತ್ತೊಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದಿಗೆ ಈ ಪ್ರಕರಣವನ್ನು ಒಟ್ಟಾಗಿ ಪರಿಗಣಿಸಲು ನಿರ್ಧರಿಸಿದೆ.

ಚುನಾವಣಾ ಆಯೋಗವು ಒಮ್ಮತದ ನಿರ್ಧಾರ ಕೈಗೊಳ್ಳುವ ಶಾಸನಬದ್ಧ ಅಗತ್ಯವನ್ನು ಸಿಇಸಿ ಅವರ ಕ್ರಮಗಳು ಉಲ್ಲಂಘಿಸುತ್ತವೆ ಎಂದು ತ್ರಿಪಾಠಿ ಅವರ ಅರ್ಜಿಯಲ್ಲಿ ಆರೋಪಿಸಲಾಗಿದೆ.

ಅಲ್ಲದೆ, ಕರ್ತವ್ಯಲೋಪಕ್ಕಾಗಿ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಆಯೋಗದ ಇತರ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸುವಂತೆಯೂ ಕೋರಲಾಗಿದೆ.

'ನಮೂನೆ 6' ಬದಲಾಗಿಲ್ಲ: ಆಯೋಗ ಪ್ರತಿಪಾದನೆ

'ನಮೂನೆ 6'ರಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ಬದಲಿಗೆ, ಬಿಹಾರದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಸಂದರ್ಭ ಹೊರಡಿಸಿದ್ದ ಆದೇಶದ ಮೂಲಕ ಅದಕ್ಕೆ ಹೆಚ್ಚುವರಿಯಾಗಿ ಒಂದು ಘೋಷಣೆಯನ್ನು ಲಗತ್ತಿಸಲಾಗಿತ್ತು. ಆ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿದೆ' ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

'ನಮೂನೆ 6'ರಲ್ಲಿ ಯಾವುದೇ ಬದಲಾವಣೆಗೆ ತಾನು ಅನುಮೋದನೆ ನೀಡಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ ಕೆಲವೇ ಗಂಟೆಗಳ ನಂತರ, ಆಯೋಗ ಈ ಸ್ಪಷ್ಟನೆ ನೀಡಿದೆ.

'ಬಿಹಾರದಲ್ಲಿ ಎಸ್‌ಐಆರ್‌ಗೆ ಸಂಬಂಧಿಸಿದಂತೆ 2026ರ ಮೇನಲ್ಲಿ ನೀಡಿದ್ದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್, 'ನಮೂನೆ 6'ರ ಘೋಷಣೆಯನ್ನು ಎತ್ತಿಹಿಡಿದಿದೆ' ಎಂದು ಚುನಾವಣಾ ಆಯೋಗವು ಸೆಪ್ಟೆಂಬರ್ 26ರಂದು ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.

ನಮೂನೆ 6ರಲ್ಲಿ ಮಾಡಿದ್ದ ಬದಲಾವಣೆಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು ವಿವೇಕ್‌ ಜೋಶಿ ಅವರು ಆಕ್ಷೇಪ ಎತ್ತಿದ್ದರಿಂದ, ಈ ವಿಚಾರವು ವಿವಾದಕ್ಕೊಳಗಾಗಿತ್ತು. ಅದರ ಬೆನ್ನಲ್ಲೇ, ಎಸ್‌ಐಆರ್ ಅಡಿಯಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸುವವರ ಪೋಷಕರ ವಿವರಗಳನ್ನು ಕೋರುವ ಆ ಘೋಷಣೆಯನ್ನು ಆಯೋಗವು ತನ್ನ ಆನ್‌ಲೈನ್ ಪೋರ್ಟಲ್‌ಗಳಿಂದ ಹಿಂಪಡೆದಿತ್ತು.

'ಕಾನೂನುಬಾಹಿರ ನಿರ್ಧಾರವಿದ್ದರೆ ರದ್ದು'

ಕೇಂದ್ರ ಚುನಾವಣಾ ಆಯೋಗವು ತೆಗೆದುಕೊಂಡಿರುವ ಯಾವುದೇ ನಿರ್ಧಾರವು ಕಾನೂನಿಗೆ ಅನುಗುಣವಾಗಿಲ್ಲ ಎಂಬುದು ಸಾಬೀತಾದರೆ ಅದನ್ನು ರದ್ದುಗೊಳಿಸುವುದಾಗಿ ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ಆದಾಗ್ಯೂ, ಯಾವುದೇ ನಿರ್ಧಾರ ಕೈಗೊಳ್ಳದಂತೆ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ತಡೆಯುವ ಸಂಬಂಧ ಮಧ್ಯಂತರ ಆದೇಶ ಹೊರಡಿಸಲು ನ್ಯಾಯಾಲಯ ನಿರಾಕರಿಸಿತು.

