Dailyhunt Logo
  • Light mode
    Follow system
    Dark mode
    • Play Story
    • App Story
ನೇಪಾಳ ದುರಂತಕ್ಕೆ ಕಾರಣವಾಯಿತೇ ಹಿಮನದಿಗಳ ಕರಗುವಿಕೆ: ವಿಜ್ಞಾನಿಗಳು ಹೇಳುವುದೇನು?

ನೇಪಾಳ ದುರಂತಕ್ಕೆ ಕಾರಣವಾಯಿತೇ ಹಿಮನದಿಗಳ ಕರಗುವಿಕೆ: ವಿಜ್ಞಾನಿಗಳು ಹೇಳುವುದೇನು?

ಠ್ಮಂಡು: '2026ರ ಆಗಸ್ಟ್ 26' ಭೀಕರ ದುರಂತವೊಂದಕ್ಕೆ ನೇಪಾಳ ಸಾಕ್ಷಿಯಾಯಿತು. ಇಲ್ಲಿನ ರಸುವಾ ಜಿಲ್ಲೆ ಮತ್ತು ಟಿಬೆಟ್ ಗಡಿ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸುಮಾರು 392ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 290 ಭಾರತೀಯರು ಸೇರಿದಂತೆ 1,500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.

ಎತ್ತರದ ಹಿಮಪರ್ವತಗಳಲ್ಲಿ ಹಿಮ ಕರಗುವಿಕೆ ನೋಡನೋಡುತ್ತಿದ್ದಂತೆಯೇ ಹೇಗೆ ಬಹುದೊಡ್ಡ ಮಾನವೀಯ ದುರಂತವಾಗಿ ರೂಪಾಂತರಗೊಳ್ಳುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ದುರಂತಕ್ಕೆ ಮುಖ್ಯ ಕಾರಣಗಳೇನು?

ಭೂಕಂಪ ಮತ್ತು ಹಿಮಬಂಡೆ ಕುಸಿತ:

ಆಗಸ್ಟ್ 26ರ ಬೆಳಿಗ್ಗೆ 8:37ಕ್ಕೆ ಟಿಬೆಟ್ ಗಡಿಯಲ್ಲಿ ಅತ್ಯಂತ ಎತ್ತರದಲ್ಲಿದ್ದ ಹಿಮಬಂಡೆಯೊಂದು ಒಮ್ಮೆಲೆ ಕುಸಿಯಿತು. ಇದರ ಪರಿಣಾಮ 5.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ (USGS) ದೃಢಪಡಿಸಿದೆ.

ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಇಂಟಿಗ್ರೇಟೆಡ್ ಮೌಂಟೇನ್ ಡೆವಲಪ್‌ಮೆಂಟ್ (ICIMOD) ಮತ್ತು ಕಠ್ಮಂಡು ವಿಶ್ವವಿದ್ಯಾಲಯದ ಸಂಶೋಧನಾ ತಂಡಗಳು ವರದಿ ಮಾಡಿರುವಂತೆ, 'ಸಮುದ್ರ ಮಟ್ಟದಿಂದ ಸುಮಾರು 5,200 ಮೀಟರ್ ಎತ್ತರದಿಂದ ಬೃಹತ್ ಹಿಮಬಂಡೆಗಳು ಕುಸಿದು 'ಲ್ಹೆಂಡೆ ಖೋಲಾ' ನದಿಗೆ ಬಿದ್ದವು. ನದಿಯ ನೀರು ತಾತ್ಕಾಲಿಕವಾಗಿ ತಡೆಯಲ್ಪಟ್ಟು ಭಾರಿ ಪ್ರಮಾಣದ ನೀರು ನಿಂತಿತು. ನಂತರ ಆ ನೈಸರ್ಗಿಕ ಕಟ್ಟೆ ಒಮ್ಮೆಲೆ ಒಡೆದು ಪ್ರವಾಹದ ರೂಪದಲ್ಲಿ ಹರಿಯಿತು'.

