ಕಠ್ಮಂಡು/ನವದೆಹಲಿ: ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಟಿಬೆಟ್‌ನ ಪರ್ವತ ಪ್ರದೇಶದಲ್ಲಿ ಸಂಭವಿಸಿದ ಭೂಕಂಪ ಕಾರಣವಾಗಿರಬಹುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಅಂಗಸಂಸ್ಥೆ ರಾಷ್ಟ್ರೀಯ ದೂರ ಸಂವೇದಿ ಕೇಂದ್ರ (ಎನ್‌ಆರ್‌ಎಸ್‌ಸಿ) ನಡೆಸಿದ ಉಪಗ್ರಹ ಚಿತ್ರಗಳ ಪ್ರಾಥಮಿಕ ಅಧ್ಯಯನ ತಿಳಿಸಿದೆ.
ಎನ್‌ಆರ್‌ಎಸ್‌ಸಿ ವರದಿಯ ಪ್ರಕಾರ, ಟಿಬೆಟ್‌ನ ಪರ್ವತ ಪ್ರದೇಶದಲ್ಲಿ ಸಂಭವಿಸಿದ 4.9 ತೀವ್ರತೆಯ ಭೂಕಂಪಕ್ಕೆ 'ಸರ್ಕ್ ಗ್ಲೇಸಿಯರ್' (ಒಂದು ವಿಧದ ನೀರ್ಗಲ್ಲು) ಸ್ಟೋಟಗೊಂಡಿದ್ದು, ಭಾರಿ ಪ್ರಮಾಣದ ಹಿಮಬಂಡೆಗಳು ನದಿಯ ಕಾಲುವೆಯೊಳಗೆ ಬಿದ್ದಿವೆ.
ಈ ಹಿಮಬಂಡೆಗಳ ರಾಶಿಯು ತಾತ್ಕಾಲಿಕವಾಗಿ ನದಿಯ ಹರಿವನ್ನು ತಡೆದಿದೆ. ಆದರೆ ಕೆಲವೇ ಸಮಯದಲ್ಲಿ ಆ ಹಿಮಬಂಡೆಗಳು ಕರಗಿದ್ದು, ಅಪಾರ ಪ್ರಮಾಣದ ನೀರು ನದಿಗೆ ಸೇರಿದೆ. ಅದರ ಜೊತೆಗೆ ಪರ್ವತದಿಂದ ಕುಸಿದ ಮಣ್ಣು, ಇತರ ಅವಶೇಷಗಳು ನದಿ ಉಕ್ಕಿ ಹರಿಯಲು ಕಾರಣವಾಗಿವೆ.
ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎಸ್‌ಸಿಎಸ್) ಕೂಡ ರಸುವಾಗೆ ಹೊಂದಿಕೊಂಡ ಪ್ರದೇಶದ 10 ಕಿಲೋಮೀಟರ್ ಆಳದಲ್ಲಿಯೂ 4.9 ತೀವ್ರತೆಯ ಭೂಕಂಪ ಸಂಭವಿಸಿರುವುದನ್ನು ದಾಖಲಿಸಿದೆ.
ಉಪಗ್ರಹ ಚಿತ್ರ ಹೇಳವುದೇನು?
ಪ್ರವಾಹದ ಪರಿಣಾಮವನ್ನು ಅಂದಾಜಿಸಲು ಎನ್‌ಆರ್‌ಎಸ್‌ಸಿ ವಿಜ್ಞಾನಿಗಳು ಆಗಸ್ಟ್ 24ರಂದು ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಸೆಂಟಿನೆಲ್-2 ಉಪಗ್ರಹ ಸೆರೆಹಿಡಿದ ಚಿತ್ರಗಳನ್ನು, ಆಗಸ್ಟ್ 26ರಂದು ಇಸ್ರೊದ ರಿಸೋರ್ಸ್ಯಾಟ್-2ಎ ಉಪಗ್ರಹದ ಚಿತ್ರಗಳೊಂದಿಗೆ ಹೋಲಿಕೆ ಮಾಡಿದ್ದಾರೆ. ಜೊತೆಗೆ, 2026ರ ಏಪ್ರಿಲ್ 4ರಂದು ಸೆರೆಹಿಡಿದ ಚಿತ್ರಗಳನ್ನೂ ಪರಿಶೀಲಿಸಲಾಗಿದೆ.
ಈ ವಿಶ್ಲೇಷಣೆಯಲ್ಲಿ ನದಿಯ ಹರಿವಿನ ಮಾರ್ಗದಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬಂದಿವೆ. ಹಲವೆಡೆ ಮಣ್ಣು, ಬಂಡೆಗಳು ಹಾಗೂ ಇತರ ಅವಶೇಷಗಳು ದೊಡ್ಡ ಪ್ರಮಾಣದಲ್ಲಿ ಸಂಗ್ರಹವಾಗಿರುವುದು ಪತ್ತೆಯಾಗಿದೆ. ಪ್ರವಾಹದ ಪರಿಣಾಮವಾಗಿ ಕೆಲವು ಪ್ರದೇಶಗಳಲ್ಲಿ ಭೂಪ್ರದೇಶದ ಸ್ವರೂಪವೇ ಬದಲಾಗಿರುವುದು ಉಪಗ್ರಹ ಚಿತ್ರಗಳಿಂದ ಸ್ಪಷ್ಟವಾಗಿದೆ ಎಂದು ಎನ್‌ಆರ್‌ಎಸ್‌ಸಿ ತಿಳಿಸಿದೆ.