ಜ್ಞಾನೇಶ್‌ ಕುಮಾರ್‌ ಅವರು ಏಕಪಕ್ಷೀಯವಾಗಿ ಹಲವಾರು
ನಿರ್ಧಾರಗಳನ್ನು ತೆಗೆದು ಕೊಂಡಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಆರಂಭಿಸಿತು. ಸಿಇಸಿ ಹುದ್ದೆಯಿಂದ ಕೆಳಗಿಳಿದ ನಂತರವೂ ಅವರಿಗೆ ಕಾನೂನಿನಲ್ಲಿ ನೀಡಿರುವ ವಿಶೇಷ ರಕ್ಷಣೆಯನ್ನು ಪರಿಶೀಲಿಸುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ಹೇಳಿತು.

'ಚುನಾವಣಾ ಆಯೋಗವು ತೆಗೆದುಕೊಂಡಿರುವ ಎಲ್ಲ ನಿರ್ಧಾರಗಳನ್ನೂ ನಾವು ಪರಿಶೀಲಿಸುತ್ತೇವೆ. ಯಾವುದೇ ನಿರ್ಧಾರ ಕಾನೂನಿಗೆ ಅನುಗುಣವಾಗಿ ಇಲ್ಲದಿದ್ದರೆ, ಅದನ್ನು ರದ್ದುಗೊಳಿಸುತ್ತೇವೆ. ನ್ಯಾಯಾಲಯದ ಅಧಿಕಾರ ಏನೆಂಬುದು ನಿಮಗೆ ತಿಳಿದಿದೆ. ಕಾನೂನಿನಲ್ಲಿ ಸಿಇಸಿಗೆ ನೀಡಿರುವಷ್ಟು ರಕ್ಷಣೆಯು ನ್ಯಾಯಮೂರ್ತಿಗಳಿಗೂ ಇಲ್ಲ' ಎಂಬುದನ್ನು ಪೀಠ ಒತ್ತಿ ಹೇಳಿತು.

ಅರ್ಜಿದಾರ ರಾಕೇಶ್ ಕುಮಾರ್ ಸಿಂಗ್ ಅವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ವಿಕಾಶ್ ಸಿಂಗ್, ‌ಜ್ಞಾನೇಶ್‌ ಕುಮಾರ್‌ ಅವರು ಮುಂದೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆಯಲು ಮಧ್ಯಂತರ ಆದೇಶ ಹೊರಡಿಸುವಂತೆ ಪೀಠಕ್ಕೆ ಮನವಿ ಮಾಡಿದರು.

ಮತದಾನದ ಹಕ್ಕಿನ ವಿಷಯದಲ್ಲಿ ಪ್ರತಿಯೊಬ್ಬ ನಾಗರಿಕನೂ ಅಸುರಕ್ಷಿತ ಭಾವನೆ ಹೊಂದಿದ್ದಾನೆ ಎಂದು ಹೇಳಿದ ಅವರು, ಸಿಇಸಿ ಅವರನ್ನು ಅಮಾನತುಗೊಳಿಸುವಂತೆಯೂ ಕೋರಿದರು. ಸಿಇಸಿ ಅವರನ್ನು ಅಮಾನತುಗೊಳಿಸಿದರೆ, ಚುನಾವಣಾ ಆಯೋಗದ ಕಾರ್ಯ ನಿರ್ವಹಣೆಯು ಸ್ಥಗಿತಗೊಳ್ಳುತ್ತದೆ. ಯಾವುದೇ ಆದೇಶವನ್ನು ಹೊರಡಿಸುವ ಮೊದಲು ಸಂಬಂಧಪಟ್ಟವರಿಂದ ಪ್ರತಿಕ್ರಿಯೆ ಪಡೆಯಬೇಕಾಗುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ಕಾಂಗ್ರೆಸ್‌, ಬಿಜೆಪಿ ವಾಕ್ಸಮರ

ಸಿಇಸಿ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್‌ ಜಾರಿಗೊಳಿಸಿರುವ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ವಾಕ್ಸಮರ ನಡೆಸಿವೆ. ಆಯೋಗದ ಕಾರ್ಯವೈಖರಿ ಕುರಿತಾದ 'ಗಂಭೀರ ಸ್ವರೂಪದ ಸಂಗತಿಗಳು ಬಹಿರಂಗಗೊಂಡಿರುವ' ಹಿನ್ನೆಲೆಯಲ್ಲಿ, ಆಯೋಗದ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮರು ಸ್ಥಾಪಿಸಲು ಸುಪ್ರೀಂ ಕೋರ್ಟ್‌ಗೆ ಇದೊಂದು ಉತ್ತಮ ಅವಕಾಶ ಎಂದು ಕಾಂಗ್ರೆಸ್‌ ಹೇಳಿದೆ.

