ನವದೆಹಲಿ: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಒಂದು ವರ್ಷದವರೆಗೆ ನಟ ದರ್ಶನ್ ಜಾಮೀನು ಪಡೆಯಲು ಅರ್ಹರಲ್ಲ ಎಂದು ಮೇ 15ರಂದು ನೀಡಿದ್ದ ಆದೇಶದ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್ ಪ್ರಕಾರ, ದರ್ಶನ್ ಅರ್ಜಿ ಇತ್ಯರ್ಥವಾಗಿದೆ.
ಆದರೆ, ಅಲ್ಲಿ ಯಾವುದೇ ಲಿಖಿತ ಆದೇಶ ಲಭ್ಯವಿಲ್ಲ.
ಪರಿಶೀಲನೆಯ ಸಮಯದಲ್ಲಿ ರಿಜಿಸ್ಟ್ರಾರ್ ನ್ಯಾಯಾಲಯವು ದರ್ಶನ್ ಅರ್ಜಿಯನ್ನು ವಜಾಗೊಳಿಸಿ, ಮಾರ್ಪಾಡು ಕೋರುವ ನೆಪದಲ್ಲಿ ತೀರ್ಪಿನ ಮರುಪರಿಶೀಲನೆಯನ್ನು ಅರ್ಜಿದಾರರು ಕೋರುತ್ತಿದ್ದಾರೆ ಎಂದು ತಿಳಿಸಿದೆ.
ದರ್ಶನ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದ ನ್ಯಾಯಪೀಠವು, 'ಪ್ರಕರಣದ ಸಾಕ್ಷ್ಯಿಗಳ ವಿಚಾರಣೆಯನ್ನು ವಿಚಾರಣಾ ನ್ಯಾಯಾಲಯವು ಒಂದು ವರ್ಷದೊಳಗೆ ಮುಗಿಸಬೇಕು. ಒಂದು ವೇಳೆ, ಈ ಅವಧಿಯಲ್ಲಿ ವಿಚಾರಣೆ ಪೂರ್ಣಗೊಳ್ಳದಿದ್ದರೆ ಒಂದು ವರ್ಷದ ಬಳಿಕ ದರ್ಶನ್ ಅವರು ಜಾಮೀನಿಗೆ ಅರ್ಜಿ ಸಲ್ಲಿಸಬಹುದು' ಎಂದು ಸ್ಪಷ್ಟಪಡಿಸಿತ್ತು.
60 ಪ್ರಮುಖ ಸಾಕ್ಷಿಗಳ ವಿಚಾರಣೆಯೊಂದಿಗೆ ಪ್ರಾರಂಭಿಸಿ, ದಿನನಿತ್ಯದ ಆಧಾರದ ಮೇಲೆ ವಿಚಾರಣೆ ನಡೆಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಪೀಠ ನಿರ್ದೇಶನ ನೀಡಿತ್ತು. ಒಂದು ವರ್ಷದ ಜಾಮೀನು ನಿಷೇಧದ ಕುರಿತು ಸ್ಪಷ್ಟನೆ ಕೋರಿ ದರ್ಶನ್ ಅರ್ಜಿ ಸಲ್ಲಿಸಿದ್ದರು.
ವಿಚಾರಣೆಯಲ್ಲಿ ಅರ್ಥಪೂರ್ಣ ಪ್ರಗತಿಯ ಕೊರತೆ, ದೀರ್ಘಕಾಲದ ಸೆರೆವಾಸ, ನಿರ್ಣಾಯಕ ಪ್ರಾಸಿಕ್ಯೂಷನ್ ಸಾಕ್ಷ್ಯಗಳ ವಿಚಾರಣೆ ಬಾಕಿ, ವೈದ್ಯಕೀಯ ತುರ್ತುಸ್ಥಿತಿಗಳು, ಮಾನವೀಯ ಕಾರಣಗಳು ಅಥವಾ ಅವರ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ಪರಿಣಾಮ ಬೀರುವ ಸಂದರ್ಭಗಳು ಇದ್ದಲ್ಲಿ ಸೂಕ್ತ ಪರಿಹಾರ ಪಡೆಯಲು ಅರ್ಜಿದಾರರು ಅರ್ಹರು ಎಂಬುದನ್ನು ಸ್ಪಷ್ಟಪಡಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು.
ಸುಪ್ರೀಂ ಕೋರ್ಟ್ 2025ರ ಆಗಸ್ಟ್‌ನಲ್ಲಿ ಜಾಮೀನು ರದ್ದುಗೊಳಿಸಿದ ನಂತರ ದರ್ಶನ್ ಬಂಧನದಲ್ಲಿದ್ದಾರೆ. ನ್ಯಾಯಾಲಯದ ಎಲ್ಲ ನಿರ್ದೇಶನಗಳನ್ನು ಅವರು ಪಾಲಿಸಿದ್ದಾರೆ. ವಿಚಾರಣೆ ವಿಳಂಬಗೊಳಿಸಲು ಅಥವಾ ವಿಚಾರಣೆಗೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸಲು ಪ್ರಯತ್ನಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.

