ಶ್ರೀಹರಿಕೋಟಾ: ಮುಂದಿನ ಪೀಳಿಗೆಯ ನ್ಯಾವಿಗೇಷನ್ ಉಪಗ್ರಹ 'ಎನ್‌ವಿಎಸ್-03' ಅನ್ನು ನಿಗದಿತ ಕಕ್ಷೆಗೆ ಸೇರಿಸುವಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೊ) ಯಶಸ್ವಿಯಾಗಿದೆ.
2,232 ಕೆ.ಜಿ ತೂಕದ ಈ ಉಪಗ್ರಹವನ್ನು ಜಿಎಸ್‌ಎಲ್‌ವಿ-ಎಫ್18 ರಾಕೆಟ್, ಭೂಸ್ಥಿರ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿತು.
ಶುಕ್ರವಾರ ರಾತ್ರಿ 11.51ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹವನ್ನು ಯಶಸ್ವಿಯಾಗಿ ಉಡ್ಡಯನ ಮಾಡಲಾಗಿದೆ ಎಂದು ಇಸ್ರೊ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೊ ಅಧ್ಯಕ್ಷ ವಿ. ನಾರಾಯಣನ್, 'ನಾವಿಕ್ ವ್ಯವಸ್ಥೆಯು 'ಒಂದು ರಾಷ್ಟ್ರ, ಒಂದು ಸಮಯ' (One Nation, One Time) ಯೋಜನೆಯ ಪ್ರಮುಖ ಭಾಗವಾಗಿದೆ' ಎಂದು ತಿಳಿಸಿದ್ದಾರೆ.
ಎನ್‌ವಿಎಸ್-03 ಉಪಗ್ರಹದ ಯಶಸ್ವಿಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಇಸ್ರೊ ವಿಜ್ಞಾನಿಗಳು ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