'ಎಸ್‌ಐಆರ್‌ ಪ್ರಕ್ರಿಯೆ ಕಾನೂನುಬಾಹಿರ, ಅವ್ಯವಸ್ಥಿತ ಮತ್ತು ನಿರ್ಲಕ್ಷ್ಯದ ರೀತಿಯಲ್ಲಿ ನಡೆದಿದೆ ಎಂಬ ಗಂಭೀರ ಆರೋಪಗಳು, ಸುಪ್ರೀಂ ಕೋರ್ಟ್‌ನ ಹಾಲಿ ಮತ್ತು ನಿವೃತ್ತ ನ್ಯಾಯಮೂರ್ತಿಗಳಿಂದ ವ್ಯಕ್ತವಾದ ಟೀಕೆಗಳು ಹಾಗೂ ಮತದಾರರ ‍ಪಟ್ಟಿಯಿಂದ ಕೋಟ್ಯಂತರ ಹೆಸರುಗಳನ್ನು ಕೈಬಿಟ್ಟಿರುವ ಕ್ರಮದಿಂದ ಜನರು ಚುನಾವಣಾ ಆಯೋಗದ ಮೇಲಿನ ವಿಶ್ವಾಸ ಕಳೆದುಕೊಂಡಿದ್ದಾರೆ. ಅದನ್ನು ಮರುಸ್ಥಾಪಿಸುವ ಅವಕಾಶ ಲಭಿಸಿದೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ.

ಪೀಠ ಹೇಳಿದ್ದು...

ಕೇವಲ ಪತ್ರಿಕಾ ವರದಿಗಳನ್ನು ಆಧರಿಸಿ ನ್ಯಾಯಾಲಯವು ಆದೇಶ ಹೊರಡಿಸಲು ಸಾಧ್ಯವಿಲ್ಲ. ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ‍ಪಡೆಯಬೇಕಾಗುತ್ತದೆ.

ಚುನಾವಣಾ ಆಯೋಗವು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು.

ಒಂದು ಕಡೆಯ ವಾದವನ್ನು ಮಾತ್ರ ಕೇಳಿ ಏಕಪಕ್ಷೀಯವಾಗಿ ಯಾವುದೇ ಆದೇಶ ಹೊರಡಿಸಲಾಗದು. ಚುನಾವಣಾ ಆಯೋಗವು ತೆಗೆದುಕೊಂಡ ನಿರ್ಧಾರಗಳನ್ನು ಪರಿಶೀಲಿಸಬೇಕಾಗಿದೆ.

ರಾಹುಲ್‌ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ನಮೂನೆ- 6 ಅನ್ನು 'ಅಕ್ರಮವಾಗಿ, ಏಕಪಕ್ಷೀಯವಾಗಿ' ಬದಲಾಯಿಸಿದ್ದಾರೆ ಎಂಬುದು ಈಗ ಸಾಬೀತಾಗಿದೆ.ಸಂಬಿತ್‌ ಪಾತ್ರಾ, ಬಿಜೆಪಿ ವಕ್ತಾರಚುನಾವಣಾ ಆಯೋಗ ಮತ್ತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್ ನೀಡಿರುವುದು, ದೇಶದ ಎಲ್ಲಾ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದಕ್ಕೆ ನಿದರ್ಶನ.ಜೈರಾಮ್‌ ರಮೇಶ್‌, ಎಐಸಿಸಿ ಕಾರ್ಯದರ್ಶಿಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಸೂಚನೆಯ ಮೇರೆಗೆ ಸಿಇಸಿ ಜ್ಞಾನೇಶ್‌ ಕುಮಾರ್‌ ಅವರು ಸಂವಿಧಾನದ ಆಶಯಕ್ಕೆ ದ್ರೋಹ ಬಗೆದಿದ್ದಾರೆ.
Dailyhunt
Disclaimer: This content has not been generated, created or edited by Dailyhunt. Publisher: Prajavani