ಚೆನ್ನೈ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಗೆ ಎಂಎನ್‌ಎಂ ಮುಖ್ಯಸ್ಥ ಹಾಗೂ ನಟ ಕಮಲ ಹಾಸನ್ ಸೇರಿದಂತೆ ಸಿನಿಮಾ ನಟ-ನಟಿಯರು ಗುರುವಾರ ಬೆಂಬಲ ಸೂಚಿಸಿದ್ದಾರೆ.
ದೇಶದ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರ ನೀಡುವ ಬದಲು ಅವರು ಲಾಠಿ ಏಟು ಮತ್ತು ಬ್ಯಾರಿಕೇಡ್‌ಗಳನ್ನು ಎದುರಿಸುವಂಥಾದಾಗಲೇ 'ದೇಶ ಸೋತಿದೆ' ಎಂದು ಕಮಲ ಹಾಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಎಕ್ಸ್'ನಲ್ಲಿ ಈ ಕುರಿತಂತೆ ಪೋಸ್ಟ್ ಹಂಚಿಕೊಂಡಿರುವ ಅವರು, 'ಒಂದು ಮಗು ಅತ್ತಾಗಲೇ ನಾವು ಅದರ ನೋವನ್ನು ಆಲಿಸಬೇಕಿತ್ತು. ಆದರೆ, ಹಲವಾರು ಮಕ್ಕಳು ಸಾಯುವವರೆಗೂ ಕಾಯುತ್ತಾ ಕುಳಿತೆವು' ಎಂದಿದ್ದಾರೆ.
ದೇಶದ ಶಿಕ್ಷಣ ವ್ಯವಸ್ಥೆಯ ಬಗ್ಗೆ ಕಿಡಿಕಾರಿ, 'ಕಲಿಕೆಯನ್ನು ತರಬೇತಿಯನ್ನಾಗಿ ಬದಲಿಸಲಾಗಿದೆ. ಕುತೂಹಲವನ್ನು ಆತಂಕ ನುಂಗಿಹಾಕಿದೆ. ಅರ್ಹತೆಯ ಎದುರು ಅಪರಾಧ ಮೇಲುಗೈ ಸಾಧಿಸುವ ಮೂಲಕ ವ್ಯವಸ್ಥೆಯೇ ಕೊಳೆತುಹೋಗಿದೆ' ಎಂದಿದ್ದಾರೆ.
ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಸೊನಮ್ ವಾಂಗ್ಚೂಕ್ ಅವರಿಗೆ ಮನವಿ ಮಾಡಿರುವ ಕಮಲ್, 'ರಾಷ್ಟ್ರದ ಮುಂದಿನ ನಡೆಗೆ ನಿಮ್ಮ ಅಗತ್ಯವಿದೆ. ದಯವಿಟ್ಟು ಉಪವಾಸ ನಿಲ್ಲಿಸಿ' ಎಂದಿದ್ದಾರೆ. ಜತೆಗೆ ದೇಶದ ಮಕ್ಕಳಿಗೂ ಸಲಹೆ ನೀಡಿ, 'ಮಕ್ಕಳೇ ನೀವು ನಿಮ್ಮ ಕರ್ತವ್ಯ ಮಾಡಿದ್ದೀರಿ, ಈಗ ದೇಶ ತನ್ನ ಕರ್ತವ್ಯ ನಿರ್ವಹಿಸುವ ಸಮಯ' ಎಂದಿದ್ದಾರೆ.
ಸಲ್ಮಾನ್ ಖಾನ್, ಆಲಿಯಾ ಭಟ್, ಸೋನು ಸೂದ್, ಹುಮಾ ಖುರೇಷಿ, ದುಲ್ಕರ್ ಸಲ್ಮಾನ್, ದಿಲ್ಜೀತ್ ದೊಸಾಂಝ್, ದಿಯಾ ಮಿರ್ಜಾ, ಸ್ವರಾ ಭಾಸ್ಕರ್, ಜೆನಿಲಿಯಾ ಸೇರಿದಂತೆ ಹಲವು ತಾರೆಗಳು ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.
- ಆಲಿಯಾ ಭಟ್, ಬಾಲಿವುಡ್ ನಟಿ ಪ್ರತಿಭಟನೆಯಲ್ಲಿ ನಿಂತಿರುವ ಪ್ರತಿ ವಿದ್ಯಾರ್ಥಿಯ ಹಿಂದೆಯೂ ಒಂದು ಕನಸು ಒಂದು ಕುಟುಂಬದ ಭರವಸೆ ಹಲವು ತ್ಯಾಗಗಳ ಹಾದಿ ಇದೆ. ವಿದ್ಯಾರ್ಥಿಗಳ ಪರಿಸ್ಥಿತಿ ನೋಡಿ ಮನ ನೊಂದಿದೆ - ಸಲ್ಮಾನ್ ಖಾನ್, ಬಾಲಿವುಡ್ ನಟಪ್ರಶ್ನೆಪತ್ರಿಕೆ ಸೋರಿಕೆ ಎಂಬುದು ಗಂಭೀರ ವಿಚಾರ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ವ್ಯವಸ್ಥೆಗಾಗಿ ಹೋರಾಟಕ್ಕೆ ಇಳಿದಿದ್ದಾರೆ. ಈ ವಿಚಾರವನ್ನು ರಾಜಕೀಯವಾಗಿ ಹೈಜಾಕ್ ಮಾಡುವ ಅಗತ್ಯವಿಲ್ಲ. ಸರ್ಕಾರ ವಿದ್ಯಾರ್ಥಿಗಳಿಗೆ ಬೆಂಬಲ ನೀಡುತ್ತದೆ ಎಂಬ ಭರವಸೆ ಇದೆಹಾಲಿವುಡ್ ನಟ ಜಾನ್ ಕ್ಯಾಸೆಕ್ ಬೆಂಬಲ
ಖ್ಯಾತ ಹಾಲಿವುಡ್ ನಟ ಜಾನ್ ಕ್ಯಾಸೆಕ್ ಅವರು ಸಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಗುರುವಾರ ಬೆಂಬಲ ಸೂಚಿಸಿದ್ದಾರೆ.
ವಿದ್ಯಾರ್ಥಿಗಳ ಮೇಲೆ ಪೊಲೀಸರ ಬಲ ಪ್ರಯೋಗವನ್ನು ಖಂಡಿಸಿ ಖ್ಯಾತ ಲೇಖಕಿ ಅರುಂಧತಿ ರಾಯ್ ಅವರು ಬರೆದಿರುವ ಅಂಕಣವನ್ನು 'ಎಕ್ಸ್'ನಲ್ಲಿ ಹಂಚಿಕೊಂಡಿರುವ ಜಾನ್ 'ನನ್ನ ಜಿರಳೆ ಸ್ನೇಹಿತರು ಬರೆದಿರುವ ಉತ್ತಮ ಸುದ್ದಿ ಇದು' ಎಂದು ಬರೆದುಕೊಂಡಿದ್ದಾರೆ.
ಜಾನ್ ಭಾರತದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆಯೂ 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆಗೂ ಜಾನ್ ಬೆಂಬಲ ನೀಡಿದ್ದರು. 2020-21ರಲ್ಲಿ ನಡೆದ ರೈತ ಪ್ರತಿಭಟನೆ ವೇಳೆ ಧ್ವನಿ ಎತ್ತಿದ ಅಂತರರಾಷ್ಟ್ರೀಯ ಸೆಲೆಬ್ರಿಟಿಗಳ ಪೈಕಿ ಜಾನ್ ಕೂಡ ಒಬ್ಬರಾಗಿದ್ದರು.

