Dailyhunt Logo
  • Light mode
    Follow system
    Dark mode
    • Play Story
    • App Story
ನೇಪಾಳ  ಪ್ರವಾಹ: ಆಸ್ಪತ್ರೆಯಲ್ಲಿ ಪ್ರೀತಿಪಾತ್ರರಿಗಾಗಿ ಹುಡುಕಾಟ

ನೇಪಾಳ ಪ್ರವಾಹ: ಆಸ್ಪತ್ರೆಯಲ್ಲಿ ಪ್ರೀತಿಪಾತ್ರರಿಗಾಗಿ ಹುಡುಕಾಟ

ಕಠ್ಮಂಡು: ನೇಪಾಳದ ರಾಜಧಾನಿ ಕಠ್ಮಂಡುವಿನ ತ್ರಿಭುವನ್ ಯೂನಿವರ್ಸಿಟಿ ಟೀಚಿಂಗ್‌ ಆಸ್ಪತ್ರೆಯ ಆವರಣ ಪ್ರವೇಶಿಸುತ್ತಿದ್ದಂತೆಯೇ, ಅಲ್ಲಿನ ವಾತಾವರಣದಲ್ಲಿ ಮಿಶ್ರ ಭಾವನೆ ಎದ್ದು ಕಾಣುತ್ತದೆ. ಗೊಂದಲ, ಹತಾಶೆ, ಭರವಸೆ ಮತ್ತು ಮನಸ್ಸನ್ನು ಭಾರವಾಗಿಸುವಂತಹ ನೋವಿನ ಭಾವನೆಗಳ ಮಿಶ್ರಣವದು.

ಬುಧವಾರ ಸಂಭವಿಸಿದ ಪ್ರವಾಹದಲ್ಲಿ ನಾಪತ್ತೆಯಾದವರ ಮತ್ತು ಮೃತಪಟ್ಟವರ ಕುಟುಂಬಗಳ ಸದಸ್ಯರು ಹಾಗೂ ಸಂಬಂಧಿಕರು ಆಸ್ಪತ್ರೆ ಬಳಿ ನೆರೆದಿದ್ದಾರೆ. ಪ್ರವಾಹಬಾಧಿತ ಪ್ರದೇಶಗಳಿಂದ ರಕ್ಷಿಸಲಾದ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಹೆಸರುಗಳ ಪಟ್ಟಿಯತ್ತ ಅವರು ಕಾತರದ ಕಣ್ಣುಗಳಿಂದ ನೋಡುತ್ತಾರೆ. ಅವರಲ್ಲಿ ಕೆಲವರು ಐಸಿಯುನಲ್ಲಿ ಇದ್ದಾರೆ. ಕೆಲವರು ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಇನ್ನೂ ಕೆಲವರು ಮೃತಪಟ್ಟಿದ್ದಾರೆ.

ಪುರುಷರು, ಮಹಿಳೆಯರು, ಮಕ್ಕಳು ಹಾಗೂ ಕಂದಮ್ಮಗಳ ಹೆಸರುಗಳು ‌ಪಟ್ಟಿಯಲ್ಲಿವೆ. ಕಾಣೆಯಾದ ತಮ್ಮ ಪ್ರೀತಿಪಾತ್ರರ ಸುಳಿವು ಸಿಗಬಹುದೆಂಬ ಆಶಾಭಾವನೆಯೊಂದಿಗೆ ಅವರು ಆಸ್ಪತ್ರೆಯ ಆವರಣದಲ್ಲಿ ಅಲೆದಾಡುತ್ತಿದ್ದಾರೆ. ಹಲವು ಮಂದಿ ನಾಪತ್ತೆಯಾಗಿರುವ ತಮ್ಮ ಸಂಬಂಧಿಕರ ವಿವರಗಳಿರುವ ಪೋಸ್ಟರ್‌ಗಳನ್ನು ಸಮೀಪದ ಗೋಡೆಗೆ ಅಂಟಿಸಿದ್ದಾರೆ.

31 ವರ್ಷದ ವಿಮಲಾ ಥಾಪಾ ಅವರು ಆಸ್ಪತ್ರೆಯೊಂದರಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ನೇಪಾಳ-ಚೀನಾ ಗಡಿಯ ಸಮೀಪವಿರುವ ತಿಮುರೆಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ತಮ್ಮ ಪತಿ ಮೋಹನ್ ರೊಕಾಯ ಅವರೊಂದಿಗೆ ವಿಮಲಾ ಮಂಗಳವಾರ ರಾತ್ರಿ ಕೊನೆಯದಾಗಿ ಮಾತನಾಡಿದ್ದರು. ರಾತ್ರಿ ಪಾಳಿಯ ಕೆಲಸಕ್ಕಾಗಿ ತಾವು ಆಸ್ಪತ್ರೆಗೆ ಸುರಕ್ಷಿತವಾಗಿ ತಲುಪಿರುವುದಾಗಿ ಅವರು ಪತಿಗೆ ತಿಳಿಸಿದ್ದರು. ಆದರೆ, ಅದು ಪತಿಯೊಂದಿಗಿನ ಕೊನೆಯ ಮಾತುಕತೆಯಾಗಬಹುದು ಎಂದು ಅವರು ಅಂದುಕೊಂಡಿರಲಿಲ್ಲ.

ಪ್ರತಿದಿನ ಬೆಳಿಗ್ಗೆ ಶಾಲೆಗೆ ಹೋಗುವ ಮುನ್ನ ಮೋಹನ್ ಅವರು ತಮ್ಮ 12 ವರ್ಷದ ಮಗನಿಗೆ ಕರೆ ಮಾಡುತ್ತಿದ್ದರು. ಆದರೆ, ಬುಧವಾರ ಫೋನ್ ಕರೆ ಬರಲೇ ಇಲ್ಲ. 'ಅವರ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ನನ್ನ ಪತಿ ಎಲ್ಲೋ ಸುರಕ್ಷಿತವಾಗಿದ್ದಾರೆ ಎಂದು ನಂಬುತ್ತೇನೆ. ಅವರು ವಾಪಸ್ ಬರುತ್ತಾರೆ ಎಂಬ ಭರವಸೆ ನನಗಿದೆ' ಎಂದು ಗದ್ಗರಿತರಾಗಿ ನುಡಿದರು. ಅಲ್ಲೇ ಇದ್ದ ಮಗ ಅಸಹಾಯಕನಾಗಿ ಅಮ್ಮನ ಮುಖವನ್ನೇ ದಿಟ್ಟಿಸಿ ನೋಡುತ್ತಿದ್ದ.

ಆಸ್ಪತ್ರೆಯ ಪ್ರವೇಶದ್ವಾರದಲ್ಲಿ ತಮಗೆ ಉತ್ತರ ಸಿಗದಿದ್ದಾಗ, ಜನರು ಶವಾಗಾರದತ್ತ ಮುಖ ಮಾಡುತ್ತಾರೆ. ಶವಾಗಾರದ ಬಳಿಯ ಗೋಡೆಯಲ್ಲಿ ಅಂಟಿಸಿರುವ ಮೃತರ ಛಾಯಾಚಿತ್ರಗಳನ್ನು ನೋಡುವುದೇ ಅತ್ಯಂತ ನೋವಿನ ಸಂಗತಿಯಾಗಿದೆ. ಶವಾಗಾರದಲ್ಲಿರುವ ಹಲವು ಮೃತದೇಹಗಳು ವಿರೂಪಗೊಂಡಿವೆ. ಹೀಗಾಗಿ, ಮೃತರ ಗುರುತು ಪತ್ತೆಹಚ್ಚುವುದು ಅಧಿಕಾರಿಗಳಿಗೂ ದೊಡ್ಡ ಸವಾಲಾಗಿದೆ. ಕೆಲವರ ಗುರುತನ್ನು ಪತ್ತೆಹಚ್ಚಲು ಡಿಎನ್‌ಎ ಪರೀಕ್ಷೆಯ ಅಗತ್ಯ ಬೀಳಬಹುದು.

