ಸರಕಾರ ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದಕ್ಕೆ ಸಿಹಿ ಹಂಚಿ ಸಂಭ್ರಮಿಸಿದ ಸುದ್ದಿ ಓದಿದ್ದೇವೆ. ಆದರೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ ಗ್ರಾಮದ ಮಿತ್ರ ಜಗದೀಶ್ ಸಂಕನಗೌಡರ ಫೋನ್ ಮಾಡಿದ್ದರು. ಬರದ ಮಧ್ಯೆ ಜಲದ ವಿಷಯ ಇದು,ವಿಶೇಷವಿದೆ.
"ಸರ್ ನಾವು ನಾಲ್ಕೈದು ಮಂದಿ ನಮ್ಮ ಹಿರೇಕೆರೆ ಹತ್ರ ಬಂದ್ವಿ.... ನಿಮ್ ನೆಂಪು ಆತು...
ಕೆರೆ ಎಲ್ಲಾ ಮೂರು ಭಾಗವೂ ಭರ್ತಿ ಆಗೆದ್ರಿ.... ಇನ್ನೂ ಹೆಚ್ಚಿನ ನೀರು ಒಳ ಹೋಗಲಾಕ ಆಗದೇ ನಿಂತೆತ್ರಿ..." ಅಂದರು. ನಿನ್ನೆ ಸುರಿದ ಮಳೆಯಿಂದ ಕೆರೆ ಬಹುಬೇಗ ಭರ್ತಿಯಾಗಿದೆ. ವಾರ್ಷಿಕ 500ಮಿಲಿ ಮೀಟರ್ ಮಳೆ ಕೂಡಾ ಸುರಿಯದ ಈ ನೆಲೆಯಲ್ಲಿ ಕೆರೆ ತುಂಬಿದ್ದು ನನಗಂತೂ ನಮ್ಮೂರ ಕೆರೆ ನೀರು ತುಂಬಿದ ಸಂಭ್ರಮವಾಯಿತು.
ಊರ ಜನ ಸೇರಿ ನೂರಾರು ಎಕರೆ ಹಿರೇಕೆರೆ ಹೂಳೆತ್ತಲು 2018ರಲ್ಲಿ ನಿರ್ಧಾರ ಮಾಡಿದಾಗ ಹಣ ಇರಲಿಲ್ಲ. ಏನೇ ಆಗಲಿ ಎಂದು ಬಸವಜಯಂತಿ ಪುಣ್ಯದ ದಿನ ಕೆಲಸ ಶುರುವಾಯಿತು.
ಒಂದು ಟ್ರಾಕ್ಟರ್ ಹೂಳಿಗೆ ₹75 ನಿಗದಿ ಮಾಡಿ ರೈತರಿಗೆ ಹೊಲಕ್ಕೆ ಫಲವತ್ತಾದ ಮಣ್ಣು ಒಯ್ಯಲು ಜಾಗೃತಿ ಮೂಡಿಸಿದರು. ನರೇಗಲ್ ನೆಲ ಜಲ ಸಂರಕ್ಷಣಾ ಸಮಿತಿ ಹಾಗೂ ಗ್ರಾಮಸ್ಥರರೆಲ್ಲರ ಸಹಕಾರದಿಂದ ಕಾಯಕ ಶುರುವಾಯಿತು.
ದಿನಕ್ಕೆ 300 ರಿಂದ 350 ಟ್ರ್ಯಾಕ್ಟರ್ ಮಣ್ಣು ಸಾಗಣೆ ಸಾಧ್ಯವಾಯಿತು. ರೈತರು ಹಣ ನೀಡಿ ಹೂಳು ಒಯ್ದ ಸರಳ ತಂತ್ರದಲ್ಲಿ ಮಹತ್ವದ ಕೆಲಸ ನಡೆಯಿತು.
2019ರ ಹೊತ್ತಿಗೆ ಪುನಃ ಹೀಗೆ ಜನರ ಪ್ರಯತ್ನದಿಂದ ಯಾವ ಸರಕಾರದ ನೆರವು ಇಲ್ಲದೇ ನೂರಾರು ವರ್ಷಗಳಿಂದ ಹೂಳು ತುಂಬಿ ಹಾಳಾಗಿದ್ದ ಕೆರೆಗೆ ಮರು ಜೀವ ಬಂದಿತು. ಇಂದು 60-70 ಎಕರೆ ವಿಶಾಲ ಕೆರೆಯಲ್ಲಿ ಇಂದು 20ಅಡಿ ನೀರು ತುಂಬಿದೆ.
ನರೇಗಲ್ ಅಂದ್ರೆ ಈ ಕೆರೆಯ ಕಾರಣಕ್ಕೆ ನನಗೆ ಊರಿನ ಹಾಗೇ ಕೆರೆ ಜಾಗೃತಿಗೆ ನಾನೊಂದು ನಿಮಿತ್ತ ಮಾತ್ರ. ಊರಿನ ನೀರಿಗಾಗಿ ಏನಾದರೂ ಮಾಡಬೇಕೆಂಬ ಜನರ ಮಣ್ಣಿನ ಪ್ರೀತಿಯಿಂದ ಬರದ ಸೀಮೆಯಲ್ಲಿ ನೀರು ನಗುತ್ತಿದೆ.
ಕೊಪ್ಪಳ, ಬಾದಾಮಿ ಪ್ರದೇಶಕ್ಕೆ ನಾನು ಪಯಣ ಹೊರಟಾಗ ನರೇಗಲ್ ಊರಿನ ಮಿತ್ರರು ಯಾವತ್ತೂ ಬಿಳಿ ಜೋಳದ ಬಿಸಿ ಬಿಸಿ ರೊಟ್ಟಿ ಊಟ ಮಾಡಿಸಿಯೇ ಅಕ್ಕರೆ ಆತಿಥ್ಯ ನೀಡುತ್ತಾರೆ. ಕೆರೆಗಳ ಪುನರುಜ್ಜೀವನ ನಡೆದು ನಮ್ಮ ಬಯಲು ಸೀಮೆಯ ಹಳ್ಳಿ ಬದುಕು ಹಸಿರಾಗಲಿ ಎಂದು ಆಶಿಸೋಣ.