ಈ ದಿಢೀರ್ ಪ್ರವಾಹವು ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳ ಮೂಲಕ ಭೋರ್ಗರೆಯುತ್ತಾ ಹರಿದು ತಿಮುರೆ ಮತ್ತು ಸ್ಯಾಫ್ರುಬೆಸಿಯಂತಹ ಊರುಗಳನ್ನು ಧ್ವಂಸಗೊಳಿಸಿತು. ಘಟನೆಯಲ್ಲಿ ನೂರಾರು ಜನ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಅಲ್ಲದೇ ಅನೇಕ ಜಲವಿದ್ಯುತ್ ಯೋಜನೆಗಳಿಗೂ ಭಾರಿ ಹಾನಿಯಾಗಿದೆ.

ಎತ್ತರದ ಹಿಮಪರ್ವತಗಳಲ್ಲಿ ಅಪಾಯ ಹೆಚ್ಚುತ್ತಿರುವುದು ಏಕೆ?

ವಿಜ್ಞಾನಿಗಳ ಪ್ರಕಾರ, ಹಿಮಾಲಯ ಪ್ರದೇಶಗಳಲ್ಲಿ ತಾಪಮಾನ ಏರಿಕೆಯು ವಿನಾಶವನ್ನು ವೇಗಗೊಳಿಸುತ್ತಿದೆ.

  • ತಾಪಮಾನ ಏರಿಕೆ: ಸಾಮಾನ್ಯ ತಗ್ಗು ಪ್ರದೇಶಗಳಿಗಿಂತ ಪರ್ವತಗಳ ಶಿಖರಗಳಲ್ಲಿ ತಾಪಮಾನವು ಅತ್ಯಂತ ವೇಗವಾಗಿ ಏರುತ್ತಿದೆ. ಇದು ಘಟನೆಗೆ ಮುಖ್ಯ ಕಾರಣ ಎನ್ನಲಾಗಿದೆ.

  • ಮಳೆಯ ಸ್ವರೂಪ ಬದಲಾವಣೆ: ಹಿಂದೆ ದಟ್ಟವಾದ ಹಿಮ ಬೀಳುತ್ತಿದ್ದ ಅತ್ಯಂತ ಎತ್ತರದ ಪ್ರದೇಶಗಳಲ್ಲಿ ಈಗ ಮಳೆ ಬೀಳುತ್ತಿದೆ. ಇದರಿಂದ ಹಿಮವು ಮತ್ತಷ್ಟು ವೇಗವಾಗಿ ಕರಗುತ್ತಿದೆ.

  • ಬಂಡೆಗಳ ಅಸ್ಥಿರತೆ: ಪರ್ವತದ ಕಡಿದಾದ ಬಂಡೆಗಳನ್ನು ಬಿಗಿಯಾಗಿ ಹಿಡಿದಿಟ್ಟಿದ್ದ ಹಿಮದ ಪದರಗಳು ಕರಗುತ್ತಿರುವುದರಿಂದ, ಬಂಡೆಗಳು ಮತ್ತು ಕಲ್ಲುಗಳು ಸುಲಭವಾಗಿ ಕುಸಿಯುತ್ತಿವೆ.

ಹಿಮನದಿಗಳು ದುರಂತವನ್ನು ಸೃಷ್ಟಿಸುತ್ತಿರುವುದು ಹೇಗೆ?

ಹಿಮನದಿಗಳ ಕರಗುವಿಕೆ ದುರಂತವನ್ನು ಹೇಗೆ ಸೃಷ್ಟಿಸುತ್ತಿವೆ ಎಂಬುವುದನ್ನು ವಾಡಿಯಾ ಹಿಮಾಲಯನ್ ಜಿಯಾಲಜಿ ಸಂಸ್ಥೆಯ (WIHG) ಹಿರಿಯ ವಿಜ್ಞಾನಿ ಡಾ. ಮನೀಶ್ ಮೆಹ್ತಾ ಹೀಗೆ ವಿವರಿಸಿದ್ದಾರೆ..

'ಹಿಮನದಿಗಳು ಕರಗಿದಾಗ , ಅವುಗಳ ಅಡಿಯಲ್ಲಿದ್ದ ಅಪಾರ ಪ್ರಮಾಣದ ಕಲ್ಲು ಮತ್ತು ಮಣ್ಣಿನ ತ್ಯಾಜ್ಯ (ಮೊರೈನ್) ಬೆಟ್ಟದ ಇಳಿಜಾರಿನಲ್ಲಿ ಹಾಗೆಯೇ ಉಳಿಯುತ್ತದೆ. ಹೆಚ್ಚುತ್ತಿರುವ ತಾಪಮಾನದಿಂದಾಗಿ ಎತ್ತರದ ಪ್ರದೇಶದಲ್ಲಿ ಹಿಮ ಬೀಳುವ ಜಾಗದಲ್ಲಿ ಮಳೆಯಾಗುತ್ತಿದೆ. ಪರಿಣಾಮವಾಗಿ, ಈ ಮಣ್ಣು-ಕಲ್ಲುಗಳು ಕೆಳಕ್ಕೆ ಜಾರಿ, ನೈಸರ್ಗಿಕ ಕಟ್ಟೆಯಂತಾಗುತ್ತಿವೆ. ಅವುಗಳಲ್ಲಿ ನೀರು ನಿಂತು ಸಣ್ಣ ಸರೋವರಗಳು ಸೃಷ್ಟಿಯಾಗುತ್ತವೆ. ನೀರಿನ ಒತ್ತಡ ಹೆಚ್ಚಾದಾಗ ಈ ಸರೋವರಗಳು ಒಮ್ಮೆಲೆ ಒಡೆದು ತಗ್ಗು ಪ್ರದೇಶಗಳಲ್ಲಿ ಭಾರಿ ವಿನಾಶವನ್ನು ಉಂಟುಮಾಡುತ್ತವೆ' ಎಂದು ವಿವರಿಸಿದ್ದಾರೆ.

ಅತ್ಯಂತ ಅಪಾಯಕಾರಿ ವಲಯಗಳು:

ವಿಜ್ಞಾನಿಗಳ ಪ್ರಕಾರ, ಸಮುದ್ರ ಮಟ್ಟದಿಂದ 2,800 ಮೀಟರ್‌ಗಿಂತ ಎತ್ತರದಲ್ಲಿರುವ ಹಿಮಾಲಯ ಪ್ರದೇಶಗಳು ಅತ್ಯಂತ ಅಪಾಯದ ವಲಯಗಳಾಗಿವೆ.

ಈ ಪ್ರವಾಹವನ್ನು ತಜ್ಞರು 2013 ರ ಕೇದಾರನಾಥ ದುರಂತ ಮತ್ತು 2021 ರ ಉತ್ತರಾಖಂಡದ ಪ್ರವಾಹಕ್ಕೆ ಹೋಲಿಸುತ್ತಿದ್ದಾರೆ. ಪ್ರವಾಹದ ನೀರು ಸಡಿಲವಾದ ಮಣ್ಣು ಮತ್ತು ಬಂಡೆಗಳನ್ನು ತನ್ನೊಂದಿಗೆ ಸೇರಿಸಿಕೊಂಡಾಗ, ಅದು ಬರಿ ನೀರಾಗಿರದೆ ಕೆಸರು-ಬಂಡೆಗಳ ಬೃಹತ್ ರಾಶಿಯಾಗಿ ರೂಪಾಂತರಗೊಳ್ಳುತ್ತದೆ. ಕ್ಷಣಾರ್ಧದಲ್ಲಿ ಅದು ಇಡೀ ಊರುಗಳನ್ನೇ ನಾಶಮಾಡುತ್ತದೆ.

ಹಿಮನದಿಗಳು ವೇಗವಾಗಿ ಕರಗುತ್ತಿರುವುದರಿಂದ, ಪರ್ವತ ಪ್ರದೇಶದ ಕೆಳಭಾಗದ ಜನರನ್ನು ರಕ್ಷಿಸಲು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅತ್ಯಗತ್ಯ ಎನ್ನುತ್ತಾರೆ ವಿಜ್ಞಾನಿಗಳು.

ಆಧಾರ: ಎನ್‌ಡಿಟಿವಿ

Dailyhunt
Disclaimer: This content has not been generated, created or edited by Dailyhunt. Publisher: Prajavani