ಚಿಕ್ಕಬಳ್ಳಾಪುರ: ದೀಪಾವಳಿ ಹಬ್ಬದ ಪ್ರಯುಕ್ತ ಎನ್.ಆರ್.ಎಲ್.ಎಂ (ಸಂಜೀವಿನಿ)ಯೋಜನೆಯಡಿ ಜಿಲ್ಲಾ ಪಂಚಾಯಿತಿಯಿಂದ ನ.6ರಿಂದ 8ರವರೆಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ 'ಸಂಜೀವಿನಿ ಮಾಸಿಕ ಸಂತೆ' ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.
ವೈ. ನವೀನ್ ಭಟ್ ತಿಳಿಸಿದ್ದಾರೆ.
ಸ್ವ ಸಹಾಯ ಗುಂಪುಗಳ ಮಹಿಳಾ ಉದ್ಯಮಗಳನ್ನು ಪ್ರೋತ್ಸಾಹಿಸುವುದರೊಂದಿಗೆ ಅವರ ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಕಲ್ಪಿಸುವ ಹಾಗೂ ಮಹಿಳಾ ಸದಸ್ಯರ ಕುಟುಂಬಗಳ ಜೀವನೋಪಾಯ ವೃದ್ಧಿಸುವ ಉದ್ದೇಶದಿಂದ ಈ ಸಂತೆ ಆಯೋಜಿಸಲಾಗುತ್ತಿದೆ ಎಂದಿದ್ದಾರೆ.
ಮಣ್ಣಿನ ಹಣತೆಗಳು, ಕೆಂಪಕ್ಕಿ, ಗಾಣದ ಎಣ್ಣೆ, ಸಾವಯವ ಬೆಲ್ಲ, ಪೂಜಾ ಸಾಮಗ್ರಿಗಳು, ಗೆಜ್ಜೆ, ನೊಮುದಾರ, ಹಣ್ಣುಗಳು, ಹೂವು, ಸೀರೆ, ಬಟ್ಟೆಗಳು, ಅಲಂಕಾರಿಕ ಎಲ್‌ಇಡಿ ದೀಪಗಳು, ಹಸಿರು ಪಟಾಕಿ ಬಾಕ್ಸ್, ಆಕಾಶಬುಟ್ಟಿ, ಸಿಹಿ ಉತ್ಪನ್ನಗಳು, ಸಿರಿಧಾನ್ಯ ಉತ್ಪನ್ನಗಳು, ದಿನಸಿ ಹಾಗೂ ಮಸಾಲೆ ಪದಾರ್ಥಗಳು, ತರಕಾರಿಗಳು, ರಂಗೋಲಿ ಪುಡಿ, ಹಪ್ಪಳ, ಉಪ್ಪಿನಕಾಯಿ ಹಾಗೂ ಗೃಹೋಪಯೋಗಿ ಮತ್ತು ಕರಕುಶಲ ವಸ್ತುಗಳು ಸೇರಿದಂತೆ ಹಬ್ಬಕ್ಕೆ ಅಗತ್ಯವಾದ ವಿಶೇಷ ಉತ್ಪನ್ನಗಳು ಲಭ್ಯವಿರುತ್ತವೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರ ಉತ್ತಮ ಪ್ರತಿಕ್ರಿಯೆಯಿಂದಾಗಿ 2026-27ನೇ ಸಾಲಿನಲ್ಲಿ ಇದುವರೆಗೆ ನಡೆದಸಂಜೀವಿನಿ ಸಂತೆಗಳಲ್ಲಿ ₹ 115.87 ಲಕ್ಷ ವಹಿವಾಟು ನಡೆದಿದೆ. ವರಮಹಾಲಕ್ಷ್ಮಿ ಹಬ್ಬದ ಸಂತೆಯಲ್ಲಿ ಅತಿ ಹೆಚ್ಚು₹ 37.12 ಲಕ್ಷ ವಹಿವಾಟು ದಾಖಲಾಗಿದೆ. ಸಾರ್ವಜನಿಕರು ಹಾಗೂ ಅಧಿಕಾರಿಗಳು ಕುಟುಂಬ ಸಮೇತ ಸಂತೆಗಳಿಗೆ ಭೇಟಿ ನೀಡಿ, ಹಬ್ಬದ ಅಗತ್ಯ ವಸ್ತುಗಳನ್ನು ಖರೀದಿಸಿ ಮಹಿಳಾ ಉದ್ಯಮಗಳನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದ್ದಾರೆ.
261104-16-589907263