ಯಾವುದೇ ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಅತ್ಯಂತ ನಿರ್ಣಾಯಕವಾದ ಮೊದಲ 72 ತಾಸುಗಳು ಈಗಾಗಲೇ ಕಳೆದಿವೆ. ನಾಪತ್ತೆಯಾಗಿರುವ ತಮ್ಮ ಪ್ರೀತಿಪಾತ್ರರನ್ನು ಹುಡುಕುತ್ತಾ ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ, ಆಸ್ಪತ್ರೆಗಳಿಂದ ಶವಾಗಾರಗಳಿಗೆ ಅಲೆದಾಡುತ್ತಿದ್ದಾರೆ. ಆದರೆ, ಎಡೆಬಿಡದೆ ಸುರಿಯುತ್ತಿರುವ ಮಳೆ, ಮೊಬೈಲ್ ಹಾಗೂ ಇಂಟರ್ನೆಟ್ ಸಂಪರ್ಕದಲ್ಲಿನ ವ್ಯತ್ಯಯ ಮತ್ತು ಅನೇಕ ಕಡೆಗಳಲ್ಲಿ ವಾಹನ ಸಂಚಾರಕ್ಕೆ ಅಯೋಗ್ಯವಾದ ರಸ್ತೆಗಳು ಅವರಿಗೆ ಸವಾಲಾಗಿ ಪರಿಣಮಿಸಿವೆ.

ರಾಯಭಾರ ಕಚೇರಿಯತ್ತ ಹೆಜ್ಜೆ

ಖಾಸಗಿ ಪ್ರವಾಸ ಆಯೋಜಕರ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡಿದ್ದ ಭಾರತೀಯ ಪ್ರಜೆಗಳು ಮತ್ತು ಅನಿವಾಸಿ ಭಾರತೀಯರ ಕುಟುಂಬದವರು ಹಾಗೂ ಸ್ನೇಹಿತರು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮುಂದೆ ಜಮಾಯಿಸುತ್ತಿದ್ದಾರೆ. ಅಮೆರಿಕದ ಟೆಕ್ಸಾಸ್‌ನಲ್ಲಿ ನೆಲಸಿರುವ ದೀಪಕ್ ಮತ್ತು ಮಧು ಅಹುಜಾ ದಂಪತಿ 'ಟ್ರೆಕ್ಕರ್ಸ್ ಸೊಸೈಟೀಸ್' ಎಂಬ ಪ್ರವಾಸ ಆಯೋಜಕ ಸಂಸ್ಥೆಯ ಗುಂಪಿನೊಂದಿಗೆ ಈ ಯಾತ್ರೆಗೆ ತೆರಳಿದ್ದರು. ದೆಹಲಿ ಮಾರ್ಗವಾಗಿ ಕಠ್ಮಂಡುವಿಗೆ ಮರಳುತ್ತಿದ್ದ ಅವರು ನಾಪತ್ತೆಯಾಗಿದ್ದಾರೆ. ಟಿಬೆಟ್‌ನ ಗಿರಾಂಗ್ ವಲಸೆ ತಪಾಸಣಾ ಕೇಂದ್ರದಲ್ಲಿ ಅವರ ಮೊಬೈಲ್ ಫೋನ್‌ನ ಕೊನೆಯ ಲೊಕೇಶನ್ ಪತ್ತೆಯಾಗಿದೆ. ದೀಪಕ್ ಅವರ ಸಹೋದರ ಮನೋಜ್ ಗುಪ್ತಾ ಅವರು ಗುರುವಾರ ಉತ್ತರ ಪ್ರದೇಶದ ಕಾನ್ಪುರದಿಂದ ಕಠ್ಮಂಡುವಿಗೆ ಬಂದಿದ್ದು ರಾಯಭಾರ ಕಚೇರಿಯ ನೆರವು ಕೋರಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani