Dailyhunt Logo
  • Light mode
    Follow system
    Dark mode
    • Play Story
    • App Story
ನಟ ಅಮೀರ್ ಖಾನ್ ಮನಗೆದ್ದ ಬೆಂಗಳೂರಿನ ಗೌರಿ ಯಾರು? ಹಿನ್ನೆಲೆಯೇನು?

ನಟ ಅಮೀರ್ ಖಾನ್ ಮನಗೆದ್ದ ಬೆಂಗಳೂರಿನ ಗೌರಿ ಯಾರು? ಹಿನ್ನೆಲೆಯೇನು?

ಬಾಲಿವುಡ್‌ ನಟ ಅಮೀರ್ ಖಾನ್ ಮತ್ತೆ ಮದುವೆಯಾಗುತ್ತಿದ್ದಾರೆ. ಅದೂ ಮೂರನೇ ಮದುವೆ. ಬೆಂಗಳೂರು ಮೂಲದ ಗೌರಿ ಸ್ಪ್ರಾಟ್‌ ಅವರೊಂದಿಗೆ ಜುಲೈ 5ರಂದು ಮದುವೆಯಾಗುವುದು ಸತ್ಯ ಎಂದು ಸ್ವತಃ ಅಮೀರ್ ಅವರೇ ಮಾಧ್ಯಮಗಳಿಗೆ ಖಚಿತ ಪಡಿಸಿದ್ದಾರೆ.

ಹಾಗಾದರೆ ಈ ಗೌರಿ ಯಾರು, ಬೆಂಗಳೂರಿಗೂ ಅವರಿಗೂ ಏನು ನಂಟು ಎಂದು ನೋಡುವುದಾದರೆ, ಗೌರಿ ಅವರು ಬೆಂಗಳೂರು ಮೂಲದ ಉದ್ಯಮಿ.

ಇವರಿಗೆ ಆರು ವರ್ಷದ ಮಗ ಕೂಡ ಇದ್ದಾನೆ. ಅವರ ಪತಿಯ ಬಗ್ಗೆ ಎಲ್ಲಿಯೂ ಮಾಹಿತಿ ಹಂಚಿಕೊಂಡಿಲ್ಲ.

ಗೌರಿ ಅವರ ತಾಯಿ ರಿಟಾ ಸ್ಪ್ರಾಟ್‌ ಬೆಂಗಳೂರಿನಲ್ಲಿ 'ದಿ ಸ್ಪ್ರಾಟ್ ಹೇರ್ ಸ್ಟುಡಿಯೊ' ಸಲೂನ್ ನಡೆಸುತ್ತಾರೆ. ಅವರು ಪಂಜಾಬಿ-ಐರಿಶ್ ಮೂಲದವರು, ಆದರೆ ಅವರ ತಂದೆ ರಾಬರ್ಟ್ ಸ್ಪ್ರಾಟ್‌ ತಮಿಳು-ಬ್ರಿಟಿಷ್ ಮೂಲದವರು.

ವರದಿಗಳ ಪ್ರಕಾರ, ಗೌರಿ ಲಂಡನ್‌ನ ಕಲಾ ವಿಶ್ವವಿದ್ಯಾಲಯದಲ್ಲಿ ಛಾಯಾಗ್ರಹಣ ಮತ್ತು ಫ್ಯಾಷನ್‌ನಲ್ಲಿ ಪದವಿ ಪಡೆದಿದ್ದಾರೆ.

ಗೌರಿ ಅವರನ್ನು ಮಾಧ್ಯಮಗಳಿಗೆ ಪರಿಚಯಿಸುವ ವೇಳೆ ಅಮೀರ್ ಖಾನ್ ಅವರು, 'ಗೌರಿ ಅವರ ಅಜ್ಜ ಫಿಲಿಪ್ ಸ್ಪ್ರಾಟ್‌ ಬ್ರಿಟಿಷ್ ಮೂಲದವರು. ಆದರೆ ಅವರು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷದ ಸ್ಥಾಪಕರೂ ಹೌದು. ಅವರು ಮೀರತ್ ಪಿತೂರಿ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿದ್ದರು. 1929 ರಲ್ಲಿ ಜೈಲು ವಾಸವನ್ನೂ ಅನುಭವಿಸಿದ್ದರು' ಎಂದು ಮಾಹಿತಿ ನೀಡಿದ್ದರು.

ಗೌರಿ ಮತ್ತು ಅಮೀರ್ ಖಾನ್ ಅವರದ್ದು 20 ವರ್ಷಗಳ ಹಿಂದಿನ ಪರಿಚಯ. ಆದರೆ ಮಧ್ಯೆ ಹಲವು ವರ್ಷ ಸಂಪರ್ಕದಲ್ಲಿ ಇರಲಿಲ್ಲ. ಕೆಲವು ವರ್ಷಗಳ ಹಿಂದೆ ಅಮೀರ್ ಅವರ ಸಹೋದರಿಯೊಬ್ಬರ ಮೂಲಕ ಮತ್ತೆ ಭೇಟಿಯಾಗಿದ್ದರು. ನಂತರ ಇಬ್ಬರೂ ಡೇಟಿಂಗ್‌ನಲ್ಲಿದ್ದರು ಎನ್ನುತ್ತವೆ ವರದಿಗಳು.

ಗೌರಿ ತಮ್ಮ ಸಹೋದರಿ ಶೌನಾ ಸ್ಪ್ರಾಟ್ ಅವರೊಂದಿಗೆ ಫರ್ಹಾನ್ ಅಖ್ತರ್ ಅವರ ಮಾಜಿ ಪತ್ನಿ, ಸೆಲೆಬ್ರಿಟಿ ಕೇಶ ವಿನ್ಯಾಸಕಿ ಅಧುನಾ ಭಬಾನಿ ಅವರ 'ಬಿಬ್ಲಂಟ್ ಸಲೂನ್ಸ್‌'ನಲ್ಲಿ ಪಾಲುದಾರರಾಗಿದ್ದಾರೆ. 2012 ರಲ್ಲಿ, ಗೌರಿ 'ದಿ ಲೆದರ್ ಬೂಟೀಕ್‌'ನಲ್ಲಿ ಸಲಹಾ ವಿನ್ಯಾಸಕಿಯಾಗಿದ್ದರು.

ಬೆಂಗಳೂರಲ್ಲಿ ನೆಲೆಸಿದ್ದ ಗೌರಿ, ಅಮೀರ್ ಜೊತೆಗಿನ ಒಡನಾಟದ ವಿಚಾರ ಬಹಿರಂಗವಾದ ನಂತರ ಮುಂಬೈನಲ್ಲೇ ವಾಸ್ತವ್ಯ ಹೂಡಿದ್ದಾರೆ ಎಂದು 'ಡಿಎನ್‌ಎ' ಸುದ್ದಿ ಸಂಸ್ಥೆ ವರದಿ ತಿಳಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani