ನೇಪಾಳ ಪ್ರವಾಹದ ಸಂದರ್ಭ ಶಾಲೆಯೊಂದರ ಮುಖ್ಯ ಶಿಕ್ಷಕರ ಸಮಯಪ್ರಜ್ಞೆ ಸಾವಿರಾರು ಮಕ್ಕಳ ಜೀವ ಉಳಿಸಿದೆ.
ಹೌದು.. ನೇಪಾಳದ ತ್ರಿಶೂಲಿ ಕಣಿವೆಯಲ್ಲಿರುವ ತ್ರಿಭುವನ್ ತ್ರಿಶೂಲಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಜೇಂದ್ರ ದಾವಡಿ ಅವರಿಗೆ ಬುಧವಾರ(ಆ.26) ಬೆಳಿಗ್ಗೆ 9:20ರ ಸುಮಾರಿಗೆ ಸ್ನೇಹಿತರಿಂದ ಎಚ್ಚರಿಕೆಯ ಸಂದೇಶ ಬಂದಿತ್ತು.
ಹಠಾತ್ ಪ್ರವಾಹದಿಂದ ನದಿಯು ಉಕ್ಕೇರಿ ಸಮೀಪದ ಹಳ್ಳಿಗಳನ್ನು ಮುಳುಗಿಸಿದೆ ಎಂಬ ಮಾಹಿತಿ ಸಿಕ್ಕಿತ್ತು.
ಒಂದೆಡೆ ಮೂರು ಅಂತಸ್ತಿನ ಕಟ್ಟಡದಲ್ಲಿ 1,643 ಮಕ್ಕಳು.. ಮತ್ತೊಂಡೆದೆ ಹೆಚ್ಚಾಗುತ್ತಿರುವ ಪ್ರವಾಹ ಸೇತುವೆ, ರಸ್ತೆಗಳನ್ನು ನುಂಗುತ್ತಾ ಬರುತ್ತಿದೆ. ಕೆಲವೇ ನಿಮಿಷಗಳಲ್ಲಿ ಶಾಲೆಗೂ ನುಗ್ಗುವ ಆತಂಕ ಇಂಗ್ಲಿಷ್ ಶಿಕ್ಷಕರೂ ಆಗಿರುವ 47 ವರ್ಷದ ದಾವಡಿಗೆ ಕಾಡಿತ್ತು. ಮಕ್ಕಳ ಸುರಕ್ಷತೆಯು ನನ್ನ ನಿರ್ಧಾರದ ಮೇಲೆ ನಿಂತಿದೆ ಎಂದು ಯೋಚಿಸಿದರು.
ಆದರೂ, ಕಾಂಕ್ರಿಟ್‌ನಿಂದ ನಿರ್ಮಿಸಿದ ಕಟ್ಟಡ, ನದಿಯಿಂದ ಸುಮಾರು 60 ಮೀಟರ್ ಎತ್ತರದಲ್ಲಿದೆ. ಹಳ್ಳಿಯನ್ನು ಸಂಪರ್ಕಿಸುವ ಉಕ್ಕಿನ ಸೇತುವೆ ಶಾಲೆಯ ಮಟ್ಟಕ್ಕೇ ಇದೆ. ಹಾಗಾಗಿ, ಅಷ್ಟೇನೂ ಸಮಸ್ಯೆ ಆಗುವುದಿಲ್ಲ ಎಂದು ಭಾವಿಸಿದ್ದರು. ಆದರೆ, ರಿಸ್ಕ್ ತೆಗೆದುಕೊಳ್ಳುವುದು ಬೇಡ ಎಂದುಕೊಂಡ ಶಿಕ್ಷಕ, ಓಡಿಬಂದು ಶಾಲೆಯ ಘಂಟೆ ಬಾರಿಸಿದರು. ಕೂಡಲೇ ತರಗತಿ ತೆರವು ಮಾಡುವಂತೆ ಎಲ್ಲ ಶಿಕ್ಷಕರಿಗೂ ಸೂಚಿಸಿದರು.
ಶಾಲಾ ಬಸ್ ಚಾಲಕರಿಗೆ ಕರೆ ಮಾಡಿ, ತಕ್ಷಣ ತೆರಳುವಂತೆ ಸೂಚಿಸಿದರು. ಮಕ್ಕಳಿಗೆ ಅದಾಗಲೇ ಅಪಾಯದ ಅರಿವಾಗಿತ್ತು. ಓಡಿ ಓಡಿ ಎಂಬ ಮುಖ್ಯ ಶಿಕ್ಷಕರ ಧ್ವನಿ ಆಲಿಸಿದ ಮಕ್ಕಳು ನಡಿಗೆಯಲ್ಲೇ ಸೇತುವೆ ದಾಟಿದರು. ಅವರನ್ನು ಹಿಂಬಾಲಿಸಿದ ಶಿಕ್ಷಕರು, ಮಕ್ಕಳ ಸುರಕ್ಷತೆಗೆ ಕಟಿಬದ್ಧರಾಗಿದ್ದರು. ಇದಾದ ಕೆಲವೇ ಕ್ಷಣಗಳಲ್ಲಿ ಪ್ರವಾಹವು ಶಾಲೆಯನ್ನು ಕೊಚ್ಚಿಕೊಂಡು ಹೋಯಿತು. ದೂರದ ಮರದಡಿ ನಿಂತಿದ್ದ ಮಕ್ಕಳು ಮೂಕಪ್ರೇಕ್ಷಕರಾಗಿ ದುರಂತವನ್ನು ವೀಕ್ಷಿಸಿದರು. ತಮ್ಮನ್ನು ರಕ್ಷಿಸಿದ ಶಿಕ್ಷಕನಿಗೆ ಕೃತಜ್ಞತೆ ಸಲ್ಲಿಸಿದರು.
ಶಿಕ್ಷಕ ದಾವಡಿ ಅವರ ಸಮಯಪ್ರಜ್ಞೆ 1,643 ಮಕ್ಕಳು ಹಾಗೂ ಬೋಧಕ ಸಿಬ್ಬಂದಿಯ ಪ್ರಾಣ ಉಳಿಸಿತ್ತು. ಆದರೆ, 32 ವರ್ಷದ ಶಿಕ್ಷಕ ಸ್ಯಾಂಟೋಸ್ ಪರಿಯಾರ್, ಉಪಹಾರ ತಯಾರಿಸಲು ನದಿಯ ಪಕ್ಕದ ಬಾಡಿಗೆ ಮನೆಗೆ ತೆರಳಿದ್ದರಿಂದ ಪ್ರವಾಹದಲ್ಲಿ ಕೊಚ್ಚಿಹೋಗಿದ್ದರು. ಶಾಲೆಯ ಸಹಾಯಕ ಸಿಬ್ಬಂದಿ ಸುಲ್ತಾನ್ ಲಾಮಾ ಎಂಬವರು ಸಹ ಶಾಲೆಯ ಬಾಗಿಲು ಮುಚ್ಚಲು ಬಂದು ಪ್ರವಾಹಕ್ಕೆ ಸಿಲುಕಿ ಪ್ರಾಣ ತೆತ್ತಿದ್ದರು.
ಹಿಮ ಬಂಡೆ ಕುಸಿತದಿಂದ ಭೋಟೆ ಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಉಂಟಾದ ಪ್ರವಾಹದಿಂದ 700ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 3 ಸಾವಿರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.

